ಬೆಂಗಳೂರು: ನಗರದ ಕೆನರಾ ಬ್ಯಾಂಕ್ ಗಾಂಧೀನಗರದ ಸಹ ಪ್ರಧಾನ ಕಾರ್ಯಾಲಯದಲ್ಲಿ ಕನ್ನಡ ಬಳಗದ ಸದಸ್ಯರು ಕನ್ನಡ ರಾಜ್ಯೋತ್ಸವ ಸುವರ್ಣ ಸಂಭ್ರಮವನ್ನು ವಿಭಿನ್ನವಾಗಿ ಆಚರಣೆ ಮಾಡಿದರು. ಸರ್ವೇಸಾಮಾನ್ಯವಾಗಿ ರಾಜ್ಯದ ಎಲ್ಲೆಡೆ ರಾಜ್ಯೋತ್ಸವದ ಅಂಗವಾಗಿ ನಡೆಯಸುವ ಚಟುವಟಿಕೆಗಳು ಕನ್ನಡಿಗರಿಗಷ್ಟೇ ಸೀಮಿತವಾಗಿರುತ್ತವೆ.
ಆದರೆ ಬೆಂಗಳೂರಿನ ಕೆನರಾ ಬ್ಯಾಂಕ್ ಕನ್ನಡ ಬಳಗದ ಸದಸ್ಯರು ರಾಜ್ಯೋತ್ಸವವನ್ನು ಕನ್ನಡೇತರರಿಗೆ ಕರ್ನಾಟಕ ರಾಜ್ಯದ ಕುರಿತಾದ ರಸಪ್ರಶ್ನೆ ಸ್ಪರ್ಧೆ ನಡೆಸುವ ಮೂಲಕ ಆಚರಿಸಿದ್ದು ವಿಶೇಷವಾಗಿ ಕಂಡಿತು. ದಿನಾಂಕ 08.11.2023 ರ ಸಂಜೆ 5 ರಿಂದ 7 ಗಂಟೆಯವರೆಗೆ ಜರುಗಿದ ಸ್ಪರ್ಧೆಯಲ್ಲಿ ಒಟ್ಟು 19 ತಂಡಗಳು ಭಾಗವಹಿಸಿದ್ದವು.
ಪ್ರತೀ ತಂಡದಲ್ಲಿ ಮೂರು ಸದಸ್ಯರು ಭಾಗಿಯಾಗಿದ್ದರು. ಇವರಲ್ಲಿ ಬಹುತೇಕರು ಉತ್ತರ ಭಾರತೀಯರು ಮತ್ತು ದಕ್ಷಿಣ ಭಾರತದ ಇತರ ರಾಜ್ಯದವರಾಗಿದ್ದರು.ಭಾಗವಹಿಸುವ ಮೊದಲು ಬಹಳಷ್ಟು ಅನ್ಯ ಭಾಷಿಕರಿಗೆ ಸ್ಫರ್ಧೆಯ ಕುರಿತು ಅಳುಕು ಆತಂಕವಿತ್ತು. ಆದರೆ 35 ಪ್ರಶ್ನೆಗಳಿದ್ದ ಪ್ರಶ್ನಾವಳಿ ಸಾಗಿದಂತೆ ಭಾಗವಹಿಸಿದ ಸ್ಪರ್ಧಿಗಳು ಬಹಳವಾಗಿ ಈ ಮಾಲಿಕೆಯನ್ನು ಮೆಚ್ಚಿಕೊಂಡರು.
ಕನ್ನಡ ನೆಲದ, ನುಡಿಯ ಅರಿವು ಇರದ ಇತರ ರಾಜ್ಯದ ಬ್ಯಾಂಕ್ ನೌಕರರು ಕರ್ನಾಟಕದಲ್ಲಿ ಸೇವೆ ಸಲ್ಲಿಸಲು ಬಂದ ಕೆಲವಾರು ತಿಂಗಳುಗಳಲ್ಲಿ, ಅವರು ಗ್ರಹಿಸಿರಬಹುದಾದ ಕನ್ನಡ ನೆಲದ ವಿಷಯಗಳನ್ನೇ ಕೇಂದ್ರವಾಗಿಟ್ಟುಕೊಂಡು ರಸಪ್ರಶ್ನೆಗಳನ್ನು ಸಿದ್ಧಪಡಿಸಲಾಗಿತ್ತು.
ಶ್ರೀಯುತ ವೆಂಕಟೇಶ ಶೇಷಾದ್ರಿಯವರು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟಿದ್ದರು. ಶ್ರೀಯುತ ಶ್ರೀಕಾಂತ ಪತ್ರೆಮರ ರವರ ನೇತೃತ್ವದಲ್ಲಿ ಶ್ರೀಮತಿ ಮಮತಾ, ಶ್ರೀಯುತ ಲೋಕೇಶ್, ಶ್ರೀ ವಿನಯ ನಿರವಾಣಿ, ಶ್ರೀ ಸುನಿಲ್ ಮುಂತಾದವರು ರಾಜ್ಯೋತ್ಸವದ ಸ್ಪರ್ಧೆಗಳನ್ನು ಮತ್ತು ಕಾರ್ಯಕ್ರಮದ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಭಾಗವಹಿಸಿದ ಕನ್ನಡೇತರರಲ್ಲಿ ಕೆಲವರು ತಮ್ಮ ಮುಕ್ತ ಅಭಿಪ್ರಾಯಗಳನ್ನು ತಿಳಿಸುತ್ತಾ ಸಮೃದ್ಧ ಕರ್ನಾಟಕದಲ್ಲಿ ಇತರರನ್ನು ಸಹೃದಯತೆಯಿಂದ ನಡೆಸಿಕೊಳ್ಳುವ ಸಂಸ್ಕಾರಕ್ಕೆ ಅನ್ವರ್ಥವಾಗಿ ಈ ರಸಪ್ರಶ್ನೆ ಕಾರ್ಯಕ್ರಮ ನಡೆದಿದೆ ಎಂದು ಪ್ರಶಂಸಿಸಿದರು.
ಹೊರ ರಾಜ್ಯದ ನೌಕರರನ್ನು ಅನ್ಯರೆಂದು ಭಾವಿಸದೆ, ತಮ್ಮ ಜೊತೆ ಸಮೀಕರಿಸಿಕೊಂಡು ಒಳಗೊಳಿಸಿಕೊಂಡ ವಿಶಾಲ ಮನೋಭಾವವನ್ನು ಮುಕ್ತವಾಗಿ ಮತ್ತೆ ಕೆಲವು ಸ್ಪರ್ಧಾರ್ಥಿಗಳು ಗುರುತಿಸಿದರು.ರಾಜ್ಯೋತ್ಸವ ಆಚರಣೆಯು ಕೇವಲ ಕೆಲ ಸ್ಪರ್ಧೆ, ಕಾರ್ಯಕ್ರಮಗಳಿಗೆ, ದಿನಗಳಿಗೆ ಸೀಮಿತವಾಗಬಾರದೆಂಬ ಉದ್ದೇಶದಿಂದ ಕನ್ನಡ ಬಳಗವು ತಿಂಗಳು ಪೂರ್ತಿ ನಿತ್ಯೋತ್ಸವದ ರೀತಿಯಲ್ಲಿ ಇನ್ನೂ ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.
ನವೆಂಬರ್ ಒಂದನೇ ತಾರೀಖು ಕನ್ನಡ ಧ್ವಜಾರೋಹಣ ಮಾಡಿ ಸಹಪ್ರಧಾನ ಕಾರ್ಯಾಲಯದ ಎಲ್ಲ ನೌಕರರಿಗೆ ಸಿಹಿ ವಿತರಣೆ ಮಾಡಲಾಯಿತು. ಸಿಬ್ಬಂದಿಗೆ ರಂಗೋಲಿ ಸ್ಪರ್ಧೆ, ಕನ್ನಡಿಗರಿಗೆ ರಸ ಪ್ರಶ್ನೆ ಸ್ಪರ್ಧೆ, ಇನ್ನಿತರ ಸಾಂಸ್ಕೃತಿಕ ಚಟುವಟಿಕೆಳನ್ನು ಆಯೋಜನೆ ಮಾಡಿರುವುದಾಗಿ ಸಹಾಯಕ ಮಹಾ ಪ್ರಬಂಧಕರಾದ ಶ್ರೀ ಎಮ್.ಪಿ. ಪ್ರವೀಣ್ ತಿಳಿಸಿದರು.
ಪುಷ್ಪ ರಂಗೋಲಿಯೊಂದಿಗೆ ಜಿಲ್ಲೆಯೊಂದರ ಪರಿಚಯವನ್ನು ದಿನಕ್ಕೊಂದರಂತೆ ಭವನದ ನೆಲಮಹಡಿಯ ಪ್ರವೇಶ ದ್ವಾರದಲ್ಲಿ ನವೆಂಬರ್ ತಿಂಗಳು ಪೂರ್ತಿ ಮಾಡುವ ವಿನೂತನ ಆಚರಣೆಯನ್ನು ಸಾರ್ವಜನಿಕರು ಗಮನಿಸ ಬಹುದಾಗಿದೆ. ದಿನಾಂಕ 16.11.2023 ರಂದು ಹಮ್ಮಿಕೊಂಡಿರುವ ಸುವರ್ಣ ಸಂಭ್ರಮದ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡುವುದಾಗಿಯೂ ಮತ್ತು ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಸರಾಂತ ಗಾಯಕರಾದ ಗುರುರಾಜ ಹೊಸಕೋಟೆ ಮತ್ತು ಶಶಿಧರ ಕೋಟೆಯವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಉಪಮಹಾ ಪ್ರಬಂಧಕರಾದ ಶ್ರೀಯುತ ಬಿ. ಪಾರ್ಶ್ವನಾಥ್ ಮಾಹಿತಿ ನೀಡಿದರು.