2024ರ ಜನವರಿ 12ಕ್ಕೆ ತೆರೆಗಪ್ಪಳಿಸಲು ಸಜ್ಜಾಗಿರುವ ಬಹುನಿರೀಕ್ಷಿತ ‘ಮೇರಿ ಕ್ರಿಸ್ಮಸ್’ ಸಿನಿಮಾದ ಟ್ರೇಲರ್ ನಾಳೆ ಅನಾವರಣ ಗೊಳ್ಳಲಿದೆ.2023 – ಪ್ರೇಕ್ಷಕರು ಮತ್ತು ಭಾರತೀಯ ಚಿತ್ರರಂಗಕ್ಕೆ ಲಕ್ಕಿ ವರ್ಷ ಎಂದೇ ಹೇಳಬಹುದು. ಹಲವು ಉತ್ತಮ ಸಿನಿಮಾಗಳನ್ನು ನೀಡಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಯಶಸ್ವಿ ಆಗಿದೆ.
ಈ ಹಿನ್ನೆಲೆ ಸಿನಿಪ್ರಿಯರು ಮುಂದಿನ ಬಹುನಿರೀಕ್ಷಿತ ಚಿತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಬಿಡುಗಡೆಗೆ ಸಜ್ಜಾಗಿರುವ ಸಿನಿಮಾಗಳ ಬಗ್ಗೆ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಬಾಲಿವುಡ್ ಬಹುಬೇಡಿಕೆಯ ನಟಿ ಕತ್ರಿನಾ ಕೈಫ್ ಮತ್ತು ಸೌತ್ ಸೂಪರ್ ಸ್ಟಾರ್ ವಿಜಯ್ ಸೇತುಪತಿ ತೆರೆಹಂಚಿಕೊಂಡಿರುವ ‘ಮೇರಿ ಕ್ರಿಸ್ಮಸ್’ ಕೂಡ ಇದೆ. ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಸದ್ಯದಲ್ಲೇ ಟ್ರೇಲರ್ ಅನಾವರಣಗೊಳ್ಳಲಿದೆ ಎಂಬ ಸುಳಿವನ್ನು ಚಿತ್ರ ನಿರ್ಮಾಪಕರು ನೀಡಿದ್ದಾರೆ.
ಮೇರಿ ಕ್ರಿಸ್ಮಸ್ ನಿರ್ಮಾಪಕರು ಟ್ರೇಲರ್ ಬಿಡುಗಡೆ ದಿನಾಂಕವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಶ್ರೀರಾಮ್ ರಾಘವನ್ ಆಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ವಿಜಯ್ ಸೇತುಪತಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದ ಅಧಿಕೃತ ಟ್ರೇಲರ್ ಡಿಸೆಂಬರ್ 20ರಂದು (ಬುಧವಾರ) ಅನಾವರಣಗೊಳ್ಳಲಿದೆ ಎಂದು ಚಿತ್ರ ತಯಾರಕರು ಬರೆದುಕೊಂಡಿದ್ದಾರೆ. ಜಾನಿ ಗದ್ದಾರ್, ಬದ್ಲಾಪುರ್ ಮತ್ತು ಅಂಧಾಧುನ್ನಂತಹ ಸಿನಿಮಾ ನಿರ್ದೇಶಕರ ಮತ್ತೊಂದು ಕಥೆಯೇ ‘ಮೇರಿ ಕ್ರಿಸ್ಮಸ್’. ವಿಭಿನ್ನ ಪೋಷಕ ಪಾತ್ರಗಳೊಂದಿಗೆ ಎರಡು ಭಾಷೆಗಳಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಹಿಂದಿ ಆವೃತ್ತಿಯಲ್ಲಿ ಸಂಜಯ್ ಕಪೂರ್, ವಿನಯ್ ಪಾಠಕ್, ಪ್ರತಿಮಾ ಕಣ್ಣನ್ ಮತ್ತು ಟಿನು ಆನಂದ್ ನಟಿಸಿದ್ದಾರೆ. ತಮಿಳು ಆವೃತ್ತಿಯಲ್ಲಿ ರಾಧಿಕಾ ಶರತ್ಕುಮಾರ್, ಷಣ್ಮುಗರಾಜ, ಕೆವಿನ್ ಜೈ ಬಾಬು ಮತ್ತು ರಾಜೇಶ್ ವಿಲಿಯಮ್ಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಬಾಲ ಕಲಾವಿದೆ ಪರಿ ಅವರನ್ನು ಕೂಡ ಪರಿಚಯಿಸಲಾಗಿದೆ. ಅಲ್ಲದೇ ಅಶ್ವಿನಿ ಕಲ್ಸೇಕರ್ ಮತ್ತು ರಾಧಿಕಾ ಆಪ್ಟೆ ಅವರು ಸಹ ಅತ್ಯಾಕರ್ಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಮೇರಿ ಕ್ರಿಸ್ಮಸ್’ ಮುಂದಿನ ಜನವರಿ 12 ರಂದು ಥಿಯೇಟರ್ಗಳಲ್ಲಿ ತೆರೆಕಾಣಲಿದೆ.
ಇದಕ್ಕೂ ಮುನ್ನ ಮೇರಿ ಕ್ರಿಸ್ಮಸ್ ಸಿನಿಮಾವನ್ನು 2023 ಡಿಸೆಂಬರ್ 8 ರಂದು ಬಿಡುಗಡೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದ್ರೆ ಈ ತಿಂಗಳು ಪೂರ್ತಿ ಬಹುನಿರೀಕ್ಷಿತ ಸಿನಿಮಾಗಳು ಸದ್ದು ಮಾಡುತ್ತಿವೆ. ಬಾಕ್ಸ್ ಆಫೀಸ್ ಪೈಪೋಟಿಯ ಬಿಸಿಯಿಂದ ತಪ್ಪಿಸಿಕೊಳ್ಳುವ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಬದಲಾಯಿಸಿತ್ತು. ಮುಂದಿನ ತಿಂಗಳು ತೆರೆಕಾಣಲು ಸಜ್ಜಾಗಿರುವ ಈ ಚಿತ್ರದ ಬಗ್ಗೆ ಸಿನಿಪ್ರಿಯರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.