ಆ ನೀರು ನೋಡಲು ಅತ್ಯಂತ ಶುದ್ಧವಾಗಿ, ತಿಳಿಯಾಗಿ ಕಾಣುತ್ತಿತ್ತು… ಆದರೆ ಅಷ್ಟು ಮಾತ್ರ ಸಾಕಾಗುವುದಿಲ್ಲ ಎಂಬುದನ್ನು ಆಕೆ ಅರಿಯಲಿಲ್ಲ. ಅದು ಆಕೆ ಮಾಡಿದ ಅತಿ ದೊಡ್ಡ ಪ್ರಮಾದ. ದೂರ ವಿದೇಶದಲ್ಲಿ ನೆಲೆಸಿದ್ದ ಆ ಬಾಲಕಿ ತನ್ನ ಪಾಲಕರೊಂದಿಗೆ ತನ್ನ ಕುಟುಂಬದ ಹಿರಿಯರನ್ನು ಭೇಟಿಯಾಗಲು ಭಾರತಕ್ಕೆ ಬಂದಿದ್ದಳು. 12 ವರ್ಷದ ಆಕೆ ಆ ದಿನ ನೀರು ಕುಡಿಯಲು ಲೋಟದಲ್ಲಿ ನೀರನ್ನು ತುಂಬಿಕೊAಡಾಗ ಅದು ಆಕೆಗೆ ಶುದ್ಧವಾಗಿಯೇ ಕಾಣಿಸುತ್ತಿತ್ತು ಅಂತೆಯೇ ಯಾವುದೇ ಯೋಚನೆ ಇಲ್ಲದೆ ಆಕೆ ಅತ್ಯಂತ ನಿರಾತಂಕವಾಗಿ ಆ ನೀರನ್ನು ಕುಡಿದಳು. ಕೆಲವೇ ನಿಮಿಷಗಳಲ್ಲಿ ಆಕೆಗೆ ತಾನು ಮಾಡಿದ ತಪ್ಪಿನ ಅರಿವಾಯಿತು… ಆ ನೀರು ಕುಡಿಯುವಷ್ಟು ಶುದ್ಧವಾದ ನೀರಾಗಿರಲಿಲ್ಲ. ನೋಡಲು ತಿಳಿಯಾಗಿ ಕಾಣುವ ಆ ನೀರು ಅತ್ಯಂತ ಕಲುಷಿತವಾಗಿದ್ದು ದೇಹವನ್ನು ಹಿಂಡಿ ಹಿಪ್ಪೆ ಮಾಡುವಂತ ನೋವುಗಳನ್ನು ದೇಹದ ಸಂದುಗಳಲ್ಲಿ ಉಂಟು ಮಾಡುವ ಹಾಗೂ ವಿಪರೀತ ಜ್ವರದಿಂದ ಬಳಲುವಂತೆ ಮಾಡುವ ಕರುಳಿನಲ್ಲಿ ಹೊಟ್ಟೆ ನೋವಿನಿಂದ ಉಂಟಾಗುವ ನುಲಿತವನ್ನು ಆಕೆ ಅನುಭವಿಸಬೇಕಾಗುತ್ತದೆ ಎಂಬ ಭಯ ಆಕೆಯನ್ನು ಆವರಿಸುತ್ತಿತ್ತು.ಆದರೆ ಆ ಭಯ ಆಕೆಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುವ ಮುನ್ನವೇ ಆಕೆಯ ಅಜ್ಜಿ ಒಂದು ಕಪ್ ಚಹಾ ಮಾಡಿಕೊಟ್ಟರು. ಆದರೆ ಅದು ಕೇವಲ ಚಹಾ ಆಗಿರಲಿಲ್ಲ. ಹಲವಾರು ತಲೆಮಾರುಗಳಿಂದ ಹರಿದು ಬಂದ ವೈಜ್ಞಾನಿಕ ಔಷಧಿಯಾಗಿತ್ತು. ವಿವಿಧ ಮಸಾಲೆ ಸಾಮಗ್ರಿಗಳ ಸರಿಯಾದ ಮಿಶ್ರಣ ಮಾಡಿ ತಯಾರಿಸಿ ನೀರಿನಲ್ಲಿ ಕುದಿಸಿ ತಯಾರಿಸಿದ ಪೇಯವಾಗಿತ್ತು. ಅದನ್ನು ಕುಡಿದರೆ ಯಾವುದೇ ರೀತಿಯ ತೊಂದರೆಗಳು ಕಾಣುವುದಿಲ್ಲ ಎಂಬ ಭರವಸೆಯನ್ನು ಅಜ್ಜಿ ನೀಡಿದರು. ಅಜ್ಜಿಯ ಮಾತಿಗೆ ಒಪ್ಪಿ ಆ ಪೇಯವನ್ನು ಕವಿತಾ ಕುಡಿದಳಾದರೂ ಅದರಿಂದ ತನಗೆ ಉಂಟಾಗಬಹುದಾದ ತೊಂದರೆ ಕಡಿಮೆಯಾಗಬಹುದು ಎಂದು ಆಕೆಗೆ ಅನ್ನಿಸಲಿಲ್ಲ. ಪ್ರಾಚೀನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧ ಇಂದಿನ ಆಧುನಿಕ ಯುಗದ ತೊಂದರೆಗಳಿಗೆ ಪರಿಹಾರ ನೀಡಲು ಸಾಧ್ಯವೇ ?….ಉಹೂಂ ! ಖಂಡಿತವಾಗಿಯೂ ಇಲ್ಲ ಎಂಬುದು ಆಕೆಯ ಭಾವವಾಗಿತ್ತು…. ಆಧುನಿಕ ಔಷಧಿಯನ್ನು ತೆಗೆದುಕೊಂಡರೆ ಮಾತ್ರ ಗುಣವಾಗುತ್ತದೆ ಎಂದೇ ಆಕೆ ಇಲ್ಲಿಯವರೆಗೂ ನಂಬಿದಳು. ಈ ಎಲ್ಲ ನಂಬಿಕೆಗಳ ಹೊರತಾಗಿಯೂ ಕೂಡ ಆಕೆ ಯಾವುದೇ ಆರೋಗ್ಯ ತೊಂದರೆಗೆ ಸಿಲುಕಲಿಲ್ಲ.
ಕೇವಲ ಆ ದಿನ ಮಾತ್ರವಲ್ಲ ಆ ನೀರಿನಿಂದ ಮಾತ್ರವಲ್ಲ… ಆಕೆಗೆ ಯಾವುದೇ ಆರೋಗ್ಯದ ತೊಂದರೆಗಳ ಲಕ್ಷಣಗಳು ಕೂಡ ಕಂಡು ಬರಲಿಲ್ಲ…. ಆದರೆ ಆಕೆಯ ಮನದಾಳದಲ್ಲಿ ಒಂದು ಅತಿ ದೊಡ್ಡ ಚಿಂತನಾಲಹರಿಯನ್ನು ಅದು ಹುಟ್ಟು ಹಾಕಿದ್ದು ಕಲುಷಿತವಾದ ಈ ನೀರನ್ನು ಕುಡಿದರೂ ತೊಂದರೆಗೆ ಆಗದಂತೆ ಈ ಔಷಧೀಯ ಸತ್ವಗಳ ಉತ್ಪನ್ನಗಳು ನಮ್ಮನ್ನು ರಕ್ಷಿಸುತ್ತವೆ ಎಂದಾದರೆ ಅವುಗಳನ್ನು ನಮ್ಮ ಆಹಾರದಲ್ಲಿ ಬಳಸಿದರೆ ಇನ್ನಷ್ಟು ಆರೋಗ್ಯದ ಲಾಭವನ್ನು ಪಡೆಯಬಹುದು ಎಂಬ ಆಲೋಚನೆ ಆಕೆಯನ್ನು ಇನ್ನಿಲ್ಲದಂತೆ ಕಾಡಿತು. ಇದರ ಪರಿಣಾಮವಾಗಿ ಮುಂದೆ ಜಾಗತಿಕ ಆಹಾರ ವ್ಯವಸ್ಥೆಯ ಚಿತ್ರಣವೇ ಬದಲಾಯಿತು ಅಂದರೆ ನಂಬಲೇಬೇಕು.ಮರಳಿ ತನ್ನ ಪಾಲಕರೊಂದಿಗೆ ಮೇರಿ ಲ್ಯಾಂಡ್ ಗೆ ಹೋದ ಕವಿತಾ ತನ್ನ ಮನೆಯ ಪುಟ್ಟ ಗ್ಯಾರೇಜನ್ನು ಪ್ರಯೋಗಾಲಯವಾಗಿ ಮಾರ್ಪಡಿಸಿದಳು. ತನ್ನ ಅಜ್ಜಿ ತನಗೆ ನೀಡಿದ ಮಸಾಲೆ ಪುಡಿ, ಮಸಾಲೆ ಪದಾರ್ಥಗಳನ್ನು ಹಿಡಿದಿಟ್ಟ ಕೊಳದ ನೀರಿನಲ್ಲಿ ಹಾಕಿ ಪರೀಕ್ಷಿಸಲು ಆರಂಭಿಸಿದಳು… ಮುಂದೆ ಏನಾಗುತ್ತದೆ ಎಂಬುದನ್ನು ನಿರಂತರವಾಗಿ ಗಮನವಿಟ್ಟು ನೋಡುತ್ತಿದ್ದಳು. ಆಕೆಯ ಈ ಕೆಲಸವನ್ನು ತುಸು ಅಚ್ಚರಿಯಿಂದಲೇ ವೀಕ್ಷಿಸುತ್ತಿದ್ದ ನೆರೆಹೊರೆಯವರು ಆಕೆ ಈ ಪದಾರ್ಥಗಳನ್ನು ಹಾಳು ಮಾಡಿದಳು ಕಳೆದುಕೊಂಡಳು ಎಂದೇ ಭಾವಿಸಿದರು. ಆದರೆ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದ ಈ ಪುಟ್ಟ ಬಾಲಕಿ ತನ್ನ ಸುತ್ತಲೂ ದೊರೆಯುತ್ತಿದ್ದ ಕೊಳೆತ ಸ್ಟ್ರಾಬೆರಿ ಹಣ್ಣುಗಳ ಕೊಳೆಯುವಿಕೆಯ ಪ್ರಮಾಣವನ್ನು ಪರೀಕ್ಷಿಸಿ ಪ್ರತಿದಿನ ಅದನ್ನು ದಾಖಲು ಮಾಡುತ್ತಿದ್ದಳು ಆದರೆ ಆಕೆಗೆ ಬೇರೊಂದು ವಿಷಯದಲ್ಲಿ ಕೊಂಚ ಅರಿವು ಮೂಡತೊಡಗಿತ್ತು. ಪ್ರತಿ ವರ್ಷವೂ ಆ ಭಾಗದಲ್ಲಿ ಬೆಳೆಯುತ್ತಿದ್ದ ತಿನ್ನಲು ಯೋಗ್ಯವಾದ ಆಹಾರ ಪದಾರ್ಥಗಳಲ್ಲಿನ ಕಾಲು ಭಾಗದಷ್ಟು ಪದಾರ್ಥಗಳು ಯಾರಾದರೂ ತಿನ್ನುವ ಮುಂಚೆಯೇ ಕೊಳೆತು ಹೋಗುತ್ತಿದ್ದವು. ಅವುಗಳನ್ನು ಬೆಳೆಯಲು ವ್ಯಯಿಸಿದ ಲಕ್ಷಾಂತರ ಹಣ ವ್ಯರ್ಥವಾಗುತ್ತಿತ್ತು. ಅತ್ಯುತ್ತಮವಾಗಿ ಬೆಳೆದ ಆಹಾರ ಪದಾರ್ಥ ಸರಿಯಾದ ಸಂರಕ್ಷಣಾ ವ್ಯವಸ್ಥೆ ಗಳಿಲ್ಲದೆ ತಿನ್ನುವ ಲಕ್ಷಾಂತರ ಹಸಿವಿನ ಬಾಯಿಗಳ ಪಾಲಿಗೆ ಬರದೆ ವ್ಯರ್ಥವಾಗಿ ಹೋಗುತ್ತಿದ್ದವು ಸರಿ ಸುಮಾರು ತಾನು ಹೈಸ್ಕೂಲಿಗೆ ಬರುವವರಿಗೆ ಆಕೆ ಇದೇ ರೀತಿ ಎಲ್ಲ ಬಗೆಯ ಆಯುರ್ವೇದದ ಮಸಾಲೆ ಪದಾರ್ಥಗಳನ್ನು ಪರೀಕ್ಷಿಸುತ್ತಲೇ ಇದ್ದಳು. ವಿವಿಧ ಬಗೆಯ ಹಣ್ಣುಗಳು ತರಕಾರಿಗಳ ತಾಜಾತನವನ್ನು ಆ ಮಸಾಲೆಗಳ ಮಿಶ್ರಣದೊಂದಿಗೆ ಇಟ್ಟು ಪರೀಕ್ಷಿಸುತ್ತಲೇ ಇದ್ದ ಆಕೆ ಅಂತಿಮವಾಗಿ ಕೆಲ ನಿಗದಿತ ಪ್ರಮಾಣದ ಮಸಾಲೆಗಳ ಮಿಶ್ರಣವನ್ನು ಬಳಸುವ ಮೂಲಕ ವಿವಿಧ ಬಗೆಯ ತರಕಾರಿಗಳು ಮತ್ತು ಹಣ್ಣುಗಳನ್ನು ಸಹಜವಾಗಿ ಅವು ತಾಜಾ ಆಗಿ ಉಳಿಯುವ ಸಮಯಕ್ಕಿಂತ ಎರಡರಿಂದ ನಾಲ್ಕು ಪಟ್ಟು ಹೆಚ್ಚು ಸಮಯ ಯಾವುದೇ ರೀತಿಯ ಕ್ರಿಮಿ ಕೀಟಗಳ ಸೋಂಕು, ಬ್ಯಾಕ್ಟೀರಿಯಗಳ ಬೆಳವಣಿಗೆಗಳಿಂದ ದೂರವಾಗಿ ತಾಜಾ ಆಗಿ ಉಳಿಯಲು ಸಾಧ್ಯ ಎಂಬುದನ್ನು ಆಕೆ ಕಂಡುಕೊಂಡಳು.ತನ್ನ 17ನೇ ವಯಸ್ಸಿನಲ್ಲಿ ಆಕೆ ವಿಜ್ಞಾನ ಮೇಳ ಒಂದರಲ್ಲಿ 1500 ಡಾಲರ್ ಮೊತ್ತದ ಬಹುಮಾನವನ್ನು ಕೂಡ ಈ ವಿಷಯದ ತನ್ನ ಸಂಶೋಧನೆಯಿಂದ ಗಳಿಸಿದಳು. ಮುಂದೆ ಈ ರೀತಿಯ ಮಸಾಲೆಗಳನ್ನು ಬಳಸಿದ ಕಾಗದಗಳನ್ನು ತಯಾರಿಸಿ ಅದರ ಪೇಟೆಂಟ್ ಗಾಗಿ ಆಕೆ ಅರ್ಜಿ ಸಲ್ಲಿಸಿದಳು. ಈ ರೀತಿ ಮಸಾಲೆ ಮಿಳಿತ ಪೇಪರ್ ಗಳನ್ನು ಆಕೆ ಫ್ರೆಶ್ ಪೇಪರ್ ಎಂದು ಕರೆದಳು. ಇದೀಗ ಜಗತ್ತಿನ ಸರಿ ಸುಮಾರು 35 ದೇಶಗಳಿಗೆ ಆಕೆಯ ತಯಾರಿಕೆಯ ಪ್ರಶ್ನೆ ಪೇಪರ್ಗಳಲ್ಲಿ ಆಹಾರ ಪದಾರ್ಥಗಳು ಸುತ್ತಲ್ಪಟ್ಟು ಮಾರಾಟವಾಗುತ್ತವೆ. ಇದರ ಜೊತೆಗೆ ಖರೀದಿಸಲು ಸಾಧ್ಯವಿಲ್ಲದ ಫುಡ್ ಬ್ಯಾಂಕ್ ಗಳಲ್ಲಿ ಆಹಾರವು ಹಾಳಾಗಿ ಪೋಲಾಗುವುದನ್ನು ತಡೆಗಟ್ಟಲು ದಾನವಾಗಿ ಕೂಡ ನೀಡಲಾಗುತ್ತಿದೆ. ಇದೆಲ್ಲವೂ ಆದದ್ದು ಕೇವಲ ಒಬ್ಬ ಪುಟ್ಟ ಬಾಲಕಿ ಕವಿತಾ ಶುಕ್ಲ ಎಂಬಾಕೆಯ ಕುತೂಹಲದ ಕಾರಣ ಹಾಗೂ ಆಕೆಯ ಅಜ್ಜಿಯ ಆಯುರ್ವೇದ ಮಸಾಲೆ ಪದಾರ್ಥಗಳ ಅರಿವಿನ ಕಾರಣದಿಂದ.ಇದೀಗ ಆಕೆ ಫ್ರೆಶ್ ಗ್ಲೋ ಎಂಬ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದು ಇಡೀ ಜಗತ್ತಿನಾದ್ಯಂತ ಕೂಲಾಗುತ್ತಿರುವ ಆಹಾರವನ್ನು ಉಳಿಸುವ ನಿಟ್ಟಿನಲ್ಲಿ ತನ್ನದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಳೆ ಆಕೆಯ ಕುರಿತು ಹಾಲಿವುಡ್ ನ ಬ್ರೆಸ್ ಡಲಾಸ್ ಹೊವಾರ್ಡ್ ಎಂಬವರು ಒಂದು ಪುಟ್ಟ ಸಾಕ್ಷ್ಯಾ ಚಿತ್ರವನ್ನು ತಯಾರಿಸಿದ್ದಾರೆ. ನಂಬಿಕೆಯ ಒಂದು ಪುಟ್ಟ ಎಳೆಯನ್ನು ಹಿಡಿದು ಸರಳವಾದ ಪ್ರಯೋಗಗಳನ್ನು ಮಾಡುವ ಮೂಲಕ ಸಬಲೀಕರಣದ ಹಾದಿಯತ್ತ ಆಕೆ ಸಾಗಿದ್ದಾಳೆ ಇದೀಗ ಸರಿಸುಮಾರು ನಾಲ್ಕು ಪೇಟೆಂಟ್ ಗಳನ್ನು ಆಕೆ ಹೊಂದಿದ್ದು ಬೈ ಎನಿಯಲ್ ಇಂಡೆಕ್ಸ್ ಡಿಸೈನ್ ಟು ಇಂಪ್ರೂವ್ ಲೈಫ್ ಡಿಸೈನ್ ಎಂಬ ಜಗತ್ತಿನ ಅತಿ ದೊಡ್ಡ ಪ್ರಶಸ್ತಿಯನ್ನು ಆಕೆ ಪಡೆದಿದ್ದಾರೆ. ಪ್ರಸ್ತುತ ಫ್ರೆಶ್ ಪೇಪರ್ ಜಾಗತಿಕವಾಗಿ ರೈತರು ಹಾಗೂ ಜನರ ಬಳಕೆಗೆ ದೊರೆಯುತ್ತಿದೆ. ಫ್ರೆಶ್ ಗ್ಲೋ ಕಂಪನಿಯು ಜಗತ್ತಿನ ಅತಿ ದೊಡ್ಡ ರಿಟೇಲ್ ಮಾರುಕಟ್ಟೆಯನ್ನು ಹೊಂದಿದ್ದು ಕವಿತಾ ಅವರ ಕೆಲಸಗಳನ್ನು ಮೆಚ್ಚಿ ಜಾಗತಿಕ ಪತ್ರಿಕೆಗಳಾದ ವೋಗ್, ಓಪ್ರಾ ಮ್ಯಾಗಜೀನ್, ಗ್ಲಾಮರ್, ದ ಟುಡೇ ಶೋ ಪತ್ರಿಕೆಗಳಲ್ಲಿ ಬರೆದಿದೆ 30 ವರ್ಷ ಕೆಳಗಿನ ಮಹಿಳೆಯರಲ್ಲಿ ಜಗತ್ತನ್ನು ಬದಲಾಯಿಸಿದ ಏಳು ಜನ ಮಹಿಳೆಯರಲ್ಲಿ ಒಬ್ಬರಾಗಿ ಕವಿತಾ ಹೊರಹೊಮ್ಮಿದ್ದಾರೆ. ಟೈಮ್ಸ್ ಮ್ಯಾಗಜಿನ್ ನ ಆಹಾರವನ್ನು ಉಳಿಸುವ 5 ಜನ ಮಹಿಳಾ ಉದ್ಯಮಿಗಳಲ್ಲಿ ಒಬ್ಬರೆಂದು ಪ್ರಶಂಶಿಸಲ್ಪಟ್ಟಿದ್ದಾರೆ. ಇಂಟರ್ನಾ್ಯಷನಲ್ ಹೌಸ್ ವೇರ್ ಅಸೋಸಿಯೇಷನ್ ನ ಬೋರ್ಡ್ ಆಫ್ ಡೈರೆಕ್ಟರ್ಗಳಲ್ಲಿ ಒಬ್ಬರಾಗಿರುವ ಕವಿತಾ ಅವರು ಪ್ರಸ್ತುತ ಅಮೆರಿಕದ ಸಿಎಸ್ಐಎಸ್ ಕಮಿಷನ ನ ಭರವಸೆಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಬಿ ಎ ಪದವಿಯನ್ನು ಪಡೆದಿರುವ ಕವಿತಾ ಜಾಗತಿಕವಾಗಿ ಆಹಾರವನ್ನು ಪೋಲು ಮಾಡದೇ ಇರುವಂತಹ ಫ್ರೆಶ್ ಗ್ರೋ ಸಂಸ್ಥೆಯಿAದ ಫ್ರೆಶ್ ಪೇಪರ್ ಉತ್ಪನ್ನವನ್ನು ನೀಡಿ ಅತ್ಯುತ್ತಮ ಕಾಣಿಕೆಯನ್ನು ನೀಡಿದ್ದಾರೆ ಕವಿತಾ ಶುಕ್ಲ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ನಮ್ಮ ಭಾರತೀಯ ಆಯುರ್ವೇದ ಔಷಧಿಗಳ ಪರಂಪರೆಯ ಎಲ್ಲಾ ನೇತಾರರಿಗೆ ಗೌರವ ಪೂರ್ವಕ ನಮನಗಳು
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ಕವಿತಾ ಶುಕ್ಲಾ….. ಆಹಾರ ಪೋಲಾಗದಂತೆ ರಕ್ಷಿಸುವ ಉತ್ಪನ್ನ ಫ್ರೆಶ್ ಗ್ರೋ ಸಂಸ್ಥೆಯ ಸಂಸ್ಥಾಪಕಿ



