ನೆಲಮಂಗಲ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರನ್ನಾಗಿ, ಉತ್ತಮ ಸಂಘಟಕ, ಸ್ನೇಹಜೀವಿ, ಸಾಹಿತಿ, ಕಲಾವಿದ, ಛಾಯಾಗ್ರಾಹಕ, ಕನ್ನಡ ಪ್ರೇಮಿ ಹಾಗೂ ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿಯಾಗಿದ್ದ ಬಿ ಪ್ರಕಾಶ್ ಮೂರ್ತಿ ಯವರನ್ನು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷರಾದ ಬಿ ಎನ್ ಕೃಷ್ಣಪ್ಪನವರು ಮುಂದಿನ ಆದೇಶದವರೆಗೆ ನೇಮಕ ಮಾಡಿ ಆದೇಶಪತ್ರ ನೀಡಿದ್ದಾರೆ ಮತ್ತು ಪರಿಷತ್ತಿನ ನಿಬಂಧನೆಗಳಿಗುಣವಾಗಿ ಉತ್ತಮವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿರೆಂದು ಶುಭ ಹಾರೈಸಿ, ಅಭಿನಂದಿಸಿ, ಸನ್ಮಾನಿಸಿದರು.
ಪ್ರಕಾಶ್ ಮೂರ್ತಿಯವರು ಮಾತನಾಡಿ ಕನ್ನಡ ನಾಡು ನುಡಿಗಾಗಿ ಕಾಯ ವಾಚ ಮನಸ ದುಡಿಯುವುದಾಗಿ ಘೋಷಿಸಿದರು.ಇಲ್ಲಿಯವರೆಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಉತ್ತಮ ಸಂಘಟಕರಾಗಿ, ಯಶಸ್ವಿ ಸಾಹಿತ್ಯ ಸಮ್ಮೇಳನ ನಡೆಸಿ, ಎಲ್ಲರ ಪ್ರಶಂಸೆಗೆ ಪಾತ್ರರಾಗಿ, ಪರಿಷತ್ತಿನ ಕಾರ್ಯಕ್ರಮಗಳನ್ನು ಅತ್ತ್ಯುತ್ತಮವಾಗಿ ಹಮ್ಮಿಕೊಂಡು ಸಾಕಾರಗೊಳಿಸಿದ ಪ್ರದೀಪ್ ಕುಮಾರ್ ಅವರು ಪೂರ್ವ ನಿರ್ಧರಿತ ತೀರ್ಮಾನದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ರಾಜೀನಾಮೆ ಸ್ವೀಕರಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷರಾದ ಬಿ ಎನ್ ಕೃಷ್ಣಪ್ಪನವರು ‘ಇನ್ನೂ ಮುಂದೆಯೂ ಸಹ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾಗಿ,ಶ್ರೀಯುತರ ಪ್ರೀತಿ, ವಿಸ್ವಾಸ, ಅಭಿಮಾನ, ಸ್ನೇಹ ನಮ್ಮ ಪರಿಷತ್ತಿನ ಕಾರ್ಯಕ್ರಮಗಳಿಗೆ ಸದಾ ಹೀಗೆ ಇರಲಿ’ ಎಂದು ಆಶಿಸಿ, ಅಭಿನಂದಿಸಿ, ಸನ್ಮಾನಿಸಿದರು. ಇದೇ ವೇಳೆ ಜಿಲ್ಲಾಧ್ಯಕ್ಷರನ್ನು ಸನ್ಮಾನಿಸಲಾಯಿತು.
ದೇವನಹಳ್ಳಿಯ ಜಿಲ್ಲಾ ಕಸಾಪ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಕೋಶಾಧ್ಯಕ್ಷರಾದ ಅಪ್ಪಣ್ಣ, ಬೆಂ.ಗ್ರಾ. ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ಲೇಖಕ ಚಿಂತಕ ಅಂಕಣಕಾರ ಮಣ್ಣೆ ಮೋಹನ್, ಪ್ರಾಧ್ಯಾಪಕ ಮತ್ತು ಚಿಂತಕ ಗಂಗರಾಜು, ಕವಿ ಡಾ. ಸದಾನಂದ ಆರಾಧ್ಯ, ತಾಲೂಕು ಕ.ಸಾ.ಪ ಮಾಜಿ ಅಧ್ಯಕ್ಷರಾದ ಲಯನ್ ಪ್ರಕಾಶ್, ಲೇಖಕರಾದ ಶರಣಯ್ಯ ಹಿರೇಮಠ್ ಉಪಸ್ಥಿತರಿದ್ದರು. ಕಸಾಪ ಜಿಲ್ಲಾ ಪ್ರತಿನಿಧಿ ರಾಮಕೃಷ್ಣಪ್ಪ, ಕೋಶಾಧ್ಯಕ್ಷರಾದ ನಾರಾಯಣಗೌಡ, ಕಸಾಪ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಮತ್ತು ಇತರೆ ಗಣ್ಯರು ನೂತನ ಅಧ್ಯಕ್ಷರಿಗೆ ಶುಭಕೋರಿದ್ದಾರೆ.