ಹುಬ್ಬಳ್ಳಿ: ದೆಹಲಿ ಮುಖ್ಯಮಂತ್ರಿ ಆಗಿರಲು ಅರವಿಂದ ಕೇಜ್ರಿವಾಲ್ ಅವರಿಗೆ ಯೋಗ್ಯತೆ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಮಾದ್ಯಮದೊಂದಿಗೆ ಮಾತನಾಡಿದ ಸಚಿವರು, ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಕೇಜ್ರಿವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಎಎಪಿ ಯಾವುದೇ ತತ್ವಗಳಿಲ್ಲದ ಪಕ್ಷವಾಗಿದೆ. ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಬಂಡಾಯವೆದ್ದು ಅಸ್ತಿತ್ವಕ್ಕೆ ಬಂದ ಪಕ್ಷ ಇಂದು ತಾನೇ ಆ ಹಾದಿ ತುಳಿದಿದೆ ಎಂದು ಆರೋಪಿಸಿದ ಅವರು, ಎಎಪಿ ಇಂದು ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳ ಪರ ನಿಲ್ಲುವ ಪಕ್ಷವಾಗಿ ಮಾರ್ಪಟ್ಟಿದ್ದು, ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ಸ್ವಾತಿ ಮಲಿವಾಲ್ ಅವರೊಂದಿಗೆ ಒಪ್ಪಂದ ಫಲಿಸದ ಕಾರಣ ಆಕೆಯ ಚಾರಿತ್ರ್ಯದ ಮೇಲೆ ಮಸಿ ಬಳಿಯುತ್ತಿದ್ದಾರೆ ಎಎಪಿ ನಾಯಕರು. ಕೇಜ್ರಿವಾಲ್ ಮನೆಯಲ್ಲಿದ್ದಾಗಲೇ ಸ್ವಾತಿ ಮಲಿವಾಲ್ ಅವರ ಮೇಲೆ ಹಲ್ಲೆ ನಡೆದಿರುವುದು ನಾಚಿಕೆಗೇಡಿನ ಸಂಗತಿ. ಸಿಎಂ ಕೇಜ್ರಿವಾಲ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.