ಕೆಂಗೇರಿ: ನಿಕಟ ಪೂರ್ವ ಅಧ್ಯಕ್ಷ ಟಿ.ಸಿ. ಮಂಜುನಾಥ್ ನಿಧನ ಹೊಂದಿದ ಹಿನ್ನೆಲೆಯಲ್ಲಿ ಖಾಲಿಯಾಗಿದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಟಿ.ಎಲ್. ಕೆಂಪೇಗೌಡ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಇಲಾಖೆಯ ಸಿಇಒ ಮುರುಳಿಧರ್ ಅವರು ಟಿ.ಎಲ್. ಕೆಂಪೇಗೌಡ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ನೂತನ ಅಧ್ಯಕ್ಷ ಟಿ.ಎಲ್. ಕೆಂಪೇಗೌಡ ಅವರನ್ನು ಸನ್ಮಾನಿಸಿ ಮಾತನಾಡಿ, ಹಳ್ಳಿಗಳೇ ದೇಶದ ಬೆನ್ನೆಲುಬು, ರೈತರ ಬದುಕು ಹಸನಾಗಿದ್ದರೆ ದೇಶವು ಸುಭಿಕ್ಷವಾಗಿರುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ ಅದನ್ನು ಸಮರ್ಪಕವಾಗಿ ತಲುಪಿಸಲು ಕೃಷಿ ಪತ್ತಿನ ಸಹಕಾರ ಸಂಘವು ಕೊಂಡಿಯಾಗಿದೆ. ಸಹಕಾರ ಸಂಘವನ್ನು ಪ್ರತಿನಿಧಿಸುವ ವ್ಯಕ್ತಿಗಳು ರೈತರ ಬಾಳಲ್ಲಿ ಬೆಳಕಾಗಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ನೂತನ ಅಧ್ಯಕ್ಷ ಟಿ.ಎಲ್. ಕೆಂಪೇಗೌಡ ಮಾತನಾಡಿ, ರೈತರ ಸ್ವಾವಲಂಬನೆಗೆ ಬೇಕಾಗುವ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೃಷಿ ಪತ್ತಿನ ಸಹಕಾರ ಸಂಘವು ರೈತರಿಗಾಗಿಯೇ ಇರುವ ಸಂಘ ಎಂಬುದನ್ನು ರೂಪಿಸಲು ಒಂದು ಅವಕಾಶವು ದೊರಕಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಂಡು ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ ವಕೀಲ ರಾಮಕೃಷ್ಣ ಲಕ್ಷ್ಮೀಶ್ ಹಾಗು ಜಯಕುಮಾರ್ ಸೇರಿದಂತೆ ಸಹಕಾರ ಸಂಘದ ನಿರ್ದೇಶಕರು ಸಿಬ್ಬಂದಿಗಳು ಇದ್ದರು.