ದೊಡ್ಡಬಳ್ಳಾಪುರ: ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ವಿರುದ್ಧ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಮಾದಿಗ ಸಮುದಾಯದವರು ಹಾಗೂ ಕೆ.ಹೆಚ್.ಮುನಿಯಪ್ಪ ಅವರ ಅಭಿಮಾನಿಗಳು ಸಂಘ ಪ್ರತಿಭಟನೆ ನಡೆಸಿದರು.
ನಗರದಡಾ.ಬಿ.ಆರ್.ಅಂಬೇಡ್ಕರ್ (ಐಬಿವೃತ್ತ) ವೃತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ನಜೀರ್ ಅಹ್ಮದ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಕೂಡಲೇ ನಜೀರ್ ಅಹಮದ್ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಹಾಗೂ ಅವರನ್ನು ಮುಖ್ಯ ಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಪ್ರತಿ ಘಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅಖಿಲ ಕರ್ನಾಟಕ ಕೆ.ಎಚ್.ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಹಾಗೂ ವಕೀಲ ಆರ್.ವಿ.ಮಹೇಶ್ ಅವರು ಕೆ.ಹೆಚ್.ಮುನಿಯಪ್ಪ ಅವರ ಬಗ್ಗೆ ನಜೀರ್ ಅಹ್ಮದ್ ಅವರು ಅವಹೇಳನಕಾರಿ ಹಾಗೂ ಕೀಳು ಮಟ್ಟದ ಹೇಳಿಕೆಯನ್ನ ನೀಡಿರುವುದನ್ನು ಖಂಡಿಸುತ್ತೇವೆ, ಇಡೀ ರಾಜ್ಯದಾದ್ಯಂತ ಮಾದಿಗ ಸಮುದಾಯದವರು ಹಾಗೂ ಕೆ.ಹೆಚ್.ಮುನಿಯಪ್ಪ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಲು ತೀರ್ಮಾನಸಲಾಗಿದೆ, ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲು ತೀರ್ಮಾನಿಸಿದ್ದೇವೆ.
ಅಭಿಮಾನಿಗಳು ಆಕ್ರೋಶದ ನಡುವೆಯೂ ಸಹ ಕೆ.ಹೆಚ್. ಮುನಿಯಪ್ಪ ಅವರು ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಬಾರದು ಎಂಎ ಕಾರಣಕ್ಕಾಗಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದಾರೆ.ನಂತರ ಮಾತನಾಡಿದ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ರಾಮಕೃಷ್ಣಪ್ಪ ಅವರು, ಕೆ.ಹೆಚ್.ಮುನಿಯಪ್ಪ ಅವರು ತಮ್ಮ ಸುದೀರ್ಘ ರಾಜಕೀಯ ಪಯಣದಲ್ಲಿ ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ, ಎಲ್ಲರಿಗೂ ಒಳ್ಳೆಯದನ್ನೇ ಬಯಸಿದ್ದಾರೆ. ಎಲ್ಲಾ ವರ್ಗದ ಜನರು ಹಾಗೂ ರಾಜಕೀಯ ಮುಖಂಡರೊಡನೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಅವರ ವಿರುದ್ಧ ನಜೀರ್ ಅಹ್ಮದ್ ಅವಾಚ್ಯವಾಗಿ ಮಾತನಾಡಿರುವುದು ಸರಿಯಲ್ಲ. ಈ ಕೂಡಲೇ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಮೂವತ್ತೈದು ವರ್ಷಗಳ ಕಾಲ ಕಾಂಗ್ರೆಸ್ಸಿನಲ್ಲಿ ಶಿಸ್ತಿನ ಸಿಪಾಯಿಯಂತಿದ್ದಾರೆ, ಅವರು ಎಂದಿಗೂ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿಲ್ಲ. ಯಾರಿಗೂ ಕೆಟ್ಟದ್ದನ್ನು ಬಯಸದ ವ್ಯಕ್ತಿತ್ವ ಅವರದ್ದು. ಇಂತಹ ರಾಜಕೀಯ ಮುತ್ಸದ್ಧಿ ವಿರುದ್ಧ ವಿಧಾನಸೌಧದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಏಳು ಬಾರಿ ಸಂಸದರಾಗಿ, ಹತ್ತು ವರ್ಷಗಳ ಕಾಲ ಕೇಂದ್ರ ಸಚಿವರಾಗಿ ರಾಜಕೀಯ ಅನುಭವ ಹೊಂದಿರುವ ಮುನಿಯಪ್ಪ ಅವರಿಗೆ ಅಗೌರವ ತರುವ ರೀತಿಯಲ್ಲಿ ಮಾತನಾಡಿರುವುದು ಅಕ್ಷಮ್ಯ. ಕೂಡಲೇ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಬೇಕು ಕೀಳಾಗಿ ನಾಲಿಗೆ ಹರಿಬಿಟ್ಟಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್ ಅವರ ಮೂಲಕ ನಜೀರ್ ಅಹ್ಮದ್ ವಿರುದ್ಧ ಕ್ರಮಜರುಗಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಕೀಲ ಆರ್.ವಿ.ಮನು, ಡಿವಿಎಸ್ ಅದ್ಯಕ್ಷ ಮಂಜುನಾಥ್, ಶಿವು, ದಲಿತ ಮುಖಂಡರಾದ ಅಂಜನಮೂರ್ತಿ, ಕಲ್ಲುಕೋಟೆ ನಾಗರಾಜು, ರಾಮಣ್ಣ, ಮಾಡೇಶ್ವರ ಮೂರ್ತಿ, ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಕೆಹೆಚ್ಎಂ ಅವರ ಅಭಿಮಾನಿಗಳು ಪಾಲ್ಗೊಂಡಿದ್ದರು.