ಕೆ.ಎಚ್.ಪಾಟೀಲ ಅವರ ೧೦೧ನೇ
ಜನ್ಮ ದಿನಾಚರಣೆ
ವ್ಯಕ್ತಿ-ಶಕ್ತಿ
ಶ್ರೀ ವೀರನಾರಾಯಣನ ಗದುಗಿನ ಪಕ್ಕದ ಪುಟ್ಟಹಳ್ಳಿ ಹುಲಕೋಟಿ ಯಲ್ಲಿ ಹುಟ್ಟಿ ತಮ್ಮ ಹಳ್ಳಿಯ ಸರಪಂಚರಾಗಿ ಸಾರ್ವಜನಿಕ ಜೀವನ ಪ್ರವೇಶಿಸಿದ ಕೆ.ಎಚ್.ಪಾಟೀಲ, ಶಾಸಕರಾಗಿ, ಸಚಿವರಾಗಿ, ಸಹಕಾರಿ ಭೀಷ್ಮರಾಗಿ ಬೆಳೆದಿದ್ದು, ಸಮಷ್ಟಿಯ ಹಿತಕ್ಕಾಗಿ ಸಾಧಿಸಿದ್ದು ಅನನ್ಯ, ಅಪಾರ. ಅದಕ್ಕಾಗಿಯೇ ಅವರು ನಾಡು ಮೆಚ್ಚಿದ ಜನನಾಯಕರೆನಿಸಿದ್ದಾರೆ.
ಕೆ.ಎಚ್.ಪಾಟೀಲದ್ದು ಹೋರಾಟಗಳಿಂದ ಕೂಡಿದ, ಸಂಘರ್ಷಗಳಿAದ ಕೂಡಿದ, ವೈವಿಧ್ಯತೆಗಳಿಂದ ಕೂಡಿದ ವರ್ಣರಂಜಿತ ಬದುಕು. ಮಾಡಬಲ್ಲವರು ಮಾಡುತ್ತಾರೆ. ಮಾಡಲರಿಯದವರು ಮಾತನಾಡುತ್ತಾರೆ. ಕೆ.ಎಚ್.ಪಾಟೀಲರು ಮೊದಲನೇ ವರ್ಗಕ್ಕೆ ಸೇರಿದವರು. ಮನುಷ್ಯ ಎಷ್ಟರ ಮಟ್ಟಿಗೆ ಒಳ್ಳೆಯದಕ್ಕಾಗಿ ಸರ್ವರ ಹಿತಕ್ಕಾಗಿ, ಸಮಷ್ಟಿಗಾಗಿ ದುಡಿಯುತ್ತಾನೆಯೋ ಅಷ್ಟರ ಮಟ್ಟಿಗೆ ಆತ ದೊಡ್ಡವನಾಗುತ್ತಾನೆ. ಕೆ.ಎಚ್.ಪಾಟೀಲರ ಜೀವನ ನೋಡಿದಾಗ ಅದು ನಿಜವೆನಿಸುವುದು. ಅವರ ವಿರೋಧಿಗಳು ಸಹ ಬೆಕ್ಕಸಬೆರಗಾಗುವಂತೆ ಕೆಲಸ ಮಾಡಿದ್ದಾರೆ. ಕೆಲಸದ ಕೈಯಲ್ಲಿ ಅವರೆಂದೂ ಸೋತವರಲ್ಲ. ಸೋಲು ಎಂಬ ಪದ ಸೋಲಿಸಿದ ಧೀಮಂತ.
ಕೆ.ಎಚ್.ಪಾಟೀಲರು ವ್ಯವಹಾರಿಕ ಅರ್ಥದ ರಾಜಕಾರಣಿಯಾಗಿರಲಿಲ್ಲ. ಅವರೊಬ್ಬ ದಾರ್ಶನಿಕ ಧುರೀಣರಾಗಿದ್ದರು. ರಾಜಕಾರಣಿ ಮುಂದಿನ ಚುನಾವಣೆ ಬಗ್ಗೆ ಯೋಚಿಸಿದರೆ ದಾರ್ಶನಿಕ ಮುಂದಿನ ಜನಾಂಗದ ಬಗ್ಗೆ ಯೋಚಿಸುತ್ತಾನೆ. ಅವರ ದೃಷ್ಟಿ ಸದಾ ಭವಿಷ್ಯತ್ತನ್ನೂ ಉತ್ತಮಗೊಳಿಸುವುದಾಗಿದ್ದಿತು. ಅವರ ಗುರಿ ಸದಾ ರೈತರ ಹಿತ ಕಾಪಾಡುವುದಾಗಿದ್ದಿತು. ತಮ್ಮ ಆದರ್ಶಗಳಿಂದಾಗಿ ಅವರು ಇತರರಿಗೆ ಅನುಕರಣೀಯರಾಗಿದ್ದರು. ತಮ್ಮ ಕರ್ಮದಿಂದ ಅವರು ಕಾಯಕಯೋಗಿಯಂತಹ ಜೀವನ ನಡೆಸಿದರು. ಏಷ್ಯಾ ಖಂಡದ ದೇಶಗಳ ಸಹಕಾರ ಸಂಘಟನೆ ಅಧ್ಯಕ್ಷಗಿರಿ ಸಹ ಅವರಿಗೆ ದೊಡ್ಡದಾಗಲಿಲ್ಲ. ಅವರಿಂದಾಗಿ ಅವರು ಅಲಂಕರಿಸಿದ ಸ್ಥಾನಗಳು ದೊಡ್ಡತನ ಅನುಭವಿಸುವಂತೆ ಮಾಡಿದ ಚಿಂತಕರು. ಕೆ.ಎಚ್.ಪಾಟೀಲ ಆದಿಯಿಂದ ಅಂತ್ಯದವರೆಗೂ ಅಪ್ಪಟ ಹಳ್ಳಿಯ ವ್ಯಕ್ತಿ. ಹಳ್ಳಿಗರ ನಿಷ್ಟುರತೆ, ಸತ್ಯಸಂಧತೆ, ಸರಳತೆ, ಧೈರ್ಯ, ಮುನ್ನುಗ್ಗುವ ಮನೋಭಾವ, ಲಾಭ ಹಾನಿಯ ಲೆಕ್ಕಾಚಾರ ಹಾಕದ ಮುಗ್ಧತೆ ಅವರ ಜೀವನದಲ್ಲಿ ಹಾಸುಹೊಕ್ಕಾಗಿದ್ದವು. ಭಯಗೊಂಡರೆ ಜಯವಿಲ್ಲವೆನ್ನುತ್ತಿದ್ದ ಪಾಟೀಲರ ಅಂಜಿ ಅಂಜಿ ದಿನವೂ ಸಾಯುವುದಕ್ಕಿಂತ ಧೈರ್ಯದಿಂದ ಹೋರಾಡಿ ಬದುಕಬೇಕೆನ್ನುತ್ತಿದ್ದರಲ್ಲದೇ, ಧೈರ್ಯವೊಂದಿದ್ದರೆ ದೇವರನ್ನು ಸಹ ಗೆಲ್ಲಬಹುದೆಂದು ಹೇಳುತ್ತಿದ್ದರು. ಆಪತ್ತುಗಳನ್ನು ಎದುರಿಸಲು ಆತ್ಮ ವಿಶ್ವಾಸವಿರಬೇಕೆನ್ನುತ್ತಿದ್ದರು. ನಾಡು ಮಾಡುವ ಕೆಲಸದಿಂದ ಜನಹಿತ ಸಾಧಿಸುತ್ತಿದ್ದರೆ ಭಗವಂತನಿಗೂ ಅಂಜಬೇಕಾಗಿಲ್ಲವೆಂದು ಹೇಳುತ್ತಿದ್ದರು. ಅವರದು ಅಪ್ಪಟ ನಿರ್ಭೀತ ಬದುಕು. ಭಯ ಅವರ ಸಮೀಪ ಸುಳಿಯುವ ಧೈರ್ಯವೆಂದೂ ಮಾಡಲಿಲ್ಲ.
ಕೆ.ಎಚ್.ಪಾಟೀಲರು ಆಡಳಿತದಲ್ಲಿ ನಿಪುಣರು. ಸಂಘಟನೆಯಲ್ಲಿ ಚತುರನು, ಸಚಿವರಾಗಿ, ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ಅದನ್ನು ಸಾಬೀತು ಪಡಿಸಿದರು. ಛಲದಂಕಮಲ್ಲರಾಗಿದ್ದದ್ದು, ಅವರ ವ್ಯಕ್ತಿತ್ವದ ವಿಶೇಷ. ಅನ್ಯಾಯವೆಸಗಿದಾಗ ಅದರ ವಿರುದ್ದ ಹೋರಾಡಲು ತುದಿಗಾಲ ಮೇಲೆ ನಿಲ್ಲುವುದು ಅವರ ಜಾಯಮಾನವಾಗಿದ್ದಿತು.
ತಮಗೆ ಸರಿ ಎಂದು ಕಂಡು ಬಂದುದನ್ನು ಮಾಡುವಾಗ ಅವರೆಂದೂ ತಮ್ಮ ಜೊತೆಗೂಡಲು ಬೇರೆಯವರಿಗೆ ಕಾದವರಲ್ಲ. ಇನ್ನೊಬ್ಬರ ಬೆಂಬಲಕ್ಕಾಗಿ ಹಾದಿ ನೋಡಿದವರಲ್ಲ. ಎರಡು ಗುಂಪುಗಳಲ್ಲಿ ಕಾಲಿಟ್ಟು ಮುಚ್ಚುಮರೆ ರಾಜಕಾರಣ ಮಾಡಿದವರಲ್ಲ. ಸುಳ್ಳು ಭರವಸೆ ನೀಡಿ ಅನುಯಾಯಿಗಳನ್ನು ಓಲೈಸಿದವರಲ್ಲ. ರೊಟ್ಟಿಯ ಯಾವ ಭಾಗಕ್ಕೆ ತುಪ್ಪ ಹಚ್ಚಿದೆ ಎಂದು ರೊಟ್ಟಿ ಹಿಡಿದು ಪರೀಕ್ಷಿಸಿದವರಲ್ಲ. ತಮಗೆ ಅನ್ಯಾಯವಾಗಿದೆ ಎಂದೆನಿಸಿದಾಗ ತಮ್ಮ ಆತ್ಮ ಗೌರವ ಕಾಪಾಟಿಕೊಳ್ಳಲು ತಮ್ಮ ಸಮರ ತಾವೇ ನಡೆಸಿದವರು. ಮಹಾತ್ಮರಂತೆ He Walked Alone.
ಕನಸುಗಾರ
ಕೆ.ಎಚ್. ಪಾಟೀಲ, ಕಲಿತಿದ್ದು ಕಡಿಮೆ, ಸಾಧಿಸಿದ್ದು ಅಪಾರ. ಪ್ರತಿಭೆಯಲ್ಲಿ, ಪಾಂಡಿತ್ಯದಲ್ಲಿ, ಸಂಘಟನಾ ಚಾತುರ್ಯದಲ್ಲಿ, ಆಡಳಿತ ಕೌಶಲ್ಯದಲ್ಲಿ, ಲೋಕಾನುಭವದಲ್ಲಿ, ಪರೋಪಕಾರದಲ್ಲಿ, ಪ್ರಗತಿಪರ ಮನೋಭಾವದಲ್ಲಿ, ಬಡವರ ಸೇವೆಯಲ್ಲಿ, ಕರ್ತವ್ಯ ನಿಷ್ಟೆಯಲ್ಲಿ, ವಾಗ್ಮೀಯತೆಯಲ್ಲಿ, ಎಲ್ಲಕ್ಕೂ ಹೆಚ್ಚಾಗಿ ಸಹಕಾರ ತತ್ವದಲ್ಲಿ ಅವರು ಹೊಂದಿದ ಅಚಲ ವಿಶ್ವಾಸದಲ್ಲಿ ಕೆ.ಎಚ್. ಪಾಟೀಲರನ್ನು ಹೋಲುವ ವ್ಯಕ್ತಿಗಳು ದೊರೆಯಲಾರರು.
ಕೆ.ಎಚ್. ಪಾಟೀಲರ ಉಸಿರೇ ಸಹಕಾರ. ರೈತನೇ ಹೃದಯ, ಗ್ರಾಮ ಹಾಗೂ ಕೃಷಿ ಅವರ ಎರಡು ಶ್ವಾಶಕೋಶಗಳು. ಕೈಗಾರಿಕೆ ಹಾಗೂ ಶಿಕ್ಷಣ ಅವರ ಕಣ್ಣುಗಳು, ರಚನಾತ್ಮಕ ಕೆಲಸಗಳೇ ಅವರ ಕಾಲು. ಅವಿಶ್ರಾಂತ ಶ್ರಮ ಅವರ ಬಾಹುಗಳು. ಅವರ ನಿಲುವು ಛಲದ್ದು, ಅವರ ಬದುಕು ಸಂಘರ್ಷದ್ದು, ಶೋಷಣೆ ರಹಿತ ಸಮಾಜ ಕಟ್ಟುವ ಸುಂದರ ಕನಸುಗಾರ. ಅವರ ಗುರಿ ಶೋಷಣೆ ಮುಕ್ತ ಗ್ರಾಮೀಣ ಬದುಕು. ಅವರಿಗೆ ರಾಜಕೀಯ ಒಂದು ಸಾಧನವಾಗಿದ್ದಿತೇ ಹೊರತು, ಅದೇ ಗುರಿಯಾಗಿರಲಿಲ್ಲ. ಅವರ ನರ ನಾಡಿಯಲ್ಲಿ ಹರಿದಿದ್ದು, ಇಲ್ಲದವರ ಬಗ್ಗೆ ಮಾನವೀಯ ಅನುಕಂಪ, ಮಾತು ಒರಟು, ಮನಸ್ಸು ಮೃದು.
ಕೆ.ಎಚ್.ಪಾಟೀಲರು ಹುಟ್ಟಿದ್ದು ದಿನಾಂಕ: ೧೬ ಮಾರ್ಚ್ ೧೯೨೫ ರಂದು. ಗದಗ ಸಮೀಪದಲ್ಲಿರುವ ಹುಲಕೋಟಿಯಲ್ಲಿ ತಂದೆ ರಂಗನಗೌಡ ಸಹಾಕರಿ ಸಂಸ್ಥೆಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದ ಸಮಾಜ ಸೇವಕ ತಾಯಿ ಶ್ರೀಮತಿ ನಿಂಗಮ್ಮ, ಕೆ.ಎಚ್.ಪಾಟೀಲರದ್ದು ಗೌಡಕಿ ಮನೆತನ. ಗೌಡಕಿ ಈ ಮನೆತನಕ್ಕೆ ಅಹಂ ತಂದಿಲ್ಲ. ಸೇವಾಭಾವ ತಂದಿದೆ. ಇತರರಿಗೆ ನೆರವಾಗುವುದೇ ಈ ಮನೆತನದ ಸಿರಿತನ. ಶ್ರೀ ರಾಮಕೃಷ್ಣ ಪರಮಹಂಸರ ಪರಮಭಕ್ತರಾಗಿದ್ದ ಈ ಮನೆತನದ ಹಿರಿಯರು ಗೋಂದಾವಲಿ ಶ್ರೀ ಬ್ರಹ್ಮಚೈತನ್ಯರ ಹಾಗೂ ಕೈಲಾಸ ಆಶ್ರಮದ ಶ್ರೀ ಶ್ರೀ ಶ್ರೀ ತಿರುಚ್ಚಿ ಮಹಾಸ್ವಾಮಿಗಳ ಅನುಯಾಯಿಗಳು. ತಮಗಾಗಿ ಬದುಕುವುದಕ್ಕಿಂತ ಇತರರಿಗಾಗಿ ಬದುಕುವುದೇ ಶ್ರೇಷ್ಠ ಎಂಬುದನ್ನು ರಂಗನಗೌಡರು ಕೆಲಸಗಳಿಂದ ಮಾಡಿತೋರಿಸಿದ್ದರು. ಶಿಕ್ಷಣ ಪ್ರಸಾರಕ್ಕಾಗಿ ಶ್ರಮಿಸಿದ್ದ ರಂಗನಗೌಡರು ತಮ್ಮ ಸಹಕಾರಿ ಪತ್ತಿನ ಸೊಸೈಟಿ ಸ್ಥಾಪಿಸಿದ್ದರು. ಜನಸೇವೆಯೇ ಜನಾರ್ಧನ ಸೇವೆ ಎಂದು ಬದುಕಿದ ರಂಗನಗೌಡರ ಸೋದರ ಹನುಮಂತಗೌಡರಿಗೆ ಪುತ್ರ ಸಂತಾನವಿರಲಿಲ್ಲ. ಸೋದರ ಪುತ್ರನನ್ನೇ ಅವರು ದತ್ತಕ ತೆಗೆದುಕೊಂಡರು. ಇದರಿಂದಾಗಿ ಬಾಲ್ಯದಲ್ಲಿ ಕೃಷ್ಣಗೌಡರಿಗೆ ಇಮ್ಮಡಿ ಪ್ರೀತಿ, ಹುಲಕೋಟಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿ, ಗದಗಿನ ಮುನಿಸಿಪಲ್ ಹೈಸ್ಕೂಲ್ನಲ್ಲಿ ಫ್ರೌಡಶಿಕ್ಷಣ ಮುಗಿಸಿ, ಲೋಕ ಶಿಕ್ಷಣಕ್ಕೆ ಧುಮುಕಿದರು. ಚಲೇಜಾವ್ ಚಳುವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಕೆ.ಎಚ್.ಪಾಟೀಲರ ಒಡಹುಟ್ಟಿದವರು ಸೋದರ ಎಸ್.ಆರ್.ಪಾಟೀಲ್ ಹಾಗೂ ಸೋದರಿ ಸಾವಿತ್ರಮ್ಮ. ಸೋದರಿಯನ್ನು ರಾಣೆಬೆನ್ನೂರು ತಾಲ್ಲೂಕಿನ ಮೈದೂರಿನ ಶ್ರೀಸಾಹುಕಾರ ರಾಮಣ್ಣನವರಿಗೆ ಕೊಟ್ಟಿದ್ದರು. ಸೋದರ ಎಸ್.ಆರ್.ಪಾಟೀಲ ಸೂಪರಿಂಟೆAಡೆAಟ್ ಎಂಜಿನಿಯರ್ ಆಗಿ ನಿವೃತ್ತಿ ಹೊಂದಿದ್ದರು. ಅಣ್ಣ ತಮ್ಮಂದಿರು ಹೇಗೆ ಇರಬೇಕು ಎಂಬುದಕ್ಕೆ ಒಂದು ಆದರ್ಶವಾಗಿ ಇವರು ಬಾಳಿದರು. ಬಾಹ್ಯದಲ್ಲಿ ಸೋದರರು ಉತ್ತರ-ದಕ್ಷಿಣ. ಆಂತರಿಕವಾಗಿ ಅನ್ಯೂನ್ಯ ಕೆ.ಎಚ್.ಪಾಟೀಲರು ಬಾಲ್ಯದಲ್ಲಿ ಕಲಿಕೆಗೆ ವಿದಾಯ ಹೇಳಿ ಜನಸೇವೆಗೆ ಶರಣಾಗಿದ್ದರು. ಎಸ್.ಆರ್.ಪಾಟೀಲರು ತಾಂತ್ರಿಕ ಪದವೀಧರರಾದ, ಮೇಲೆ ಸಹಕಾರಿ ಸೇವೆಗೆ ಜೀವನ ಮುಡಿಪು, ಅಣ್ಣನಿಗೆ ರಾಜಕೀಯದ ಹವ್ಯಾಸ, ತಮ್ಮನಿಗೆ ಆಧ್ಯಾತ್ಮದ ಹಸಿವು. ಅಣ್ಣ ತೀವ್ರ ಸುಧಾರಣಾವಾದಿ. ತಮ್ಮ ಆಧ್ಯಾತ್ಮವಾದಿ. ಅಣ್ಣ ವಾಗ್ಮಿ, ತಮ್ಮ ಲೇಖಕ. ನಾಡಿಗೆ ವೇಮನನ್ನು ಪರಿಚಯಿಸಿ ಹತ್ತಾರು ಗ್ರಂಥ ಬರೆದ ಎಸ್.ಆರ್.ಪಾಟೀಲರ ಸಾಹಿತ್ಯ ಕೃಷಿ ದೊಡ್ಡದು.
ಕೆ.ಎಚ್.ಪಾಟೀಲರ ಪತ್ನಿ ಶ್ರೀಮತಿ ಪದ್ಮಾವತಿ ನಿಜವಾದ ಅರ್ಥದಲ್ಲಿ ಗೌಡತಿ. ಒಕ್ಕಲುತನವನ್ನೇ ಉಸಿರಾಡಿ ತಮಸ್ವಿನಿಯಾಗಿ ಬಾಳುತ್ತಿರುವ ಮಾತೃಶ್ರೀಯವರ ಅಂತಃಕರಣ ಸಾಗರದಂತೆ ಅಪಾರ ಆಳವಾದುದು.
ಕೆ.ಎಚ್.ಪಾಟೀಲರ ಪುತ್ರ ಎಚ್.ಕೆ.ಪಾಟೀಲ ಇಂದು ನಾಡಿನ ಪ್ರತಿಭಾನ್ವಿತ ಜನನಾಯಕರಾಗಿದ್ದಾರೆ. ಎಚ್.ಕೆ.ಪಾಟೀಲರಿಗೆ ಸದಾ ಕೆಲಸಬೇಕು. ಕೆಲಸ ಹುಡುಕಿ, ಕೆಲಸ ಮಾಡುವ ಗುಣ. ಹಿಡಿದ ಕೆಲಸ ಸಾಧಿಸುವ ಛಲಗಾರಿಕೆ. ಸಮಾಜದ ಅತ್ಯಂತ ಕೆಳಹಂತದ ಜನರ ಬದುಕನ್ನು ಸುಧಾರಿಸುವ ಹಂಬಲವಿಟ್ಟುಕೊAಡಿದ್ದಾರೆ. ಬ್ಯಾಂಕಿAಗ್ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಶ್ರೀ ಪಾಟೀಲರು ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಪಟ್ಟಣ ಸಹಕಾರಿ ಬ್ಯಾಂಕುಗಳ ಮಹಾಮಂಡಳಗಳ ಬಡ ಜನರನ್ನು ಆರ್ಥಿಕ ಶೋಷಣೆಯಿಂದ ಮುಕ್ತಗೊಳಿಸಲು ಅವರಲ್ಲಿ ಸ್ವಾಭಿಮಾನ ಹಾಗೂ ಸ್ವಾವಲಂಬನೆ ಬೆಳೆಸಲು ಸಮರ್ಪಿತವಾಗಿದ್ದಾರೆ. ಪ್ರಾಮಾಣಿಕ, ದೂರದರ್ಶಿತ್ವ, ಸಾತ್ವಿಕ ಜೀವನದ ಮೂರ್ತರೂಪರಾಗಿ ಬೆಳೆಯುತ್ತಿರುವ ಎಚ್.ಕೆ.ಪಾಟೀಲರು ಚೆಲುವ ಕನ್ನಡ ನಾಡಿನ ಕನಸುಗಾರರಾಗಿದ್ದಾರೆ. ೩೦ವರ್ಷಗಳ ಸಾರ್ವಜಿನ ಜೀವನದಲ್ಲಿ ವಿಧಾನಪರಿಷತ್ತಿಗೆ ನಾಲ್ಕು ಅವಧಿಗೆ ಸದಸ್ಯರಾಗಿ, ರಾಜ್ಯ ವಿಧಾನಸಭೆ ಸದಸ್ಯರಾಗಿ, ಜವಳಿ, ಜಲ ಸಂಪನ್ಮೂಲ, ಕೃಷಿ, ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವರಾಗಿ ಅನುಭವಶಾಲಿಗಳಾಗಿರುವ ಎಚ್.ಕೆ.ಪಾಟೀಲರು ಇಂದು ಶ್ರೀ ಸಿದ್ಧರಾಮಯ್ಯ ಅವರ ಸಂಪುಟದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಂತ್ರಿಗಳಾಗಿದ್ದಾರೆ.
ಕೆ.ಎಚ್.ಪಾಟೀಲರ ಇನ್ನೊರ್ವ ಪುತ್ರ ಪ್ರಹ್ಲಾದಗೌಡ, ಪದವೀಧರರಾಗಿ ಕೆ.ಹೆಚ್.ಪಾಟೀಲರ ಕನಸಿನ ಗದಗ ಕೋ ಆಪರೇಟಿವ್ ಟೆಕ್ಸ್ಟೈಲ್ ಮಿಲ್ಲಿನ ಸ್ಥಾಪಕ ಛೇರ್ಮನ್ನರು. ಅಖಿಲ ಭಾರತ ಸಹಕಾರಿ ನೂಲಿನ ಗಿರಣಿಗಳ ಮಹಾಮಂಡಳದ ಅಧ್ಯಕ್ಷರಾಗಿ, ಜಿಲ್ಲಾ ಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕರಾಗಿ, ಸೇವೆಗೈದ ಪಾಟೀಲರು ಕೆ.ಎಚ್.ಪಾಟೀಲರ ನಂತರ ಗದಗ ಮತಕ್ಷೇತ್ರವನ್ನು ಸತತವಾಗಿ ನಾಲ್ಕನೇ ಬಾರಿಗೆ ಪ್ರತಿನಿಧಿಸಿದ್ದಾರೆ. ಮೃದು ಮಾತು, ಮಿತ ಭಾಷೆ, ವಿನಯಶೀಲ, ಶ್ರದ್ಧಾವಂತ ಸ್ವಾಮಿ ವಿವೇಕಾನಂದರ ಅಭಿಮಾನಿ ಅನುಯಾಯಿ, ರೈತ ಪಕ್ಷಪಾತಿ. ೧೯೭೫ ರಿಂದ ಇಂದಿನವರೆಗೆ ಗದಗ ಎ.ಪಿ.ಎಂ.ಸಿ. ಅಧ್ಯಕ್ಷರಾಗಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಈ ಗುಣಗಳ ಹೊತ್ತ ಕೆ.ಎಚ್.ಪಾಟೀಲರ ಕೀರ್ತಿ ಕಿರೀಟಕ್ಕೆ ಗರಿ ಮೂಡಿಸುವ ಕೆಲಸ ಮಾಡುವ ಮಕ್ಕಳನ್ನು ಪಡೆದ ಮನೆತನದ ಗೌರವಕ್ಕೆ ಘನತೆ ತರುವಂತೆ ಬಾಳುವ ಕುಟುಂಬದ ಸದಸ್ಯರನ್ನು ಪಡೆದ ಪಾಟೀಲರು ನಿಜವಾದ ಅರ್ಥದಲ್ಲಿ ಪುಣ್ಯವಂತರು.
ಕೆ.ಎಚ್.ಪಾಟೀಲರು ಶ್ರೀಮಂತ ಮನೆತನದಿಂದ ಬಂದಿದ್ದರೂ ಅವರೇನೂ ಉದ್ಯಮಿಗಳಂತೆ ಆಗರ್ಭ ಶ್ರೀಮಂತರಲ್ಲ. ಅವರು ದೊಡ್ಡ ರೈತರು. ಅವರ ನಿಜವಾದ ಶ್ರೀಮಂತಿಕೆಯೆAದರೆ, ಅವರ ಗೆಳೆಯರು ಧ್ಯೇಯ ನಿಷ್ಠ ಗೆಳೆಯರ ಬಳಗ ಕಟ್ಟಿಕೊಂಡು ಶೋಷಿತ ವರ್ಗದ ವಿರುದ್ಧ ಶೋಷಣೆಯ ವಿರುದ್ಧ, ತಾರುಣ್ಯದಲ್ಲಿಯೇ ಸಮರ ಸಾರಿದರು.
ಕೆ.ಎಚ್.ಪಾಟೀಲರು ತಾರುಣ್ಯದಲ್ಲಿ ತಮ್ಮ ಹಳ್ಳಿಯ ಸರಪಂಚರಾದರು. ೧೯೭೨ ರಲ್ಲಿ ಶಾಸಕರಾಗುವವರೆಗೂ ಹುಲಕೋಟಿ ಪಂಚಾಯಿತಿ ಸರಪಂಚರಾಗಿದ್ದರು. ೧೯೫೪ ರಲ್ಲಿ ಎ.ಐ.ಸಿ.ಸಿ. ಸದಸ್ಯರಾಗಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಪಾಟೀಲರು ೧೯೫೫ ರಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷತೆಗೆ ನಡೆದ ಚುನಾವಣೆಯಲ್ಲಿ ಎಸ್.ನಿಜಲಿಂಗಪ್ಪನವರನ್ನು ಸೋಲಿಸಿದ ಬಣದಲ್ಲಿದ್ದರು. ೩೦ರ ತರುಣ ಹಿರಿಯ ಧುರೀಣ ನಿಜಲಿಂಗಪ್ಪನವರ ವಿರೋಧ ಕಟ್ಟಿಕೊಂಡರು. ಇದರಿಂದಾಗಿ ಅವರಿಗೆ ಸಾಕಷ್ಟು ರಾಜಕೀಯ ಹಾನಿಯಾಯಿತು. ನಿರಂತರ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಲ್ಪಟ್ಟಿತು.
ರೈತರ ಪಕ್ಷಪಾತಿಯಾಗಿದ್ದ ಪಾಟೀಲರು ದಿ.ಗದಗ ಕೋ-ಆಪರೇಟಿವ್ ಕಾಟನ್ ಸೇಲ್ ಸೊಸೈಟಿಯನ್ನು ನೈಜವಾದ ಅರ್ಥದಲ್ಲಿ ರೈತಪರ ಸಂಸ್ಥೆಯನ್ನಾಗಿ ಮಾಡಿದರುಲ. ತಾಲೂಕಿಗೊಂದು ಎ.ಪಿ.ಎಂ.ಸಿ.ಗಳು ಜನ್ಮ ತಳೆದಾಗ ನಡೆದ ಚುನಾವಣೆಯಲ್ಲಿ ಗದಗ ಎ.ಪಿ.ಎಂ.ಸಿ. ಅಧ್ಯಕ್ಷರಾಗಿ ಆಯ್ಕೆಯಾಗಿ ಕೆ.ಎಚ್.ಪಾಟೀಲರು ಕೃಷಿ ಹುಟ್ಟುವಳಿ ಮಾರುಕಟ್ಟೆ ಇತಿಹಾಸದಲ್ಲಿ ಅವಿಸ್ಮರಣೀಯರಾಗುವಂತೆ ಕೆಲಸ ಮಾಡಿದರು.
ಕೃಷಿ ಹುಟ್ಟುವಳಿ ಮಾರುಕಟ್ಟೆಯನ್ನು ರೈತಪರ ಮಾರುಕಟ್ಟೆಯನ್ನಾಗಿ ಪರಿವರ್ತಿಸಿದ ಶ್ರೇಯಸ್ಸು ಕೆ.ಎಚ್.ಪಾಟೀಲರಿಗೆ ಸಲ್ಲುತ್ತದೆ. ರೈತ ತನ್ನ ಉತ್ಪಾದನೆಯನ್ನು ಮಾರಾಟ ಪೇಟೆಗೆ ಬಂದಾಗ ಆತ ಯಾವುದೇ ರೀತಿಯ ಶೋಷಣೆಗೊಳಗಾಗಬಾರದೆಂದು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡರು.
ರೈತ ಪೇಟೆಗೆ ಮಾಲು ತಂದ ತಕ್ಷಣ ಅವರ ಉತ್ಪಾದನೆಯ ತೂಕ ನಿಖರವಾಗಿರುವಂತೆ ಮಾಡಿದರಲ್ಲದೆ ತೂಕದವರನ್ನು ನೇಮಕ ಮಾಡಿದರು.
ಹತ್ತಿ ಬೆಳೆಗಾರ ರೈತರಿಗಾಗಿ ಅವರ ಹತ್ತಿಯ ವೈಜ್ಞಾನಿಕ ಗ್ರೇಡಿಂಗ್ ಪದ್ಧತಿ ಜಾರಿಗೆ ತಂದರಲ್ಲದೆ ಟೆಂಡರ್ ಲಿಲಾವು ಪದ್ದತಿ ಜಾರಿಗೊಳಿಸಿದರು.
ರೈತರ ಇತರ ಉತ್ಪಾದನೆಗಳು ಗ್ರೇಡಿಂಗ್ಗೊಳಪಟ್ಟು ಅತ್ಯಧಿಕ ಬೆಲೆ ಪಡೆಯುವಂತೆ ದೋಷರಹಿತ ವ್ಯವಸ್ಥೆ ರೂಪಸಿದರು. ರೈತಪರ ನಿಲುವಿನಿಂದ ಕೆ.ಎಚ್.ಪಾಟೀಲರು ಶ್ರೀಮಂತ ದಲಾಲ ಹಾಗೂ ಖರೀದಿದಾರರ ವಿರೋಧ ಕಟ್ಟಿಕೊಳ್ಳÀಬೇಕಾದ ಪ್ರಸಂಗ ಬಂದರೂ ಅದಕ್ಕೆ ಸೊಪ್ಪು ಹಾಕದೆ ರೈತರ ಹಿತ ಕಾಪಾಡಲು ನಿರಂತರ ಶ್ರಮಿಸಿದರು.
ರೈತರು ಒತ್ತಡಕ್ಕೊಳಗಾಗಿ ತಮ್ಮ ಉತ್ಪಾದನೆ ಮಾರಬಾರದೆಂಬುದು ಕೆ.ಎಚ್.ಪಾಟೀಲರು ನಿಲುವಾಗಿದ್ದಿತು. ಅದಕ್ಕಾಗಿ ಸೆಂಟ್ರಲ್ ವೇರಹೌಸಿಂಗ್ ಕಾರ್ಪೋರೇಷನ್ನಿಗೆ ಎಲ್ಲ ಬೆಂಬಲ ನೀಡಿ ಅದು ರೈತರ ‘Distress Sale’ ತಡೆಯುವಂತೆ ಮಾರ್ಗದರ್ಶನ ಮಾಡಿದರಲ್ಲದೇ ಉಗ್ರಾಣಗಳು ರೈತರ ಲಕ್ಷ್ಮೀಯ ಮಂದಿರಗಳೆಂದು ಕರೆದ ಕೆ.ಎಚ್.ಪಾಟೀಲರು ಎ.ಪಿ.ಎಂ.ಸಿ. ಕ್ಷೇತ್ರದ ಹಳ್ಳಿಗಳಲ್ಲಿ ಗ್ರಾಮೀಣ ಗುದಾಮುಗಳನ್ನು ಕಟ್ಟಿದರು. ರೈತರ ಹಿತರಕ್ಷಣೆಗಾಗಿ ಉಪ ಮಾರುಕಟ್ಟೆಗಳನ್ನು ಕಟ್ಟಿದರು.
ಅತ್ಯಂತ ದೂರದೃಷ್ಟಿಯ ಕೆ.ಎಚ್.ಪಾಟೀಲರು ಗದಗ ಮಾರುಕಟ್ಟೆ ತ್ವರಿತವಾಗಿ ಬೆಳೆಯುವ ಮಾರುಕಟ್ಟೆಯಾಗಿರುವದರಿಂದ ಹಳೇ ಮಾರುಕಟ್ಟೆ ಬದಲಿಸಲು ಹೊಸ ಮಾರುಕಟ್ಟೆ ಕಟ್ಟಲು ಭದ್ರ ಬುನಾದಿ ಹಾಕಿದರಲ್ಲದೆ ಫಾಯರ ಫೈಟರ ಸೇರಿ ಎ.ಪಿ.ಎಂ.ಸಿ. ಪ್ರಾಂಗಣದಲ್ಲಿ ರೈತರಿಗೆ ಬೇಕಾದ ಸಂಸ್ಥೆಗಳೂ ಸಹ ಕೆಲಸ ನಿರ್ವಹಿಸುವಂತೆ ಮಾಡಿದರು.
ನಾಡು ಕಂಡ ಬಲು ಅಪರೂಪದ ರಾಜಕಾರಣಿ; ಕೆ.ಎಚ್.ಪಾಟೀಲ



