ತಿ.ನರಸೀಪುರ: ಅಡಿಗೆ ಅನಿಲ ಸೋರಿಕೆಗೊಂಡು ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮೂವರು ವಿದ್ಯಾರ್ಥಿಗಳು, ಓರ್ವ ಶಿಕ್ಷಕಿ ಮತ್ತು ಒಬ್ಬ ಮುಖ್ಯ ಶಿಕ್ಷಕರು ಸೇರಿದಂತೆ ಐವರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ನಿಲಸೋಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಅಡಿಗೆ ಅನಿಲ ಸೋರಿಕೆ ಅವಘಡದಲ್ಲಿ ವಿದ್ಯಾರ್ಥಿಗಳಾದ ಪೃಥ್ವಿ,ಗೌತಮ್,ಸಹಶಿಕ್ಷಕಿ ಮೀನಾಕ್ಷಿ ಮತ್ತು ಮುಖ್ಯಶಿಕ್ಷಕ ಮಹದೇವಯ್ಯ ಅವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು,ಧನುಷ್ ಎಂಬ ವಿದ್ಯಾರ್ಥಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಮದ್ಯಾಹ್ನ ಸುಮಾರು 3.45ರ ಸಮಯದಲ್ಲಿ ಬಿಸಿಯೂಟದ ಅಡಿಗೆ ಕೋಣೆಯಲ್ಲಿ ಅಡಿಗೆ ಅನಿಲ ಸೋರಿಕೆ ಆಗುತ್ತಿರುವ ಬಗ್ಗೆ ಸಂಶಯಗೊಂಡು ಕೊಠಡಿ ಪ್ರವೇಶಿಸಿ ಪರಿಶೀಲಿಸುವ ವೇಳೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮೂವರು ಮಕ್ಕಳು,ಇಬ್ಬರು ಶಿಕ್ಷಕರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ತೀವ್ರವಾಗಿ ಗಾಯಗೊಂಡಿರುವ ಧನುಷ್ ಎಂಬ ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದ್ದು,ಉಳಿದ ಗಾಯಾಳುಗಳಿಗೆ ತಿ.ನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ತಹಶೀಲ್ದಾರ್ ಟಿ.ಪಿ. ಸುರೇಶ್ ಆಚಾರ್,ಬಿಇಒ ಜಿ.ಶೋಭಾ, ಬಿ.ಆರ್.ಪಿ ನಾಗೇಶ್, ಸಿಪಿಐ ಧನಂಜಯ,ಬಿಜೆಪಿ ಮುಖಂಡ ಡಾ.ರೇವಣ್ಣ ಭೇಟಿ ನೀಡಿ ಘಟನೆ ಪರಿಸ್ಥಿತಿ ಅವಲೋಕಿಸಿದರು.