ಇದು ನಿಸ್ಸಂಶಯವಾಗಿ ಈ ಐಪಿಎಲ್ ಸೀಸನ್ ನ ಈವರೆಗಿನ ಅತ್ಯಂತ ರೋಚಕ ಪಂದ್ಯ. ಕೆಎಲ್ ರಾಹುಲ್ ಸೊಗಸಾದ ಅರ್ಧಶತಕದ ಬಳಿಕ ಸ್ಱೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಅವರ ಡೆತ್ ಓವರ್ ನಲ್ಲಿ ತೋರಿಸಿದ ಥಿಲ್ಲರ್ ಶೋ! ಇನ್ನೇನು ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಯಿತು ಎಂದುಕೊಳ್ಳತ್ತಿರುವಾಗಲೇ ನಾಟಕೀಯ ತಿರುವು. ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ ಪಂದ್ಯದಲ್ಲಿ ಕೊನೆಗೂ ಗೆದ್ದಿದ್ದು ಶುಭಮನ್ ಗಿಲ್ ಬಳಗ. ತೀವ್ರ ಪೈಪೋಟಿ ಕಂಡ ಐಪಿಎಲ್ ನ ಲೀಗ್ ಹಂತದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಲ್ ಅನ್ನು ಕೇವಲ 1 ರನ್ ನಿಂದ ಸೋಲಿಸಿ ಸಂಭ್ರಮಿಸಿತು. ಈ ಮೂಲಕ ಸೀಸನ್ ನಲ್ಲಿ ಮೊದಲ ಜಯ ಗಳಿಸಿತು ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಏಪ್ರಿಲ್ 8ರ ಬುಧವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 210 ರನ್ ಕಲೆ ಹಾಕಿದರು. ಇದಕ್ಕುತ್ತರವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಷ್ಟೇ ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 209 ರನ್ ಗಳಿಸಲಷ್ಟೇ ಶಕ್ತವಾಯಿತು.ಗುಜರಾತ್ ಬೌಲರ್ ಗಳ ಮೇಲೆ ಏರಿ ಹೋದ ಡೆಲ್ಲಿ ಆರಂಭಿಕರಾದ ಪಥುಮ್ ನಿಸ್ಸಾಂಕಾ ಮತ್ತು ಕೆಎಲ್ ರಾಹುಲ್ ಅವರು ಪವರ್ ಪ್ಲೇನ ಆರು ಓವರ್ ಗಳಲ್ಲಿ 63 ರನ್ ಕಲೆ ಹಾಕಿದರು. ತಂಡದ ಮೊತ್ತ 8.1 ಓವರ್ ಗಳಲ್ಲಿ 76 ರನ್ ಗಳಾಗಿದ್ದಾರ ನಿಸ್ಸಾಂಕಾ(24 ಎಸೆತದಲ್ಲಿ 41 ರನ್) ವಿಕೆಟ್ ಪತನವಾಯಿತು. ಆ ಬಳಿಕ ಕೆಎಲ್ ರಾಹುಲ್ ಅವರು ಇನ್ನಿಂಗ್ಸ್ ನ ಜವಾಬ್ದಾರಿ ತೆಗೆದುಕೊಂಡರು. ಕರ್ನಾಟಕದ ಪ್ರಸಿದ್ಧ ಕೃಷ್ಣ ಸೇರಿದಂತೆ ಎಲ್ಲ ಬೌಲರ್ ಗಳ ಬೆವರಿಳಿಸಿದರು. ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಶತಕದ ಹಾದಿಯಲ್ಲಿದ್ದರು. ಆದರೆ ತಂಡದ ಮೊತ್ತ 17 ಓವರ್ ಗಳಲ್ಲಿ 166 ರನ್ ಗಳಾಗಿದ್ದಾಗ 92 ರನ್ ಗಳಿಸಿ ಔಟಾದರು. ಅವರ ಇನ್ನಿಂಗ್ಸ್ ನಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಗಳಿದ್ದವು.ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಗುಜರಾತ್ ತಂಡಕ್ಕೆ ನಾಯಕ ಶುಭಮನ್ ಗಿಲ್(45 ಎಸೆತಗಳಲ್ಲಿ 70 ರನ್), ಜೋಸ್ ಬಟ್ಲರ್ (27 ಎಸೆತಗಳಲ್ಲಿ 52 ರನ್) ಮತ್ತು ವಾಶಿಂಗ್ಟನ್ ಸುಂದರ್ (32 ಎಸೆತಗಳಲ್ಲಿ 55 ರನ್) ಅವರ ಆಕರ್ಷಕ ಅರ್ಧಶತಕ ಸಿಡಿಸಿದರು. ಗುಜರಾತ್ ಟೈಟಾನ್ಸ್ ಪರ ಮುಕೇಶ್ ಕುಮಾರ್ 2 ವಿಕೆಟ್, ಲುಂಗಿ ಎನ್ ಗಿಡಿ ಮತ್ತು ಕುಲ್ದೀಪ್ ಯಾದವ್ ಅವರು ತಲಾ 1 ವಿಕೆಟ್ ಎಗರಿಸಿದರು.



