ಆನೇಕಲ್: ಬನ್ನೇರುಘಟ್ಟ ರಸ್ತೆಯ ಹುಳಿಮಾವು ಬಡಾವಣೆಯಲ್ಲಿರುವ ಕೋದಂಡರಾಮ ಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಭಾವಪರವಶರಾಗಿ ತೇರಿಗೆ ಹಣ್ಣು ಜವನ ಎಸೆಯುವ ಮೂಲಕ ಧನ್ಯತೆ ಭಾವ ಮೆರೆದರು. ರಾಮ, ಲಕ್ಷ್ಮಣ, ಸೀತೆಯ ವಿಗ್ರಹಗಳನ್ನು ಹೊತ್ತ ರಥವು ಡೊಳ್ಳು ಕುಣಿತ, ತಮಟೆ, ನಗಾರಿ, ವಾದ್ಯ ಮೇಳದೊಂದಿಗೆ ದೇವಸ್ಥಾನದ ಸುತ್ತಲೂ ಭಕ್ತಾದಿಗಳು ಎಳೆದು ಸಂಭ್ರಮಿಸಿದರು.
ರಥೋತ್ಸವಕ್ಕೂ ಮುನ್ನ ದೇವಾಲಯದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರು , ಪದಾಧಿಕಾರಿಗಳು ಹಾಗೂ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದ ನಂತರ ಕೃಷ್ಣ ಗಂಧೋತ್ಸವ, ಹೂವಿನ ಸೇವೆ, ಆಸ್ಥಾನ ಸೇವೆ, ಮಹಾಮಂಗಳಾರತಿ, ರಥ ಪ್ರತಿಷ್ಠೆ, ಹಾಗೂ ಮಧ್ಯಾಹ್ನ ಮಂತ್ರಪುಷ್ಪ ಮಹಾ ಮಂಗಳಾರತಿ, ಹೂವಿನ ಸೇವೆ ನಂತರ ಬ್ರಹ್ಮರಥೋತ್ಸವ ನಡೆಯಿತು.
ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಕೇರಳದ ಚಂಡೇವಾದ್ಯ,ನಂದಿಧ್ವಜ ಕುಣಿತ, ಕೀಲುಕುದುರೆ, ಡೊಳ್ಳುಕುಣಿತ, ಬಾಣಬಿರುಸು, ಪಟ್ಟದ ಕುಣಿತ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೋಡುಗರ ಕಣ್ಮನ ಸೆಳೆದವು.ರಥೋತ್ಸವದಲ್ಲಿ ಭಾಗವಹಿಸುವ ಸಾವಿರಾರು ಭಕ್ತಾದಿಗಳಿಗೆ ತೊಂದರೆಯಾಗದಂತೆ ಗ್ರಾಮದ ಜನರು ಹಲವಾರು ಕಡೆ ಅರವಂಟಿಕೆಗಳನ್ನು ಹಾಕಿ ಅನ್ನದಾನ, ಕುಡಿಯುವ ನೀರು, ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಮಾಡುವುದು ಮತ್ತೊಂದು ವಿಶೇಷವಾಗಿತ್ತು.
ರಾತ್ರಿ 8 ಗಂಟೆಯಿಂದ ಬೆಳಗಿನ ಜಾವದವರೆಗೆ ಶ್ರೀ ಕೋದಂಡರಾಮಸ್ವಾಮಿ, ಮುತ್ತುರಾಯಸ್ವಾಮಿ, ಆಂಜನೇಯಸ್ವಾಮಿ, ವಿನಾಯಕಸ್ವಾಮಿ, ಆಲದಮರದ ದೊಡ್ಡಮ್ಮದೇವಿ, ಶಂಭುಲಿಂಗೇಶ್ವರಸ್ವಾಮಿ, ವೆಂಕಟರಮಣಸ್ವಾಮಿ, ಸೋಮೇಶ್ವರ, ಶ್ರೀಕೃಷ್ಣದೇವರು, ಸುಬ್ರಹ್ಮಣ್ಯೇಶ್ವರ, ಕಬ್ಬಾಳಮ್ಮದೇವಿ, ಮಾರಮ್ಮ, ಏಳುಗುಡ್ಡೆ ಯಲ್ಲಮ್ಮದೇವಿ, ಲಕ್ಷ್ಮೀರಂಗನಾಥಸ್ವಾಮಿ, ರೇಣುಕಾದೇವಿ, ಮುನೇಶ್ವರ, ಚೌಡೇಶ್ವರಿದೇವಿ, ಕೆಂಪಮ್ಮದೇವಿ, ಭಗವತಿದೇವಿ, ಹುಣಸೇಮರ ದೊಡ್ಡಮ್ಮದೇವಿ, ಗಂಗಮ್ಮದೇವಿ, ಶಿರಡಿ ಸಾಯಿಬಾಬ,
ಲಕ್ಷ್ಮೀನರಸಿಂಹಸ್ವಾಮಿ, ಶನಿದೇವರು, ಬನಶಂಕರಮ್ಮ, ಮಾರಮ್ಮದೇವಿ, ವರದನಹಳ್ಳಿ ಮುನೇಶ್ವರ, ರೇಣುಕಾ ಯಲ್ಲಮ್ಮ, ಮಂಜುನಾಥಸ್ವಾಮಿ, ಯಲ್ಲಮ್ಮದೇವಿ, ಸವದತ್ತಿ ಯಲ್ಲಮ್ಮದೇವಿ, ಅಯ್ಯಪ್ಪಸ್ವಾಮಿ, ಆದಿಶಕ್ತಿ ರೇಣುಕಾ ದೇವಿಯ ಸೇರಿದಂತೆ 50ಕ್ಕೂ ಹೆಚ್ಚು ಹೂವಿನ ಪಲ್ಲಕ್ಕಿ ಹಾಗೂ ಮುತ್ತಿನ ಪಲ್ಲಕ್ಕಿ ಹುಳಿಮಾವು ಬಡಾವಣೆಯ ರಾಜಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದವು.ಬೆಂಗಳೂರಿನ ಸುತ್ತಮುತ್ತಲಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡರು.