ಹೊಸಕೋಟೆ: ತಾಲೂಕಿನ ಕೊಳತೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದ್ದು ಶೂನ್ಯ ಸಾಧನೆಯೊಂದಿಗೆ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.
ಒಟ್ಟು 12 ನಿರ್ದೇಶಕರಲ್ಲಿ 1 ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿತ್ತು.
ಉಳಿದ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೂ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾಗಿದ್ದು ಬಿಜೆಪಿ ಯಾವುದೇ ಸ್ಥಾನ ಗಳಿಸುವಲ್ಲಿ ವಿಫಲವಾಗಿದೆ.ನೂತನ ನಿರ್ದೇಶಕರಾಗಿ ಕೆ.ಎಚ್. ಸುರೇಶ್
(268), ಕೆ.ಎನ್.ಅನಂದ್ (260), ಕೆ.ಸುಬ್ರಮಣಿ (245). ಕೆ.ಎನ್.ಆಚಿಜಿನಪ್ಪ (238), ರಾಮಾಂಜಿನಪ್ಪ (236), ಕೆ.ಎಂ.ಸೋಮಶೇಖರ್ (223), ವಿ.ಪದ್ಮಾ (232), ಅನಿತಾ.ಎಸ್ (226), ಎಂ.ಅಶೋಕ (232) ವೆಂಕಟರಾಜ (246) ಹಾಗೂ ಹಿಂದುಳಿದ ವರ್ಗ ‘ಎ’ ಮೀಸಲು ಸ್ಥಾನಕ್ಕೆ ಕೆ. ಲಕ್ಷ್ಮಣಮೂರ್ತಿ ಅವಿರೋಧವಾಗಿ ಆಯ್ಕೆಯಾದರು.
ನೂತನ ನಿರ್ದೇಶಕರನ್ನು ಅಭಿನಂದಿಸಿಟಿಎಪಿಸಿಎಂಎಸ್ ನಿರ್ದೇಶಕ ಹನುಮಂತೇ ಗೌಡ ಅಭಿನಂದಿಸಿ ಮಾತನಾಡಿ ಸಂಘದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವರು ಯಾರೂ ಇಲ್ಲದಂತೆ ಸದಸ್ಯರುಗಳು ಕಾಂಗ್ರೆಸ್ ಬೆಂಬಲಿತರನ್ನು ಆಶೀರ್ವದಿಸಿದ್ದಾರೆ. ಹಾಲು ಉತ್ಪಾದನೆ ಮಾಡುವ ಸದಸ್ಯರ ನಂಬಿಕೆಗೆ ಚ್ಯುತಿ ಬಾರದಂತೆ ಸಂಸದ ಬಿ.ಎನ್.ಬಚ್ಚೇಗೌಡ, ಶಾಸಕ ಶರತ್ ಬಚ್ಚೇಗೌಡರ ಸಹಕಾರ ಪಡೆದು ಕ್ಷೀರ ಕ್ಷೇತ್ರದಲ್ಲೂ ಕ್ರಾಂತಿ ಮಾಡಬೇಕು.
ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಗತಿಪಥದತ್ತ ಸಂಘವನ್ನು ಕೊಂಡೊಯ್ಯಬೇಕು. ಹಾಲು ಉತ್ಪಾದಕರಿಗೆ ಒಕ್ಕೂಟ ನೀಡುವ ಯೋಜನೆಗಳನ್ನು ಸಮರ್ಪಕವಾಗಿ ಪಡೆಯಲು ಸೂಕ್ತ ಮಾರ್ಗದರ್ಶನ ನೀಡಿ ಎಲ್ಲಾ ಸವಲತ್ತುಗಳನ್ನು ಸಮರ್ಪಕವಾಗಿ ವಿತರಿಸುವ ಮೂಲಕ ಉತ್ತೇಜನ ನೀಡುವಂತಹ ಕಾರ್ಯವನ್ನು ನಿರ್ವಹಿಸುವ ಮೂಲಕ ಅಧಿಕಾರವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.
ಹಾಪ್ಕಾಮ್ಸ್ ನಿರ್ದೇಶಕ ವೆಂಕಟೇಶಪ್ಪ ಮಾತನಾಡಿ ಹಾಲು ಉತ್ಪಾದಕ ಸದಸ್ಯರು ನಿಮ್ಮ ಮೇಲೆ ವಿಶ್ವಾಸವಿಟ್ಟು ಹೆಚ್ಚಿನ ಮತಗಳನ್ನು
ನೀಡುವ ಮೂಲಕ ಚುನಾವಣೆಯಲ್ಲಿ ಜಯ ಶೀಲರನ್ನಾಗಿ ಮಾಡಿದ್ದಾರೆ. ಆದ್ದರಿಂದ ಸದಸ್ಯರಋಣ ತೀರಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಿ ಎಂದು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ತಾಲೂಕು ಕೆಂಪೇಗೌಡ ಗೃಹ ನಿರ್ಮಾಣ ಸಹಕಾರ ಸಂಘದಅಧ್ಯಕ್ಷ ಶಂಕರ್ನಾರಾಯಣ್, ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಕೃಷ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಗೌಡ, ವೆಂಕಟಾಚಲಯ್ಯ, ಪಲ್ಲವಿ ಅರುಣ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಶೋಭಾ ನಾರಾಯಣಸ್ವಾಮಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ವಿ.ಸುಬ್ರಮಣಿ, ಸಂಘದ ಮಾಜಿ ಅಧ್ಯಕ್ಷ ರಮೇಶ್, ಮುಖ್ಯ ಕಾರ್ಯನಿರ್ವಾಹಕ ಮುನಿರಾಜು, ಮುಖಂಡರಾದ ಜಯಪ್ರಕಾಶ್, ಕೆ.ಎಂ. ಕೃಷ್ಣಪ್ಪ, ಕೆ.ಟಿ.ನಾರಾಯಣಸ್ವಾಮಿ, ಕೆ.ಬಿ. ಆಂಜಿನಪ್ಪ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.