ಚಾಮರಾಜನಗರ: ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ಕಣ್ಗಾವಲು ಘಟಕ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಕೋಟ್ಪಾ ತನಿಖಾ ತಂಡದ ಸಹಯೋಗದೊಂದಿಗೆ ಅಕ್ಟೋಬರ್ ಮಾಹೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೋಟ್ಪಾ ದಾಳಿ ನಡೆಸಿ ಒಟ್ಟು 171 ಪ್ರಕರಣಗಳಲ್ಲಿ 25,270 ರೂ. ದಂಡ ವಿಧಿಸಲಾಗಿದೆ.
ಯಳಂದೂರು ಪಟ್ಟಣ ಹಾಗೂ ತಾಲ್ಲೂಕಿನ ಹೊನ್ನೂರು, ಚಾಮರಾಜನಗರ ತಾಲ್ಲೂಕಿನ ಕಾಗಲವಾಡಿ, ಆಲ್ದೂರು ಗ್ರಾಮ, ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಹನೂರು ಪಟ್ಟಣ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಯಿತು.ನಿಯಮ ಉಲ್ಲಂಘನೆ ಮಾಡಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳು, ಕೋಟ್ಪಾ ಸೆಕ್ಷನ್-4 ಎಚ್ಚರಿಕೆ ನಾಮಫಲಕವನ್ನು ಪ್ರದರ್ಶಿಸದ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ಗಳು, ಟೀ ಸ್ಟಾಲ್,
ಚಿಲ್ಲರೆ ಅಂಗಡಿಗಳು ಹಾಗೂ ಇತರೆ ಅಂಗಡಿಗಳು, ಕೋಟ್ಪಾ ಸೆಕ್ಷನ್-6 (ಎ) ನಾಮಫಲಕವನ್ನು ಪ್ರದರ್ಶಿಸದ ತಂಬಾಕು ಮಾರಾಟವಿರುವ ಅಂಗಡಿಗಳು, ಶಿಕ್ಷಣ ಸಂಸ್ಥೆಯ 100 ಗಜಗಳ ಅಂತರದ ಒಳಗೆ ತಂಬಾಕು ಪದಾರ್ಥಗಳ ಮಾರಾಟ ಮತ್ತು ಸೇವನೆಗೆ ಉತ್ತೇಜನ ನೀಡುವ ಅಂಗಡಿಗಳಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗಳಿಗೆ ಸ್ಥಳದಲ್ಲೇ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ.
ಕರಪತ್ರ ವಿತರಿಸಿ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಮತ್ತು ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003ರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.ಜಿಲ್ಲೆಯಲ್ಲಿರುವ ಎಲ್ಲಾ ಸಾರ್ವಜನಿಕ ಸ್ಥಳದ ಮಾಲೀಕರು, ಮುಖ್ಯಸ್ಥರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕೋಟ್ಪಾ ಕಾಯ್ದೆ ಉಲ್ಲಂಘನೆಯಾಗದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಕಾರ್ಯಕ್ರಮಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.