ಕೆ.ಆರ್.ಪುರ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಅವರ ಪರವಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್ ಬಾಬು ಕೆಆರ್ ಪುರ ಕ್ಷೇತ್ರದ ರಾಮಮೂರ್ತಿ ನಗರ,ಕಲ್ಕೆರೆ, ಕೆ.ಚನ್ನಸಂದ್ರ ಸೇರಿದಂತೆ ವಿವಿಧೆಡೆ ಭರ್ಜರಿ ಮತಯಾಚಿಸಿದರು.
ಇದೇ ವೇಳೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ನಂತರ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ, ಅಭಿವೃದ್ಧಿ ಯೋಜನೆಗಳ ಜೊತೆಗೆ ಐದು ಗ್ಯಾರಂಟಿ ಯೋಜನೆಗಳು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದೆ,ರಾಜ್ಯ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈಹಿಡಿಯಲಿದೆ, ಈ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾರಿ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರ ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿಗೆ ಲೋಕಸಭೆಗೆ ಆಯ್ಕೆಯಾದ ಸದಾನಂದ ಗೌಡ ಅವರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ,ಜಾಫರ್ ಷರೀಫ್ ಅವಧಿಯಲ್ಲಿ ಉತ್ತರ ಲೋಕಸಭಾ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕಂಡಿದೆ, ಕ್ಷೇತ್ರದ ಅಭಿವೃದ್ಧಿ ಗೆ ಬಿಜೆಪಿ ಸಂಸದರ ಕೊಡುಗೆ ಶೂನ್ಯ, ಬಡವರ ಬದುಕು ಹಸನಾಗಿಸಲು ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸುಶಿಕ್ಷಿತ, ಪ್ರಜ್ಞಾವಂತರಾಗಿರುವ ನಮ್ಮ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಅವರಿಗೆ ಆಶೀರ್ವಾದ ಮಾಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಕಲ್ಕೆರೆ ಶ್ರೀನಿವಾಸ್, ಮುಖಂಡರಾದ ಸುನೀಲ್ ಕುಮಾರ್, ಕುಮಾರಣ್ಣ, ಅಕ್ಕಪಣ್ಣ, ಸೋಮಣ್ಣ, ಕೃಷ್ಣಪ್ಪ ಮತ್ತಿತರರು ಇದ್ದರು.