ಬೆಂಗಳೂರು: ಹೈದರಾಬಾದ್-ಕರ್ನಾಟಕ ಮತ್ತು ಇತರೆ ಕೋಟಾಗಳ ಅಡಿಯಲ್ಲಿ ಜೂನಿಯರ್ ಎಂಜಿನಿಯರ್ (ಮೆಕ್ಯಾನಿಕಲ್) ಮತ್ತು ಸಹಾಯಕ ಎಂಜಿನಿಯರ್(ಮೆಕ್ಯಾನಿಕಲ್) ಹುದ್ದೆಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ‘ಕರ್ನಾಟಕ ವಿದ್ಯುತ್ ನಿಗಮ ನಿಯಮಿತ(ಕೆಪಿಸಿಎಲ್)ಕ್ಕೆ ಆದೇಶಿಸಿದೆ.
“ನೇಮಕಾತಿ ಅಧಿಸೂಚನೆಯು ಕನ್ನಡ ಭಾಷಾ ಪರೀಕ್ಷೆಗೆ ಗರಿಷ್ಠ 150 ಅಂಕಗಳನ್ನು ಸ್ಪಷ್ಟವಾಗಿ ಸೂಚಿಸಿದ್ದರೂ, ಈಗಾಗಲೇ ನಡೆಸಲಾದ ಪರೀಕ್ಷೆಯ ನಂತರ ಅರ್ಹತಾ ಅಂಕಗಳಾಗಿ ಕನಿಷ್ಠ 50 ಅಂಕಗಳನ್ನು ಏಕಪಕ್ಷೀಯವಾಗಿ ನಿಗದಿಪಡಿಸಿರುವುದು ನ್ಯಾಯಯುತವಾಗಿಲ್ಲ ಅಥವಾ ಪಾರದರ್ಶಕ ಕ್ರಮವಲ್ಲ” ಎಂದು ನ್ಯಾಯಾಲಯ ಹೇಳಿದೆ.
ಕನ್ನಡ ಭಾಷಾ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕಗಳಿಗೆ ಬದಲಾಗಿ 36 ಅಂಕಗಳನ್ನು ಗಳಿಸಿದ್ದಾರೆ ಎಂಬ ಕಾರಣಕ್ಕೆ ವಿಜಯಪುರ ಜಿಲ್ಲೆಯ ಗೀತಾ ಚವಾಣ್ ಅವರ ಆಯ್ಕೆಯನ್ನು ತಿರಸ್ಕರಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರು, ಪರೀಕ್ಷೆ ನಡೆಸಿದ ನಂತರ ನಿಗದಿಪಡಿಸಲಾದ ಕನಿಷ್ಠ 50 ಅಂಕಗಳ ಅರ್ಹತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಸೇವಾ(ಕೇಡರ್, ನೇಮಕಾತಿ, ಪ್ರೊಬೇಷನ್, ಬಡ್ತಿ ಮತ್ತು ಹಿರಿತನ) ನಿಯಮಗಳು, 1988 ರ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ.