ಸಾರ್ಥಕ ಜೀವಿ ಎಂದು ಹೆಸರು ಪಡೆದಿರುವ ಶ್ರೀಮತಿ.ವಾಗೀಶ್ವರಿ ಶಾಸ್ತ್ರಿಯವರ ಮಗಳು.ಶ್ರೀಮತಿ.ಕೆ ಆರ್ ಅನ್ನಪೂರ್ಣ ಮೇಡಂ. ಮೊದಲಿಗೆ ಇಂತಹ ತಾಯಿಗೆ ತಕ್ಕ ಮಗಳು ಶ್ರೀಮತಿ.ಕೆ ಆರ್ ಅನ್ನಪೂರ್ಣ ಮೇಡಂ ಅವರೊಂದಿಗೆ ಮಾತನಾಡುವಾಗ ತುಂಬಾ ಇಷ್ಟವಾಗಿದ್ದು ಪಾಪ ಅವರ ಬಗ್ಗೆ ಏನೂ ಹೇಳಿಕೊಳ್ಳಲಿಲ್ಲ.
ನಾನೇ ಕೆ ಆರ್ ಅಂದರೆ ಏನು ಮೇಡಂ ಅಂದಾಗ ಕೊಣನೂರು ರಾಮಕೃಷ್ಣ ಶಾಸ್ತ್ರಿ ನಮ್ಮ ತಂದೆಯವರು.ಕೊಣನೂರು ಅರಕಲಗೂಡು ರಾಮನಾಥಪುರ ಈ ಭಾಗದಲ್ಲಿ ಬರುತ್ತದೆ ಎಂದರು. ಅವರ ಬಗ್ಗೆ ಏನೂ ಹೇಳದೆ ಅವರ ಕುಟುಂಬದ ಬಗ್ಗೆ ಹೇಳುತ್ತಾ ಹೋದರು.ಮೈಸೂರಿನ ಶ್ರೀಕಂಠ ಶಾಸ್ತ್ರಿಗಳು ತಮ್ಮ ತಾತ ಅಂತಲೂ ರಾಮಕೃಷ್ಣಶಾಸ್ತ್ರಿ ತನ್ನ ತಂದೆ ಅಂತಲೂ ಮುಂದುವರೆಸುತ್ತಾ ಹೋದವರು ನಮ್ಮದು ಸಂಗೀತದ ಕುಟುಂಬ.
ಹರಿಕತೆ ಹೇಳುತ್ತಿದ್ದ ಕುಟುಂಬ.ನನ್ನ ಅಕ್ಕ ಸಂಗೀತದಲ್ಲಿ ತುಂಬಾ ಹೆಸರು ಮಾಡಿದ್ದಾರೆ.ನನ್ನ ತಂಗಿ ಕೆ ಆರ್ ಗೀತಾ ಕೂಡಾ ಅತ್ಯುತ್ತಮ ಸಂಗೀತದ ಟೀಚರ್.ನಮ್ಮಪ್ಪ ಕೂಡಾ ಸಂಗೀತದ ಟೀಚರ್.ದೊಡ್ಡಪ್ಪ ಚಿಕ್ಕಪ್ಪ ಹೀಗೆ ಇಡೀ ಕುಟುಂಬದ ಬಗ್ಗೆ ಸಂಭ್ರಮದಿಂದ ಹೇಳಿಕೊಳ್ಳುತ್ತಾ ಹೋದರು.ವಾಗ್ದೇವಿ ಕಲಾನಿಕೇತನ ಎಂಬ ವೆಬ್ಸೈಟ್ ಬಗ್ಗೆ ಯೂಟ್ಯೂಬ್ ಬಗ್ಗೆ ಮಾಹಿತಿ ನೋಡಿ ಎಂದರು.ನಿಜಕ್ಕೂ ಸಾಕಷ್ಟು ಅಚ್ಚರಿಗಳು ಗಮನಕ್ಕೆ ಬಂತು.
ಸಂಪ್ರದಾಯದ ಹಾಡುಗಳ ಪುಸ್ತಕ ಬರೆದ ಶ್ರೀಮತಿ ವಾಗೀಶ್ವರಿ ಶಾಸ್ತ್ರಿ ಶ್ರೀಮತಿ.ಕೆ ಆರ್ ಅನ್ನಪೂರ್ಣ ಮೇಡಂ ಅವರ ಅಮ್ಮ.ಅವರ ಸಾಧನೆ ಸಮಗ್ರ ಕುಟುಂಬದ ಸಂಗೀತ ಸಾಹಿತ್ಯ ಸಂಸ್ಕಾರಗಳ ನೆಲೆಯಲ್ಲಿ ಪ್ರತಿಯೊಂದೂ ವಿಶೇಷವೇ ಎನಿಸ ತೊಡಗಿತು.
ನನ್ನೊಂದಿಗೆ ಮಾತನಾಡುವಾಗ ನೀವು ಶ್ರೀಮತಿ.ವಿನಯ ಸುವರ್ಣ ಮೇಡಂ ಬಗ್ಗೆ ಬರೆದಿರೋದು ಓದಿದೆ.ಅವರು ನನ್ನ ಆಪ್ತ ಗೆಳತಿ ಅವರಂತೆಯೇ ನಮ್ಮ ಜೊತೆ 1976ರಲ್ಲಿ ಶೇಷಾದ್ರಿಪುರಂ ಶಾಲೆಗೆ ಸೇರಿದ ಶ್ರೀಮತಿ.ಎಂ ಜಿ ಪ್ರಭಾ ಕೂಡಾ ಉತ್ತಮ ಗೆಳತಿ ನಾವೆಲ್ಲರೂ ಇಂದಿಗೂ ಪರಿಚಯದಲ್ಲಿದ್ದೇವೆ.
ನನ್ನ ಬಗ್ಗೆ ಯಾಕೆ ಬರೆಯುತ್ತೀರಾ ಪಾಪ. ನಾನೊಬ್ಬ ಸಾಮಾನ್ಯ ಟೀಚರ್ ಅಂದ್ರು ಮತ್ತು ತಮ್ಮ ದಿನಚರಿ ಉಭಯ ಕುಶಲೋಪರಿ ಹೇಳಲು ಶುರು ಮಾಡಿದರು.ಈಗ 78 ವರ್ಷಗಳ ಕೆ ಆರ್ ಅನ್ನಪೂರ್ಣ ಮೇಡಂ ಇಂದಿಗೂ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಮಾಡಿಕೊಂಡಿದ್ದಾರೆ.ಸರಳ ಶಿಕ್ಷಕಿ ಎಂದರೆ ಹೇಗಿರುತ್ತಾರೆ ಅಂತ ತೋರಿಸಿ ಬಿಟ್ಟರು.ಮೇಡಂ ನಿಮಗೆ ಶಿಕ್ಷಕರಾಗಿದ್ದು ಅನುಭವ ಏನೆನ್ನಿಸುತ್ತದೆ ಎಂದಾಗ ಪ್ರಾಮಾಣಿಕವಾಗಿ ಬಂದ ಉತ್ತರ ನಾನು ಟೀಚರ್ ಆಗಬೇಕು ಅಂತ ಬಯಸಿದವಳೇ ಅಲ್ಲ.ಅಕಸ್ಮಾತ್ ಶಿಕ್ಷಕಿಯಾದೆ ಎಂದು ಬಿಟ್ಟರು.
ಹಾಸನ ಅರಸೀಕೆರೆ ಸುತ್ತಾ ಮುತ್ತಾ ಅಪ್ಪ ಅಮ್ಮನ ಜೊತೆ ಎಲ್ಲೆಲ್ಲೋ ವ್ಯಾಸಂಗ ಮಾಡಿ ನಂತರ ಹಾಸನಕ್ಕೆ ಬಂದು ಸೇರಿ ಅಲ್ಲಿ ದಕ್ಷಿಣ ಭಾರತ ಹಿಂದಿ ಪರಿಷತ್ ಪರೀಕ್ಷೆ ತೆಗೆದುಕೊಂಡು ಪಾಸು ಮಾಡಿ ಹಾಸನದಲ್ಲಿ ಮುನಿಸಿಪಲ್ ಕಾಲೇಜು,ಬೇಲೂರು ಸರ್ಕಾರಿ ಕಾಲೇಜು ಇಲ್ಲೆಲ್ಲಾ ಸೇವೆ ಸಲ್ಲಿಸಿ ವೈಯಕ್ತಿಕ ಕಾರಣದಿಂದ ಸರ್ಕಾರಿ ಕಾಲೇಜಿಗೆ ರಾಜೀನಾಮೆ ನೀಡಿ ಬಂದು ಸೇರಿದ್ದು ಬೆಂಗಳೂರಿನ ಶೇಷಾದ್ರಿಪುರಂ ಪ್ರೌಢಶಾಲೆ.ಹಿಂದೆ ಹಿಂದಿ ಶಿಕ್ಷಕಿಯಾಗಿದ್ದವರು ಕನ್ನಡ ಶಿಕ್ಷಕಿಯಾಗಿ ಸೇವೆಯಲ್ಲಿ ತೊಡಗಿಸಿಕೊಂಡರು.
ಶಾಲೆಯ ವಾರ್ಷಿಕ ಸಂಚಿಕೆ ವಿಶೇಷ ಸಮಾರಂಭಗಳಲ್ಲಿ ಪಾಲ್ಗೊಂಡೆ ಎನ್ನುವ ಸಂಭ್ರಮ ಹೊಂದಿರುವ ಮೇಡಂ ಅವರದು ಅಗಾಧ ನೆನಪಿನ ಶಕ್ತಿ. ಯಾವುದೇ ಬ್ಯಾಚ್ ವಿದ್ಯಾರ್ಥಿಗಳನ್ನು ನೋಡಿದರೂಗುರುತಿಸುವುದು. 78-79 ಸಾಲಿನ ವಿದ್ಯಾರ್ಥಿಗಳು ನಲವತ್ತು ಜನ ಕರೆದು ಸನ್ಮಾನ ಮಾಡಿದ್ದನ್ನು ಸ್ಮರಿಸುವ ಬದುಕಿನ ಬಗ್ಗೆ ಸೂಕ್ಷ್ಮಗಳನ್ನು ತಿಳಿಸುತ್ತಾ ಎಲ್ಲಿ ಎಷ್ಟು ಬೇಕೋ ಅಷ್ಟೇ ಮಾತನಾಡಿ ಗಮನ ಸೆಳೆದರು.ಅವರು ಶಾಲೆಯಲ್ಲಿ ಹೇಳಿಕೊಡುತ್ತಿದ್ದ ಪ್ರಾರ್ಥನೆಯನ್ನು ಇಂದಿಗೂ ಅವರ ವಿದ್ಯಾರ್ಥಿಗಳು ಮರೆತಿಲ್ಲ.ಅವರ ಅನೇಕ ವಿದ್ಯಾರ್ಥಿಗಳೇ ಇಂದು ಹಿರಿಯ ನಾಗರಿಕರು.
ಅನ್ನಪೂರ್ಣ ಮೇಡಂ ಅವರ ಅಮ್ಮ ಒಳ್ಳೆಯ ಬರಹಗಾರ್ತಿ “ಸಂಪ್ರದಾಯದ ಹಾಡುಗಳು” ಎಂಬ ಪುಸ್ತಕ ಬರೆದಿದ್ದರು.ಇನ್ನೂ ಹಲವು ಸಾಧನೆ ಮಾಡಿದ್ದಾರೆ.ಇವರ ತಂಗಿ ಕೆ ಆರ್ ಗೀತಾ ಕೂಡಾ ನನ್ನ ಗೆಳತಿ ಉತ್ತಮ ಸಂಗೀತ ಶಿಕ್ಷಕಿ ನಾನಂತೂ ಅವರನ್ನು ನಮ್ಮ ಶಾಲೆಯ “ಗಾನಕೋಗಿಲೆ” ಎಂದೇ ಕರೆಯುತ್ತಿದ್ದೆ.ನಾವೆಲ್ಲ ಉತ್ತಮ ಗೆಳತಿಯರು ಅಂತ ವಿನಯ ಸುವರ್ಣ ಮೇಡಂ ಅಭಿಮಾನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅನ್ನಪೂರ್ಣ ಮೇಡಂ ನೀವು ನಮ್ಮ ಮನೆಗೆ ಯಾವಾಗ ಬೇಕಾದರೂ ಬರಬಹುದು ಅಂತ ಮುಕ್ತ ಆಹ್ವಾನ ನೀಡಿ ಮನುಷ್ಯ ಪ್ರೀತಿ ತೋರಿದರು.
ಅವರ ಭಾಷಣವನ್ನೂ ಕೇಳುವ ಸುಯೋಗ ನನ್ನದಾಗಿತ್ತು.ಅವರ ಬಡಾವಣೆಯ ನಗರ ಕೇಂದ್ರ ಗ್ರಂಥಾಲಯದಲ್ಲಿ ನಾನೊಂದು ಕಾರ್ಯಕ್ರಮದ ಅತಿಥಿಯಾಗಿ ಹೋಗಿದ್ದಾಗ ನನ್ನನ್ನು ನೋಡಲು ಬಂದಿದ್ದ ಮೇಡಂ ವೇದಿಕೆಯಲ್ಲಿ ನನ್ನ ಬಗ್ಗೆಯೇ ಮಾತನಾಡಿ ಬಿಟ್ಟರು.ಕಾರ್ಯಕ್ರಮ ಮುಗಿದ ನಂತರ ಬಹಳ ಅಕ್ಕರೆಯಿಂದ ಅವರ ಮನೆಗೂ ಕರೆದುಕೊಂಡು ಹೋಗಿ ಆತಿಥ್ಯ ನೀಡಿ ಅತ್ಯುತ್ತಮ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು. ಇಂತಹ ದಿವ್ಯಾತ್ಮದ ಮೇಡಂ ಬಗ್ಗೆ ಏನು ತಾನೇ ಬರೆಯಲಿ ಅಂತ ತಬ್ಬಿಬ್ಬಾಗಿ ಯಥಾವತ್ತಾಗಿ ಏನು ನಡೆಯಿತೋ ಅಷ್ಟೇ ಬರೆದಿದ್ದೇನೆ.ಒಂದು ಮಿಲಿಗ್ರಾಂ ಕೂಡಾ ಬದಲಾಯಿಸಿಲ್ಲ. ಅನ್ನಪೂರ್ಣ ಮೇಡಂ ಅವರಿಗೆ ಉತ್ತಮ ಆರೋಗ್ಯ ಕೋರುತ್ತೇನೆ.
ಸಿ ಎನ್ ರಮೇಶ್