ದೊಡ್ಡಬಳ್ಳಾಪುರ: ಗುಂಡು ತೋಪು, ಸರ್ಕಾರಿ ಗೋಮಾಳ, ಕೆರೆ ಅಂಗಳ ಹಾಗೂ ಸರ್ಕಾರಿ ಜಾಗಗಳನ್ನು ರಕ್ಷಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಕೆಆರ್ಎಸ್ ಪಕ್ಷದ ತಾಲೂಕು ಅಧ್ಯಕ್ಷ ಶಿವಶಂಕರ್ ವಾಗ್ದಾಳಿ ನಡೆಸಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಇಡೀ ತಾಲ್ಲೂಕಿನಲ್ಲಿ ಸರ್ಕಾರಿ ಜಾಗಗಳನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ವಂಚನೆ ಮಾಡುತ್ತಿರುವ ಭೂಗಳ್ಳರ ರಕ್ಷಣೆ ಮಾಡುತ್ತಿರುವ ಅಧಿಕಾರಿಗಳು, ರಾಜಕಾರಣಿಗಳು ತಾವೇ ಖುದ್ದು ಅಳಿದುಳಿದ ಸರ್ಕಾರಿ ಜಾಗಗಳನ್ನ ಭೂಗಳ್ಳರು ಕದಿಯಲು ಹಾಗೂ ಅತಿಕ್ರಮ ಪ್ರವೇಶ ಮಾಡಲು, ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಲು ಸಹಾಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ತಾಲೂಕಿನ ಕೋಲಿಗೆರೆ ಗ್ರಾಮದ ಕೆರೆಯನ್ನು ಭೂಗಳ್ಳರು ಕಬಳಿಸಿರುವ ಬಗ್ಗೆ ಈಗಾಗಲೇ ಗ್ರಾಮ ಪಂಚಾಯತಿಯಿಂದ ರಾಜ್ಯಪಾಲ ರವರೆಗೆ ದೂರು ನೀಡಲಾಗಿದೆ ಆದರೂ ಸಹ ಯಾವುದೇ ರೀತಿಯ ಕ್ರಮಜರುಗಿಸದಿರುವುದು ವಿಪರ್ಯಾಸ.ಪ್ರತಿಗ್ರಾಮದಲ್ಲಿ ಗುಂಡು ತೊಪು, ಗೋಮಾಳ, ಕೆರೆ ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ಜಾಗದ ಪಟ್ಟಿಯನ್ನು ಪ್ರತಿಗ್ರಾಮದ ಹೆಬ್ಬಾಗಿಲಲ್ಲಿ ಅಥವಾ ಪಂಚಾಯತಿ ಆವರಣದಲ್ಲಿ ಪ್ರದರ್ಶನ ಮಾಡಬೇಕು ಎಂದರು.
ನಂತರ ಜಿಲ್ಲಾಧಿಕಾರಿ ಡಾ. ಎನ್ .ಶಿವಶಂಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಮಯದಲ್ಲಿ ಕೆಆರ್ ಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.