ದಾವಣಗೆರೆ: ಚುನಾವಣೆ ಎನ್ನುವುದು ನಾವು ತಪ್ಪಿಸಿಕೊಳ್ಳಲಾಗದ ಕರ್ತವ್ಯ, ಮತದಾನದ ದಿನದಂದು ಮತಗಟ್ಟೆಯ ಒಳಗೆ ನೀವೇ ಮುಖ್ಯಸ್ಥರು, ನಿಮ್ಮ ಆತ್ಮವಿಶ್ವಾಸ ದಿಂದ ಚುನಾವಣೆ ಕರ್ತವ್ಯ ನಿರ್ವಹಿಸಿ ಎಂದು ಎಂದು ಸಾಮಾನ್ಯ ಚುನಾವಣಾ ವೀಕ್ಷಕರಾದ ಕುಮಾರ ರಮಣಿ ಕಾಂತ್ ತಿಳಿಸಿದರು.ಜಿಲ್ಲಾಡಳಿತ ಆವರಣದಲ್ಲಿನ ತುಂಗಭದ್ರ ಭವನದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.ಆತ್ಮವಿಶ್ವಾಸವು ನಿಮಗೆ ಚುನಾವಣಾ ಆಯೋಗದ ಎಲ್ಲಾ ನಿಯಮಗಳ ಬಗ್ಗೆ ಸರಿಯಾದ ಅರಿವಿದ್ದರೆ ಮಾತ್ರ ಬರುತ್ತದೆ. ಆದ್ದರಿಂದ ಈ ತರಬೇತಿಯನ್ನು ಮತ್ತು ಮುಂದಿನ ತರಬೇತಿಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಿ. ನಿಮಗೆ ನೀಡಿರುವ ಎಲ್ಲಾ ಸೂಚನೆಗಳನ್ನು ಮತ್ತು ಕೈಪಿಡಿಯನ್ನು ಚೆನ್ನಾಗಿ ಓದಿಕೊಳ್ಳಿ, ಹಳೆಯ ಅನುಭವವಿದೆ ಎಂದು ಅಸಡ್ಡೆ ಮಾಡಬೇಡಿ ಪ್ರತಿ ಚುನಾವಣೆಯಲ್ಲೂ ಹೊಸ ನಿಯಮಗಳು ಬರುತ್ತವೆ. ಒಂದು ತಂಡವಾಗಿ ಕೆಲಸ ಮಾಡಿ, ಮತಗಟ್ಟೆಯೊಳಗೆ ಅಧಿಕಾರಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶವಿರಬಾರದು ಎಂದರು.ವಿಶೇಷವಾಗಿ ಮಾಕ್ ಪೋಲ್ ಮತಯಂತ್ರಗಳ ಬಳಕೆ ಮತ್ತು ರಿಜಿಸ್ಟರ್ಗಳನ್ನು ನಿರ್ವಹಿಸುವ ಬಗ್ಗೆ ಹೆಚ್ಚು ಗಮನ ಹರಿಸಿ. ಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡುಬಂದಲ್ಲಿ ಗಾಬರಿಯಾಗಬೇಡಿ, ಅದನ್ನು ಹೇಗೆ ಸರಿಪಡಿಸಬೇಕೆಂದು ತಿಳಿದುಕೊಳ್ಳಿ. ಮತದಾನಕ್ಕೆ ಬರುವ ಜನರೊಂದಿಗೆ ವಿನಯದಿಂದ ವರ್ತಿಸಿ ಮತ್ತು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ, ನಾವೆಲ್ಲರೂ ಸೇರಿ ಈ ಚುನಾವಣೆಯನ್ನು ಯಾವುದೇ ಸಮಸ್ಯೆಗಳಿಗೆ ಅವಕಾಶವಿಲ್ಲದಂತೆ ಯಶಸ್ವಿಯಾಗಿ ನಡೆಸಿಕೊಡೋಣ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಗಂಗಾಧರ ಸ್ವಾಮಿ ಜಿ ಎಂ ಅವರು ಮಾತನಾಡಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ ನಿರ್ದೇಶನದಂತೆ ಪಿ ಆರ್ ಓ ಗಳಿಗೆ ವಿಶೇಷ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ, ವೆಚ್ಚ ವೀಕ್ಷಕರು ಮತ್ತು ಸಾಮಾನ್ಯ ವೀಕ್ಷಕರ ರನ್ನು ಚುನಾವಣಾ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ನೇಮಿಸಲಾಗಿದೆ ಎಂದರು. ಗಡಿಯಲ್ಲಿ ಸೈನಿಕರು ಹೇಗೆ ದೇಶವನ್ನು ಕಾಯುತ್ತಾರೋ, ಹಾಗೆಯೇ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ಕೂಡ ಪ್ರಜಾಪ್ರಭುತ್ವದ ಸೈನಿಕರಂತೆ ಕೆಲಸ ಮಾಡಬೇಕು. ತರಬೇತಿಯಲ್ಲಿ ಶ್ರದ್ಧೆಯಿಂದ ಕಲಿತಲ್ಲಿ ಚುನಾವಣಾ ದಿನದ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.ಈ ಬಾರಿ ಪಿ.ಆರ್.ಒ ಎಂಬ ಹೊಸ ಮೊಬೈಲ್ ಹೊಸ ತಂತ್ರಾಂಶವನ್ನು ಪರಿಚಯಿಸಲಾಗಿದೆ. ಫಾರ್ಮ್ 17 ಭರ್ತಿ ಮಾಡುವುದು, ಮಾಕ್ ಪೋಲ್ ಅಂಕಿಅಂಶಗಳು ಮತ್ತು ಪ್ರತಿ ಎರಡು ಗಂಟೆಗೊಮ್ಮೆ ಮತದಾನದ ಮಾಹಿತಿಯನ್ನು ಈ ಆಪ್ ಮೂಲಕವೇ ಅಪ್ಡೇಟ್ ಮಾಡಬೇಕು. ಸಿಬ್ಬಂದಿಗಳು ಕನಿಷ್ಠ ಆಂಡ್ರಾಯಿಡ್ 8 ಆವೃತ್ತಿಯ ಫೋನ್ ಹೊಂದಿರಬೇಕು ಅಥವಾ ಐಫೋನ್ ಬಳಸಬಹುದು. ಚುನಾವಣೆ ಎಂಬುದು ಮುಖ್ಯವಾಗಿ ಮಾನವ ಸಂಪನ್ಮೂಲ ನಿರ್ವಹಣೆ, ಯಂತ್ರೋಪಕರಣಗಳ ನಿರ್ವಹಣೆ, ಸಮಯ ನಿರ್ವಹಣೆ ಮೂರು ವಿಷಯಗಳ ನಿರ್ವಹಣೆಯಾಗಿದೆ. ಇಂದು ಮೊದಲ ಹಂತದ ತರಬೇತಿ ಯಾಗಿದ್ದು ಎರಡನೇ ಹಂತದ ತರಬೇತಿ ಏಪ್ರಿಲ್ 3 ರಂದು ಆಯೋಜಿಸಲಾಗಿದೆ ಎಂದು ತಿಳಿಸಿದರು. ಉಪನ್ಯಾಸಕ ಮನೋಹರ ಹರಿಹರ ರವರು ಇವಿಎಂ ಮತ್ತು ಇತರ ತಾಂತ್ರಿಕ ವಿಷಯಗಳ ಬಗ್ಗೆ ತರಬೇತಿ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್ ಟಿ, ಸಿ.ಇ.ಒ ಗಿತ್ತೇ ಮಾಧವ ವಿಠಲರಾವ್ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.



