ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಯಾರು, ಯಾರನ್ನು ಬೇಕಾದರೂ ಭೇಟಿ ಮಾಡಿ ಮತ ಕೇಳುವ ಅವಕಾಶಗಳಿವೆ. ತಮ್ಮನ್ನು ಬೆದರಿಸಲು ರಾಜ್ಯಸರ್ಕಾರ ದುರುದ್ದೇಶಪೂರ್ವಕವಾಗಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಪ್ರಕರಣ ದಾಖಲಿಸಿದೆ ಎಂದು ರಾಜ್ಯಸಭಾ ಚುನಾವಣೆಯ ಎನ್ಡಿಎ ಅಭ್ಯರ್ಥಿ ಕುಪೇಂದ್ರರೆಡ್ಡಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರು ನೀಡಿರುವುದು ಮತ್ತು ಕೇಸು ದಾಖಲಿಸುವ ಕ್ರಮ ಕೂಡ ಕ್ರಮಬದ್ಧವಾಗಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರು ದೂರು ನೀಡಿದ್ದಾರೆ. ಅದರಲ್ಲಿ ಫೆ.22 ರಂದು ನಡೆಯಲಿರುವ ಚುನಾವಣೆಯಲ್ಲಿ ಎಂದು ನಮೂದಿಸಲಾಗಿದೆ. ರಾಜ್ಯಸಭೆ ಚುನಾವಣೆಯಿರುವುದು ಫೆ.27 ರಂದು. 22 ರಂದು ಯಾವ ಚುನಾವಣೆ ನಡೆಯಲಿದೆ ಎಂಬ ಬಗ್ಗೆ ನನಗಂತೂ ಮಾಹಿತಿ ಇಲ್ಲ.
ಆತುರಾತುರವಾಗಿ ದೂರು ಕೊಡುವಾಗ ಈ ರೀತಿಯ ಲೋಪಗಳು ಕಂಡುಬಂದಿವೆ. ವಾಸ್ತವವಾಗಿ ಚುನಾವಣೆಗೆ ಸಂಬಂಧಪಟ್ಟಂತೆ ಯಾವುದೇ ತಕರಾರುಗಳಿದ್ದರೂ ಅದನ್ನು ಆಯೋಗಕ್ಕೆ ಲಿಖಿತವಾಗಿ ತಿಳಿಸಬೇಕು. ಆಯೋಗ ಪೊಲೀಸ್ ಆಯುಕ್ತರಿಗೆ ದೂರನ್ನು ರವಾನಿಸುತ್ತದೆ.
ಆಯುಕ್ತರು ಪರಿಶೀಲನೆ ನಡೆಸಿ ಮೇಲ್ನೋಟಕ್ಕೆ ಸತ್ಯಾಂಶ ಕಂಡುಬಂದಿದ್ದರೆ ಮ್ಯಾಜಿಸ್ಟ್ರೇಟ್ರ ಅನುಮತಿ ಪಡೆದು ಪ್ರಕರಣ ದಾಖಲಿಸಬೇಕು. ಆದರೆ ಇಲ್ಲಿ ಏಕಾಏಕಿ ಶಾಸಕರು ದೂರು ನೀಡುತ್ತಾರೆ. ಸೆಕ್ಷನ್ 506 ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಇದು ಸಂಪೂರ್ಣ ನಿಯಮ ಬಾಹಿರವಾಗಿದೆ. ಈ ನಿಟ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು.
ನಾನು ಈ ಬಾರಿ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲೇ ಸ್ಪರ್ಧೆ ಮಾಡಿದ್ದೇನೆ. ಸೋಲು-ಗೆಲುವು ಅನಂತರದ ವಿಚಾರ. ಈ ಬಾರಿಯೂ ಸೋಲಿಸುವುದಾದರೆ ಸೋಲಿಸಲಿ, ಕಾಂಗ್ರೆಸ್ನಲ್ಲೂ ನನಗೆ ಬಹಳಷ್ಟು ಸ್ನೇಹಿತರಿದ್ದಾರೆ. ಅವರಿಂದ ನಾನು ಆತ್ಮಸಾಕ್ಷಿ ಮತ ಕೇಳುತ್ತೇನೆ ಎಂದು ಹೇಳಿದರು.