ಬೆಂಗಳೂರು: ಹೆಚ್ಚಿನ ಪತ್ರಕರ್ತರು ತಮ್ಮ ಸೇವೆಯ ನಿವೃತ್ತಿಯ ಬಳಿಕ ಸದ್ದಿಲ್ಲದೆ ಮರೆಗೆ ಸರಿಯುತ್ತಾರೆ. ಕೆಯುಡಬ್ಲ್ಯೂಜೆ ಅಂಥಹ ಹಿರಿಯ ಪತ್ರಕರ್ತರ ವೃತ್ತಿ ಜೀವನದ ಸಾಧನೆಯನ್ನು ಶ್ಲಾಘಿಸಿ, ನಮ್ಮ ಮನೆಯಲ್ಲಿಯೇ ಕುಟುಂಬದ ಸಮ್ಮುಖದಲ್ಲಿ ಗೌರವಿಸುತ್ತಿರುವುದು ಅವಿಸ್ಮರಣೀಯ. ಈ ಕ್ಷಣಕ್ಕೆ ನನ್ನ ಜನ್ಮ ಸಾರ್ಥಕ ಎಂದು ಹಿರಿಯ ಪತ್ರಕರ್ತ ಟಿ.ಜಿ. ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಏರ್ಪಡಿಸಿದ್ದ `ಮನೆಯಂಗಳದಲ್ಲಿ ಮನದುಂಬಿ ನಮನ’ ಕಾರ್ಯಕ್ರಮದಲ್ಲಿ ಸಂಘದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ ಭಾವುಕರಾದರು.ಕೋಲಾರ ಜಿಲ್ಲೆಯ ಮಾಸ್ತಿಯಲ್ಲಿ ಹುಟ್ಟಿ ಬೆಳೆದ ನಾನು ಶಾಲಾ ಕಲಿಕೆಯ ವೇಳೆ ಪತ್ರಿಕೋದ್ಯಮ ಪ್ರವೇಶಿಸಬೇಕೆಂದು ಹಂಬಲಿಸಿ, ಬದ್ಧತೆಯಿಂದ ಕಾರ್ಯನಿರ್ವಹಿಸುವ ಮೂಲಕ ಪತ್ರಿಕೋದ್ಯಮದಲ್ಲಿ ತನ್ನದೇ ಛಾಪನ್ನು ಮೂಡಿಸಲು ಸಾಧ್ಯವಾಗಿದೆ ಎಂದರು.
ಜನವಾಣಿ, ಮೇನಕಾ ಪತ್ರಿಕೆಯಲ್ಲಿ ಕೆಲಸ ಮಾಡಿದೆ. ಕನ್ನಪ್ರಭ ಪತ್ರಿಕೆ ಪ್ರಾರಂಭವಾಗುವ ಒಂದು ತಿಂಗಳು ಮೊದಲು ಆ ಸಂಸ್ಥೆ ಸೇರಿ ಅಲ್ಲಿಯೇ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತನಾದೆ. ಬಳಿಕ ದೆಹಲಿ ವಾರ್ತೆ ಪತ್ರಿಕೆಗೆ ಒಂದು ದಶಕಗಳ ಕಾಲ ಕೆಲಸ ಮಾಡಿದೆ. ಸುಮಾರು ನಾಲ್ಕೂವರೆ ದಶಕಗಳ ಕಾಲ ಪತ್ರಕರ್ತನ ಪ್ರಯಾಣ ಎಲ್ಲಾ ಬಗೆಯ ಅನುಭವವನ್ನು ನೀಡಿದೆ ಎಂದರು.
ನಿಜ ಹೇಳಬೇಕು ಅಂದರೆ, ಮಾಧ್ಯಮ ಅಕಾಡೆಮಿ ಸೇರಿದಂತೆ ಯಾವ ಸಂಸ್ಥೆಯಿಂದಲೂ ಪ್ರಶಸ್ತಿ ಬರಲಿಲ್ಲ. ಅದನ್ನು ನಾನು ನಿರೀಕ್ಷೆಯೂ ಮಾಡಲಿಲ್ಲ. ಡಿವಿಜಿ ಹುಟ್ಟುಹಾಕಿದ ವೃತ್ತಿಪರವಾದ ಪತ್ರಕರ್ತರ ಸಂಘ ಮನೆಗೆ ಬಂದು ಸನ್ಮಾನಿಸುತ್ತಿರುವುದು ಎಲ್ಲಾ ಪ್ರಶಸ್ತಿಗಳಿಗಿಂತ ಮಿಗಿಲು ಎಂದರು.
ಅಂದು ಸಿಎಂ ನಿಜಲಿಂಗಪ್ಪನವರ ಒತ್ತಾಸೆಯಂತೆ ರಾಮನಾಥ ಗೋಯೆಂಕಾ ಅವರು ರಾಜ್ಯದಲ್ಲಿ ಕನ್ನಡ ಪತ್ರಿಕೆಯನ್ನು ಪ್ರಾರಂಭಿಸಲು ನಿರ್ಧರಿಸಿ ಕನ್ನಡ ಪ್ರಭ ಪ್ರಾರಂಭಿಸಿದರು. 1967ರಲ್ಲಿ ಆ ಪತ್ರಿಕೆ ಮೊದಲ ಮುದ್ರಣವಾಗಿ ಬಂದಾಗ ಗೋಯೆಂಕಾ ಕೈಗೆತ್ತಿಕೊಂಡರು.
ಆ ಸಂದರ್ಭದಲ್ಲಿ ನಾನು ಅವರ ಜೊತೆಯಲ್ಲಿಯೇ ಇದ್ದ ಕ್ಷಣ ಮರೆಯಲಾಗದು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ನಾಡಿನ ಹಿರಿಯ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ನಿಜಕ್ಕೂ ಸಂಘದ ಪಾಲಿಗೆ ಹೆಮ್ಮೆಯ ವಿಷಯ. ಹಿರಿಯ ಪತ್ರಕರ್ತರ ಸನ್ಮಾನ ಸ್ವೀಕರಿಸಿ ಸಂಘದ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅಶ್ವತ್ಥ್ ನಾರಾಯಣರಂತಹ ಹಿರಿಯ ಪತ್ರಕರ್ತರು ಕನ್ನಡ ಪತ್ರಿಕೋದ್ಯಮಕ್ಕೆ ನೀಡಿದ ಸೇವೆ ನಿಜಕ್ಕೂ ಪ್ರಶಂಸನೀಯ ಎಂದೂ ಹೇಳಿದರು.
IFWJ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಅಶ್ವತ್ಥ ನಾರಾಯಣರು ತಮ್ಮ ವೃತ್ತಿಯಲ್ಲಿ ಕ್ರಿಯಾಶೀಲ ಗುಣವನ್ನು ಮೈಗೂಡಿಸಿಕೊಂಡಿದ್ದರು. ಹಾಗೆಯೇ ಸಂಸ್ಥೆಗೆ ನಿಷ್ಠಾವಂತರಾಗಿ ದುಡಿದಿದ್ದರು ಎಂದು ತಮ್ಮ ಜೊತೆಗಿನ ಕಚೇರಿಯ ಒಡನಾಟವನ್ನು ಮೆಲುಕಿ ಹಾಕಿದರು.ಟಿ.ಜಿ. ಅಶ್ವತ್ಥ ನಾರಾಯಣ ಅವರನ್ನು ಗೌರವಿಸುವ ಸಂದರ್ಭದಲ್ಲಿ ಅವರ ಪತ್ನಿ ಸಾವಿತ್ರಿ, ಪುತ್ರ ಶಿವಪ್ರಸಾದ್, ಸೊಸೆ ಅಮೃತಾ, ಪುತ್ರಿ ವಿಜಯಪ್ರಕಾಶ, ಮೊಮ್ಮಗ ಆದರ್ಶ್ ಮತ್ತಿತರರು ಉಪಸ್ಥಿತರಿದ್ದರು.ರಾಜ್ಯ ಘಟಕದ ಖಜಾಂಚಿ ವಾಸುದೇವ ಹೊಳ್ಳ ಸ್ವಾಗತಿಸಿದರು. ಬೆಂಗಳೂರು ನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್ ವಂದಿಸಿದರು. ನಗರ ಜಿಲ್ಲಾ ಘಟಕದ ಶಿವರಾಜ್, ಶರಣ ಬಸಪ್ಪ ಹಾಜರಿದ್ದರು.