ಬೇಲೂರು: ತಾಲ್ಲೂಕು, ಮಾದಿಹಳ್ಳಿ ಹೋಬಳಿ ಆಂದಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಂದಲೆ ಕಾಲೋನಿ ಗ್ರಾಮದ ಜನರು ಕಳೆದ
ಹಲವು ವರ್ಷಗಳಿಂದ ಮೂಲಭೂತ ಸೌಲಭ್ಯಗಳ ಕೊರತೆಯಿಂದ ತೀವ್ರ ಸಂಕಸ್ಟ ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿನ ತೀವ್ರ ಅನಾನುಕೂಲ, ರಸ್ತೆ ಮತ್ತು ಚರಂಡಿಗಳ ಅವ್ಯವಸ್ಥೆ, ಹಾಗೂ ಗ್ರಾಮದಲ್ಲಿ ಸ್ವಚ್ಛತೆಯ ಕೊರತೆ ಗ್ರಾಮಸ್ಥರನ್ನು ಕಂಗಾಲು ಮಾಡಿದೆ. ಗ್ರಾಮದ ಹಲವೆಡೆ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಈಗಿರುವ ಚರಂಡಿಗಳು ಮುಚ್ಚಿಹೋಗಿದ್ದು, ಮಳೆ ನೀರು ಮತ್ತು ಕೊಳಚೆ ನೀರು ಒಂದೇ ಮಾರ್ಗದಲ್ಲಿ
ಹರಿದು ರಸ್ತೆಗಳ ಮಧ್ಯೆ ನಿಂತು ದುರ್ವಾಸನೆ ಹರಡುತ್ತಿದೆ. ಕಸ, ಕಡ್ಡಿ ಹಾಗೂ ತ್ಯಾಜ್ಯ ವಸ್ತುಗಳು ಚರಂಡಿಗಳಲ್ಲಿ ತೂರಿ ಗ್ರಾಮವೇ
ಅಸ್ವಚ್ಛವಾಗಿದೆ.
ಈ ದುರ್ವಾಸನೆಯಿಂದ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗಗಳು ತಗುಲುತ್ತಿದ್ದು, ಅನೇಕರು ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ಸಾವಿರಾರು ರೂಪಾಯಿಗಳನ್ನು ಖರ್ಚುಮಾಡುವಂತಾಗಿದೆ. ಇದೇ ವೇಳೆ, ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಹಾನಿಗೊಳಗಾಗಿ ಆರು ತಿಂಗಳು
ಕಳೆದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ರಿಪೇರಿ ಮಾಡಿಸದಿರುವುದು ಗ್ರಾಮಸ್ಥರ ಮಅಸಮಾಧಾನಕ್ಕೆ ಕಾರಣವಾಗಿದೆ. ಹಲವಾರು
ಬಾರಿ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಜನರು ತೀವ್ರ
ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರ ಪರವಾಗಿ ಮಾತನಾಡಿದ ಸಮಾಜ ಸೇವಕ, ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಆಂದಲೆ ಆರ್.ಆರ್. ಕೃಷ್ಣಮೂರ್ತಿ ಅವರು, ನಮ್ಮ ಆಂದಲೆ ಕಾಲೋನಿ ಗ್ರಾಮಕ್ಕೆ ಬೇಲೂರಿನ ಮಾನ್ಯ ಶಾಸಕರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಹಾಸನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಖುದ್ದಾಗಿ ಬಂದು ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ ಮತ್ತು ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು ಎಂದು ಆಗ್ರಹಿಸಿದರು. ಗ್ರಾಮಸ್ಥರು ಸರ್ಕಾರದ ಗಮನ ಸೆಳೆಯುತ್ತಾ
ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಆಂದಲೆ ಕಾಲೋನಿ ಗ್ರಾಮಸ್ಥರಾದ ರುದ್ರಮ್ಮ. ರಾಜಯ್ಯ.ಗಂಗಮ್ಮ. ಕಾತಿ೯ಕ್. ಜಯಮ್ಮ. ಪೂರ್ಣಿಮಾ. ಸುಶೀಲಾ. ನಿಂಗರಾಜು. ಎಬಿ ಶಿವಣ್ಣ.ಕಾಂತರಾಜ.ಇತರರು ಇದ್ದರು.