ದಕ್ಷಿಣ ಭಾರತದ ಖ್ಯಾತ ಸಂಗೀತ ಸಂಸ್ಥೆ `ಲಹರಿ ಮ್ಯೂಸಿಕ್’ ಇದೀಗ ಇಬ್ಬರು ದಿಗ್ಗಜರನ್ನು ಮತ್ತೆ ಒಟ್ಟುಗೂಡಿಸುತ್ತಿದೆ. ಎ.ಆರ್. ರೆಹಮಾನ್ ಮತ್ತು ಪ್ರಭುದೇವ ಅವರನ್ನು ಬರೋಬ್ಬರಿ ೨೯ ವರ್ಷಗಳ ನಂತರ ಲಹರಿ ಸಂಸ್ಥೆ ಕರೆತರುತ್ತಿದೆ. `ಮೂನ್ವಾಕ್’ ಸಿನಿಮಾದ ಸಂಗೀತ ಹಕ್ಕುಗಳನ್ನು ಈ ಸಂಸ್ಥೆ ಅಧಿಕೃತವಾಗಿ ಪಡೆದುಕೊಂಡಿದೆ. ಬಿಹೈಂಡ್ವುಡ್ಸ್ನ ಮನೋಜ್ ನಿರ್ಮಲಾ ಶ್ರೀಧರನ್ ಅವರ ನೇತೃತ್ವದಲ್ಲಿ ‘ಮೂನ್ವಾಕ್’ ಸಿನಿಮಾ ನಿರ್ಮಾಣವಾಗುತ್ತಿದೆ. ಸಂಗೀತ, ನೃತ್ಯ ಮತ್ತು ಕೌಟುಂಬಿಕ ಕಥಾಹಂದರದ ಸಿನಿಮಾ ಇದಾಗಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ಮಾಂತ್ರಿಕ ಎ.ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆ ಕಾರಣಕ್ಕೂ ನಿರೀಕ್ಷೆ ದುಪ್ಪಟ್ಟಾಗಿದೆ.
ಈ ಸಹಯೋಗದ ಕುರಿತು ಮಾತನಾಡಿದ ಲಹರಿ ಮ್ಯೂಸಿಕ್ ಸಂಸ್ಥಾಪಕ ಮನೋಹರನ್ ನಾಯ್ಡು, `ಇದು ನಮ್ಮ ಸಂಗೀತ ಉದ್ಯಮದ ೫೦ನೇ ವರ್ಷವಾಗಿದೆ. ‘ಮೂನ್ವಾಕ್’ ಚಿತ್ರದ ಸಂಗೀತ ಪಾಲುದಾರರಾಗಿರುವುದು ಸಂತೋಷ ತಂದಿದೆ. ‘ಮೂನ್ವಾಕ್’ ಸಿನಿಮಾದ ಹಾಡುಗಳು ಚಿತ್ರದ ಹೃದಯ ಬಡಿತದಂತಿವೆ. ಎ.ಆರ್. ರೆಹಮಾನ್ ಅವರ ಅಸಾಮಾನ್ಯ ಸಂಗೀತ ಜಗತ್ತಿನ ಮೂಲೆ ಮೂಲೆಗೆ ತಲುಪಲಿದೆ. ನಾನು ೫ ಹಾಡುಗಳನ್ನು ಕೇಳಿದ್ದೇನೆ. ಅವೆಲ್ಲವೂ ವಿಭಿನ್ನ ಮತ್ತು ವಿಶಿಷ್ಟವಾಗಿವೆ. ಮನೋಜ್ ಎನ್. ಎಸ್. ಅವರ ಪ್ರಾಮಾಣಿಕ ಪರಿಶ್ರಮ ಮೆಚ್ಚುವಂಥದ್ದು. ಈ ಕಾಂಬಿನೇಷನ್ನ ಆಲ್ಬಂ ಬ್ಲಾಕ್ಬಸ್ಟರ್ ಆಗಲಿದೆ’ ಎಂದರು.
ಬಿಹೈಂಡ್ವುಡ್ಸ್ ಸಂಸ್ಥಾಪಕ ಮತ್ತು ಸಿಇಒ ಮನೋಜ್ ನಿರ್ಮಲಾಶ್ರೀಧರನ್ ಮಾತನಾಡಿ, `ದಕ್ಷಿಣ ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಸಿದ್ಧ ಸಂಗೀತ ಲೇಬಲ್ಗಳಲ್ಲಿ ಒಂದಾದ ಲಹರಿ ಮ್ಯೂಸಿಕ್, ಎ.ಆರ್. ರೆಹಮಾನ್ ಅವರ ಮೊದಲ ಆಲ್ಬಮ್ ‘ರೋಜಾ’ ಅನ್ನು ಪರಿಚಯಿಸಿದಹೆಗ್ಗಳಿಕೆ ಹೊಂದಿದೆ. ಅದು ಭಾರಿ ಯಶಸ್ಸು ಗಳಿಸಿ, ಭಾರತೀಯ ಸಂಗೀತದಲ್ಲಿ ದೊಡ್ಡ ಮೈಲಿಗಲ್ಲಾಯಿತು. ಇದೀಗ ಮತ್ತೆ ಅದೇ ಸಂಗೀತ ಮಾಂತ್ರಿಕರ ಜೊತೆಗೆ ಕೈ ಜೋಡಿಸಿದ್ದೇವೆ” ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ವೇಗವಾಗಿ ನಡೆಯುತ್ತಿದೆ ಎಂದರು.



