ಮಾಗಡಿ: ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಗುರಿಯಿದ್ದು ಶೀಘ್ರದಲ್ಲಿಯೇ ಆರನೇ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಿದ್ದು ಈ ಆರನೇ ಗ್ಯಾರಂಟಿಯಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ನ್ಯಾಯ ದೊರಕಲಿದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು.
ಪಟ್ಟಣದ ಕೋಟೆ ಮೈದಾನದಲ್ಲಿ ಗೃಹಲಕ್ಷ್ಮಿಯರ ಬೃಹತ್ ಸಮಾವೇಶ ಹಾಗೂ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆರನೇ ಗ್ಯಾರಂಟಿ ಜಾರಿಗೊಳಿಸಲು ಚಿಂತನೆ ನಡೆಸಿದ್ದು ಇದರಿಂದ ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ಅವರ ಶ್ರಮಕ್ಕೆ ಪ್ರತಿಫಲ ಸಿಗಲಿದೆ.
ಮಹಿಳೆಯರು ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಲು ಗೃಹಲಕ್ಷ್ಮಿ ಯೋಜನೆಯು ಸಹಕಾರಿಯಾಗಿದೆ.ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ್ದು ತುಂಬಾ ಸಂತೋಷ,ಕೇಂದ್ರ ಸರಕಾರ ಇದಕ್ಕೆ ಐದು ಸಾವಿರ ಕೋಟಿ ಖರ್ಚು ಮಾಡಿದೆ.ಆದರೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರವು ಕೇವಲ ಒಂದು ತಿಂಗಳಿಗೆ 4 ಸಾವಿರ ಕೋಟಿ ನೀಡಿ ಮಹಾತ್ಮ ಗಾಂಧೀಜಿಯವರ ಕನಸಾದ ರಾಮರಾಜ್ಯ ಸ್ಥಾಪನೆಗೆ ಮುಂದಾಗಿದೆ.ಜನರಿಗೆ ನೀರು,ಮಜ್ಜಿಗೆ,ಹಾಲಿನ ವ್ಯತ್ಯಾಸ ಗೊತ್ತಿದೆ ಎಂದರು.
ನಮ್ಮ ಗ್ಯಾರಂಟಿಗಳನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ.ನಾವು ಬಂಡವಾಳಶಾಹಿಗಳ ಸಾಲಮನ್ನಾ ಮಾಡಲು ಮುಂದಾಗಿಲ್ಲ. ಮಾಗಡಿಯಲ್ಲಿಯೇ 51 ಸಾವಿರ ಗೃಹಿಣಿಯರಿಗೆ ಎರಡು ಸಾವಿರ ರೂಪಾಯಿ ನೀಡುತ್ತಿದ್ದೇವೆ.ಕೆಲವರು ಅಧಿಕಾರ ಇದ್ದಾಗ ಒಂದು ಬಣ್ಣ ಇಲ್ಲದಿದ್ದಾಗ ಮತ್ತೊಂದು ಬಣ್ಣದ ನಾಟಕವಾಡುತ್ತಾರೆ.ಆದರೆ ಸಂಸದ ಡಿ.ಕೆ.ಸುರೇಶ್ ಯಾವಾಗಲೂ ಕೆಲಸ ಮಾಡುವ ನಾಯಕರಾಗಿದ್ದಾರೆ.ಅವರಿಗೆ ಮತ್ತೊಂದು ಅವಕಾಶ ಸಿಗಬೇಕು.ಅವರು ಗೆದ್ದರೆ ಮುಂದಿನ ವಿಧಾನಸಭಾ ಚುನಾವಣೆ ಗೆದ್ದಂತೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದರು.
ಬೆಂಗಳೂರು ಗ್ರಾಮಾಂತರ ಸಂಸದರಾದ ಡಿ.ಕೆ.ಸುರೇಶ್ ಮಾತನಾಡಿ ಈ ಹಿಂದೆ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿ ಜೆಡಿಎಸ್ ಪಕ್ಷದ ಮುಖಂಡರು ರಾಜ್ಯದ ಜನರ ಕಷ್ಠಕ್ಕೆ ಮುಂದೆ ಬರಲಿಲ್ಲ.ರೈತರ ಸಮಸ್ಯೆಗಳನ್ನು ಆಲಿಸಲಿಲ್ಲ.ನಾವು ಅಧಿಕಾರದಲ್ಲಿ ಇಲ್ಲದಿದ್ದರೂ ರಾಜ್ಯದ ಉದ್ದಗಲಕ್ಕೂ ಜನರ ಸಂಕಷ್ಠಕ್ಕೆ ಸ್ಪಂದಿಸಿದ್ದೇವೆ.ಕೋವಿಡ್ ಸಮಯದಲ್ಲಿ ಲಾಕ್ ಡೌನ್ ಮಾಡಿದ್ದರು.ರಾಜ್ಯದ ಜನತೆಗೆ ತಿಂಗಳಿಗೆ 10 ಸಾವಿರ ಕೊಡಿ ಎಂದು ಬಿಜೆಪಿ ಸರಕಾರವನ್ನು ಅಂಗಲಾಚಿದೆವು.
ಆದರೆ ಬಿಜೆಪಿಗರು ಇದಕ್ಕೆ ಸ್ಪಂದಿಸಲಿಲ್ಲ.ನಾವು ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತನ್ನು ಈಡೇರಿಸಿದ್ದೇವೆ.ಕೇಂದ್ರ ಸರಕಾರ ನಾವು ತೆರಿಗೆ ಹಣವನ್ನು ನಮಗೆ ಕೊಟ್ಟರೆ ಗೃಹಲಕ್ಷ್ಮಿಯರಿಗೆ 2 ಸಾವಿರದ ಜೊತೆಗೆ ಮತ್ತೆರಡು ಸಾವಿರ ಕೊಡುತ್ತೇವೆ ಎಂದು ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಸಿ.ಬಾಲಕೃಷ್ಣ ಮಾತನಾಡಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೆದರಿ ಮಂಡ್ಯಕ್ಕೆ ಓಡಿ ಹೋಗಿದ್ದಾರೆ. ಎಂ.ಎಲ್ಸಿ ಸಿ.ಪಿ.ಯೋಗೇಶ್ಚರ್ ಸ್ಪರ್ದಿಸಲು ಹಿಂಜರಿಯುತ್ತಿದ್ದಾರೆ.
ಇವರನ್ನು ಅವರು ಅವರನ್ನು ಇವರು ಮುಂದೆ ತಳ್ಳಲು ಹವಣಿಸುತ್ತಿದ್ದಾರೆ.ಹೀಗಿರುವಾಗ ದೇವೇಗೌಡರಅಳಿಯ ಕುಮಾರಸ್ವಾಮಿಯವ ಭಾವ ಡಾ.ಮಂಜುನಾಥ್ ಅವರನ್ನು ಬಿಜೆಪಿಯಿಂದ ನಿಲ್ಲಿಸಲು ಇವರ ಹೆಸರನ್ನು ಮುನ್ನೆಲೆಗೆ ತಂದಿದ್ದಾರೆ. ಕುಮಾರಸ್ವಾಮಿ ಅವರಿಗೆ ನಾಚಿಕೆಯಾಗಬೇಕು.
ರಾಜಕಾರಣ ಮಾಡುವುದು ಆಪರೇಷನ್ ಮಾಡಿದಂಗೆ ಅಲ್ಲಾ ಎಂದು ಡಾ.ಸಿ.ಎನ್.ಮಂಜುನಾಥ್ ಸ್ಪರ್ದೆ ವಿಚಾರವಾಗಿ ಬಾಲಕೃಷ್ಣ ವಾಗ್ದಾಳಿ ನಡೆಸಿದರು.ಜಿಲ್ಲಾಧಿಕಾರಿ ಅವಿನಾಶ್ ಮೆನನ್,ಸಿಇಒ ದಿಗ್ವಿಜಯ್ ಬೋಡ್ಸೆ, ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾಪಂ ಇಒ ಚಂದ್ರು,ಜಿಪಂ ಮಾಜಿ ಅದ್ಯಕ್ಷ ಹೆಚ್.ಎನ್.ಅಶೋಕ್, ಮಾಜಿ ಶಾಸಕ ಕೆ.ರಾಜು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ದೀಪಾ, ತಾಲ್ಲೂಕು ಅದ್ಯಕ್ಷೆ ಗೀತಾರಂಗನಾಥ್, ಕಮಲಮ್ಮ, ಕಲ್ಪನಾಶಿವಣ್ಣ, ಸಿ.ವನಜಾ, ಪುರಸಭಾ ಸದಸ್ಯರಾದ ಹೆಚ್.ಜೆ.ಪುರುಷೋತ್ತಮ್, ಶಿವಕುಮಾರ್, ಆಶಾಪ್ರವೀಣ್ ಸೇರಿದಂತೆ ಮತ್ತಿತರಿದ್ದರು.