ಮುಂಬೈ: ಸುಮಾರು 12 ವರ್ಷಗಳ ಹಿಂದೆ ವಿಶ್ವಕಪ್ ಫೈನಲ್ನಲ್ಲಿ ಆಗ ಏಷ್ಯಾದ ಎರಡು ಬಲಿಷ್ಠ ತಂಡಗಳು ಎದುರಾಗಿದ್ದವು. ಈಗ ಭಾರತ ವಿಶ್ವಕಪ್ನಲ್ಲಿ ಮತ್ತೊಮ್ಮೆ ಶ್ರೀಲಂಕಾ ತಂಡವನ್ನು ಎದುರಿಸಲು ಸಜ್ಜಾಗಿದೆ. ಅಂದಿನ ದಿನಕ್ಕೆ ಹೋಲಿಸಿದರೆ ಗುರುವಾರ ನಡೆಯುವ ಪಂದ್ಯ ಎರಡು ಅಸಮಾನ ತಂಡಗಳ ನಡುವಣ ಹಣಾಹಣಿಯಾಗಿ ಕಾಣುತ್ತಿದೆ.
ಒಂದೆಡೆ ಆತಿಥೇಯ ತಂಡ ಇದುವರೆಗೆ ಆಡಿದ ಆರು ಲೀಗ್ ಪಂದ್ಯಗಳಲ್ಲಿ ಎದುರಾಳಿ ತಂಡಗಳ ಮೇಲೆ ಸವಾರಿ ಮಾಡಿದೆ. ಇನ್ನೊಂದೆಡೆ, ಶ್ರೀಲಂಕಾ ಗೆದ್ದಿರುವುದಕ್ಕಿಂತ ಸೋತಿದ್ದೇ ಜಾಸ್ತಿ.ಏಕೈಕ ಅಜೇಯ ತಂಡವಾಗಿರುವ ಭಾರತಕ್ಕೆ ಗಂಭೀರ ಸವಾಲು ಎದುರಾಗಿಲ್ಲ. ತಂಡದ ಆತ್ಮವಿಶ್ವಾಸ ಈಗ ಎತ್ತರದಲ್ಲಿದೆ. ಅದಕ್ಕಿಂತ ತನ್ನ ಸಾಮರ್ಥ್ಯ ಮತ್ತು ಕೌಶಲದ ಮೇಲಿರುವ ನಂಬಿಕೆಯೂ ಹೆಚ್ಚು ಇದೆ.
ಆಸ್ಟ್ರೇಲಿಯಾ ವಿರುದ್ಧ 2 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡಾಗ ಪುಟಿದೆದ್ದ ರೀತಿ ಅಮೋಘವಾಗಿತ್ತು. ಇಂಗ್ಲೆಂಡ್ ವಿರುದ್ಧ ಲಖನೌದಲ್ಲಿ 229 ರನ್ ಗಳಿಸಿದ್ದಾಗ ಹೋರಾಟ ಎದುರಾಗಬಹುದು ಎನ್ನುವ ಸ್ಥಿತಿಯಲ್ಲಿ ಜಯ ಸಲೀಸಾಗಿಯೇ ದಾಖಲಾಗಿತ್ತು. ಹೀಗಾಗಿ ರೋಹಿತ್ ಶರ್ಮಾ ಬಳಗವನ್ನು ಎದುರಿಸುವಾಗ ಎದುರಾಳಿ ತಂಡಗಳೂ ತಮ್ಮ ಆಟದ ಮಟ್ಟವನ್ನು ಗಮನಾರ್ಹವಾಗಿ ಎತ್ತರಿಸಬೇಕಾಗಿದೆ.
ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಅವಕಾಶ ಪಡೆದ ಮೊಹಮ್ಮದ್ ಶಮಿ ಅವರು ತಂಡದ ಗೆಲುವಿನಲ್ಲಿ ಮಿಂಚಿದ್ದು ಗಮನಾರ್ಹ. ಒಮ್ಮೆ ಐದರ ಗೊಂಚಲು ಸೇರಿದಂತೆ ಎರಡು ಪಂದ್ಯಗಳಿಂದ 9 ವಿಕೆಟ್. ಹೀಗಾಗಿ ಅವರ ಸ್ಥಾನ ಗಟ್ಟಿಯಾದಂತಿದೆ. ಪಾಂಡ್ಯ ತಂಡಕ್ಕೆ ಮರಳುವ ಬಗ್ಗೆ ಇದುವರೆಗೆ ಖಚಿತ ಮಾಹಿತಿಯಿಲ್ಲ.