ಗೌರಿಬಿದನೂರು: ಬೇಸಿಗೆ ಬಂದು ಕೆರೆಕುಂಟೆ ಬಾವಿಗಳು ಬತ್ತಿ ಹನಿಹನಿ ನೀರಿಗೆ ಹಹಾಕಾರ ಉಂಟಾದಾಗ ನೀರಿನ ಸಂರಕ್ಷಣೆ, ಮಿತ ಬಳಕೆಯ ಬಗ್ಗೆ ಗಂಭೀರವಾದ ಚರ್ಚೆಗಳು ನಡೆಯುತ್ತವೆ. ಮಳೆ ಬರುತ್ತಿದ್ದಂತೆ ಎಲ್ಲವೂ ಮರೆತು ಹೋಗಿ, ಯಥಾಪ್ರಕಾರ ನೀರಿನ ಅಪವ್ಯಯ, ಸಂರಕ್ಷಣೆಯಲ್ಲಿ ನಿರ್ಲಕ್ಷ್ಯ ಮುಂದುವರೆಯುತ್ತದೆ. ಇದು ಸಾಮಾನ್ಯವಾಗಿ ಎಲ್ಲೆಡೆ ಕಂಡು ಬರುತ್ತಿರುವ ಸಂಗತಿ.
ಆದರೆ ನೀರಿನ ಮಹತ್ವವನ್ನು ಅರಿತುಕೊಂಡು ಅದರ ಸಂರಕ್ಷಣೆಗೆ ಶಾಶ್ವತವಾದ ಕಾರ್ಯಕ್ರಮಗಳನ್ನು ರೂಪಿಸುವವರ ಸಂಖ್ಯೆ ಅತಿವಿರಳ. ಈ ಹಿಂದೆ ರಾಜ ಮಹಾರಾಜರಾದ ಕೃಷ್ಣದೇವರಾಯ,ಮೈಸೂರು ಮಹಾರಾಜರು ತಮ್ಮ ಸಾಮ್ರಾಜ್ಯದಲ್ಲಿ ನೀರಿನ ಅಭಾವ ಕಂಡು ಬಂದಾಗ ಕೆರೆಗಳ ಪುನಚೇತನ ಹೂಳು ತೆಗೆಯುವ ಕಾರ್ಯದಲ್ಲಿ ಮಗ್ನರಾಗಿದ್ದರು ನೀರಿನ ಸಮಸ್ಯೆ ಅತಿ ಬೇಗ ಪರಿಹಾರ ಮಾಡುತ್ತಿದ್ದರು ಹಾಗೇ ಕೆಂಪೆಗೌಡ ಸಹ ಬೆಂಗಳೂರು ಸುತ್ತಮುತ್ತ ಕೆರೆಗಳ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿ ನೀರಿನ ಬವಣೆ ನಿವಾರಣೆ ಮಾಡುತ್ತಿದ್ದು ನಾವ ಇತಿಹಾಸದಲ್ಲಿ ಅರಿಯಬಹುದು,
ಈಗ ಅದನ್ನು ಕಾರ್ಯರೂಪ ತರುವಲ್ಲಿ ಇಲ್ಲಿನ ನೋಡಲ್ ಅಧಿಕಾರಿ ಈ ಮಾತಿಗೆ ಅಪವಾದವೆಂಬಂತೆ ಬಿ.ಎನ್.ವರಪ್ರಸಾದರೆಡ್ಡಿ ನೇತೃತ್ವದ ಗೌರಿಬಿದನೂರು ಸೇವಾ ಪ್ರತಿಷ್ಠಾವು ಸದ್ದುಗದ್ದಲವಿಲ್ಲದೆ ನೀರಿನ ಸಂರಕ್ಷಣೆಗಾಗಿ ಕೆರೆಗಳ ಪುನಶ್ಚೇತನವನ್ನು ಮಾಡುತ್ತಾ ಬಂದಿದೆ.2020ರಲ್ಲಿ ಪ್ರಾಯೋಗಿಕವಾಗಿ ಮುದುಗಾನ ಕುಂಟೆ ಕೆರೆಯ ಪುನಶ್ಚೇತನ ಕಾರ್ಯವನ್ನು ಕೈಗೆತ್ತಿಕೊಂಡಿತು.
ಕೆರೆಯಲ್ಲಿನ ಗಿಡಗೆಂಟೆಗಳನ್ನು ತೆಗೆದು ಹೂಳೆತ್ತಿ ತಟ್ಟೆಯಂತಿದ್ದ ಕೆರೆ ಅಂಗಳವನ್ನು ಬೋಗುಣಿ ಮಾಡಿತು. ಇದಕ್ಕಾಗಿ ಪ್ರತಿಷ್ಠಾನದ ಸದಸ್ಯರು ವೈಯಕ್ತಿಕ ಹಣ ಮತ್ತು ಸ್ಥಳೀಯ ಸಂಪನ್ಮೂಲಗಳನ್ನು ರೂಢಿಸಿಕೊಂಡರು. ಜೆಸಿಬಿಯಿಂದ ಹೂಳು ತೆಗೆದು ಟ್ರಾಕ್ಟರ್ಗಳಿಗೆ ತುಂಬಿ ಆಸಕ್ತ ರೈತರ ಹೊಲಗದ್ದೆಗಳಿಗೆ ಉಚಿತವಾಗಿ ಸಾಗಿಸಿದರು. ಇದರ ಫಲವಾಗಿ 2020ರ ಮೇ-ಜೂನ್ ತಿಂಗಳಿನಲ್ಲಿ ಸುರಿದು ಅಲ್ಪಮಳೆಗೆ ಕೆರೆ ತುಂಬಿ ತುಳುಕಿತು. 18 ವರ್ಷಗಳ ಬಳಿಕ ಕೆರೆ ತುಂಬಿದ್ದನ್ನು ಕಂಡು ಹರ್ಷಗೊಂಡ ಗ್ರಾಮಸ್ಥರು ಕೆರೆಗೆ ಬಾಗಿನ ಅರ್ಪಿಸಿ ಗಂಗಾದೇವಿಯನ್ನು ಪೂಜಿಸಿದರು.
ಇದಾದ ಮೇಲೆ ಚೋಳಶೆಟ್ಟಿಹಳ್ಳಿಕೆರೆ, ಮುದು ಗೆರೆ, ಅಗ್ರಹಾರಹೊಸಹಳ್ಳಿ ಕೆರೆ, ಸಾರಗೊಂಡ್ಲು, ಸೊನಗಾನಹಳ್ಳಿ ಕೆರೆಗಳನ್ನು ಪುನಶ್ಚೇನಗೊಳಿಸಿದರು. ಇದೀಗ ಏಳನೆಯ ಕೆರೆಯಾಗಿ 25 ಎಕರೆ ವಿಸ್ತೀರ್ಣದ ಬಿ.ಬೊಮ್ಮಸಂದ್ರ ರಾಮಪಾದಕೆರೆಯನ್ನು ಪುನಶ್ಚೇತನ ಗೊಳಿಸಿದ್ದಾರೆ. ಫೆ. 12 ರಂದು ಪುನಶ್ಚೇತನ ಕಾರ್ಯ ವನ್ನು ಪ್ರಾರಂಭಿಸಿ ಮಾ. 23ಕ್ಕೆ ಪೂರ್ಣ ಮಾಡಿದರು.
ಯಾವುದೇ ಪ್ರಚಾರವನ್ನು ಬಯಸದ ಸೇವಾ ಪ್ರತಿಷ್ಠಾನ ಜಲಸಂರಕ್ಷಣೆಯೊಂದನ್ನೇ ತನ್ನ ಧ್ಯೇಯವಾಗಿಸಿಕೊಂಡಿದೆ. ತಾಲ್ಲೂಕಿನ ಚಿಂತಲಪಲ್ಲಿಯ ಹಿರಿಯ ಕೆಎಎಸ್ ಅಧಿಕಾರಿ ಬಿ.ಎನ್.ವರಪ್ರಸಾದರೆಡ್ಡಿಯ ನೇತೃತ್ವದಲ್ಲಿ ಯುವಕರ ಗುಂಪು ಈ ಕೆಲಸ ಮಾಡುತ್ತಿದೆ. ಈ ಗುಂಪಿನ ಯುವಕರು ತಮ್ಮ ಪ್ರತಿಷ್ಠಾನದ ಹೆಸರನ್ನು ಹೊರತುಪಡಿಸಿದರೆ ಎಲ್ಲೂ ತಮ್ಮ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ. `ನಾವು ಗಂಗಾಮಾತೆಗಾಗಿ ಈ ಕೆಲಸ ಮಾಡುತ್ತಿದ್ದೇವೆ. ಪ್ರಚಾರಕ್ಕಾಗಿಯಲ್ಲ. ನೀವು ಬರೆಯುವುದಾದರೆ ಗೌರಿಬಿದನೂರು ಸೇವಾ ಪ್ರತಿಷ್ಠಾನದ ತರುಣರು’ ಎಂದಷ್ಟೇ ಬರಿಯಿರಿ ಎಂದು ವಿನಂತಿಸುತ್ತಾರೆ.
ಪ್ರತಿಷ್ಠಾನದ ಯುವಕರು ಸರ್ಕಾರದ ಅನುದಾನಕ್ಕೆ ಕೈಯೊಡ್ಡದೆ, ತಮ್ಮ ಸ್ವಂತ ಹಣದಲ್ಲಿ ಪ್ರತಿವರ್ಷದ ಬೇಸಿಗೆಯಲ್ಲಿ ಈ ಕೆಲಸವನ್ನು ಪ್ರಾರಂಭಿಸಿ, ಮಳೆಗಾಲಕ್ಕೆ ಕೆರೆಯನ್ನು ಸಜ್ಜುಗೊಳಿಸುತ್ತಾರೆ. ಕೆರೆಯ ಹೂಳೆತ್ತುವುದರ ಜೊತೆಗೆ ರಾಜಕಾಲುವೆಗಳು, ಕೆರೆಯ ಜಲಮೂಲಗಳನ್ನು ಸ್ವಚ್ಛಮಾಡಿಸಿ ನೆಲಕ್ಕೆ ಬಿದ್ದ ಪ್ರತಿಹನಿ ನೀರು ಕೆರೆಯತ್ತ ಹರಿದು ಬರುವಂತೆ ಮಾಡುತ್ತಾರೆ. ಹರಿದು ಬಂದ ನೀರಿನ ಹನಿ ಸಂರಕ್ಷಣೆಗೊಳ್ಳುವ ಹಾಗೆ ಸುರಕ್ಷಿತಗೊಳಿಸುತ್ತಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಬಿ.ಎನ್.ವರಪ್ರಸಾದರೆಡ್ಡಿ ತಾಲ್ಲೂಕು ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿಯನ್ನು ಹೊಂದಿದೆ. ಇದನ್ನು ತೊಡೆದುಹಾಕಲು ನಮ್ಮ ಪ್ರತಿಷ್ಠಾನ ಕಂಡುಕೊಂಡ ದಾರಿ ಕೆರೆಗಳನ್ನು ಪುನಶ್ಚೇನತಗೊಳಿಸುವುದು. ಇದು ನಿರಂತವಾದ ಕೆಲಸವಾಗಿದೆ. ಇದು ಸಾರ್ವ ಜನಿಕರಿಂದಲೇ ಆಗಬೇಕು. ಆಗಲೇ ಅದು ಸಮ ರ್ಪಕವಾಗಿ, ಪರಿಪೂರ್ಣವಾಗಿ ಆಗುತ್ತದೆ. ಇದು ಗೌರಿಬಿದನೂರು ಮಾದರಿಯಾಗಿದೆ. ಇದು ಅತ್ಯುತ್ತ ಮ ಮಾದರಿಯಾಗಿ ಯಶಸ್ಸು ಕಂಡಿದೆ’ ಎಂದರು.