ಬೆಂಗಳೂರು: ಬದುಕು ಲೇವಾದೇವಿಯಲ್ಲ, ಅದು ಕಟ್ಟಿಕೊಳ್ಳುವಂತದ್ದು. ಈ ಮಾತು ರಾಷ್ಟ್ರ ನಿರ್ಮಾಣದ ಮಹತ್ವದ ಗುರಿಯೊಂದಿಗೆ ಸ್ಥಾಪಿಸಲ್ಪಟ್ಟ ಭಾರತೀಯ ಜನಸಂಘ – ಬಿಜೆಪಿ ಪರಿವಾರದ ಮುಖಂಡರಾಗಿ, ವೃತ್ತಿ ಗೌರವವನ್ನು ಎತ್ತಿ ಹಿಡಿದುನ್ಯಾಯವಾದಿಗಳಾಗಿಯೂ ಸರಿ ಸುಮಾರು ಐದೂವರೆಯಿಂದ ಆರು ದಶಕಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿ, ಸಾರ್ಥಕ ಬದುಕಿನೊಂದಿಗೆ 92ನೇ ವಯಸ್ಸಿನಲ್ಲಿ ದೈವಾದೀನರಾದ ನೇಮಿರಾಜ ಶೆಟ್ಟಿಯವರಿಗೆ ಅನ್ವಯಿಸುತ್ತದೆ.
ಅಡೆಂಜ ತಿಮ್ಮಯ್ಯ ಅಂದರೆ ಮತ್ತು ನಡಿಬೆಟ್ಟುಗುತ್ತು ಶ್ರೀದೇವಿ ಅಮ್ಮ ದಂಪತಿಗಳ ಹಿರಿಯ ಪುತ್ರರಾಗಿ ಜೂನ್1, 1932ರಲ್ಲಿ ಜನಿಸಿದ ನೇಮಿರಾಜ ಶೆಟ್ಟರು ಪ್ರಾಥಮಿಕ ಶಾಲೆಯಲ್ಲಿ ಕಲಿತ ಶಿಕ್ಷಣದೊಂದಿಗೆ ಅರ್ಹತದಾನ ಸ್ವಾಮಿಜಿಯವರ ಜೊತೆಗೆ ಕಳೆದ ಸಮಯ ಅವರ ಮುಂದಿನ ಬದುಕಿಗೆ ಆಧ್ಯಾತ್ಮಿಕ ಹಾಗೂ ಪ್ರಾಪಂಚಿಕ ಜ್ಞಾನಾರ್ಜನೆಗೆ ಸಹಕಾರಿಯಾಯಿತು.
ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎಸ್ಸಿ ವ್ಯಾಸಂಗ ಹಾಗೂ ಶಾರದಾ ವಿಲಾಸ್ ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ಬಳಿಕ ಗಣಿತ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, 1964ರಿಂದ ಬೆಳ್ತಂಗಡಿಯಲ್ಲಿ ಕಕ್ಷಿದಾರರ ಭಾವನೆಗಳಿಗೆ ಸ್ಪಂದಿಸುತ್ತಾ ಗೌರವಾನ್ವಿತ ನ್ಯಾಯವಾದಿಯಾಗಿಸೇವೆ ಸಲ್ಲಿಸಿದ ಹಿರಿಮೆ ನೇಮಿರಾಜ ಶೆಟ್ಟರದ್ದು.
ವೃತ್ತಿಯಲ್ಲಿ ನ್ಯಾಯವಾದಿಯಾದರೂ, ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪ್ರೇರಿತರಾಗಿ ಅಪ್ಪಟ ರಾಷ್ಟ್ರವಾದಿಯಾಗಿ ಗುರುತಿಸಿಕೊಂಡವರು. ಪಂ. ದೀನದಯಾಳ ಉಪಾಧ್ಯಾಯರ ಏಕಾತ್ಮತಾ ಮಾನವತಾವಾದದಿಂದ ಪ್ರೇರಿತರಾಗಿ ಭಾರತೀಯ ಜನಸಂಘದೆಡೆಗೆ ಆಕರ್ಷಿತರಾದರು. 1964 ರಿಂದ 1967ರವರೆಗೆ ಬೆಳ್ತಂಗಡಿ ತಾಲ್ಲೂಕು ಜನಸಂಘದ ಕಾರ್ಯದರ್ಶಿಗಳಾಗಿ ಬಳಿಕ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಭಾರತೀಯ ಜನಸಂಘ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದ ದಿನಗಳವು. 1972ರಲ್ಲಿ ಅಂದಿನ ಮೈಸೂರು ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾದಾಗ ಬೆಳ್ತಂಗಡಿಯಲ್ಲಿ ಜನಸಂಘದ ಅಸ್ತಿತ್ವ ಉಳಿಸಲು ಉರಿಮಜಲು ರಾಮಭಟ್ಟರ ಸೂಚನೆ ಮೇರೆಗೆ ಬೆಳ್ತಂಗಡಿಯಿಂದ ಜನಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ‘ಜನಸಂಘದ ಧೈಯ ಧೋರಣೆಗಳ ಯಶಸ್ಸಿನಲ್ಲಿ ಪಾಲ್ಗೊಂಡು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನನಗೆ ಅವಕಾಶ ನೀಡಿ” ಎಂದು ಪ್ರಾರ್ಥಿಸಿಯೇ ಅವರು ಮತ ಯಾಚನೆ ನಡೆಸಿದ್ದರು. ಆ ವಿನಂತಿ ಪತ್ರದ ಅಂಚೆಕಾರ್ಡ್ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿತ್ತು.
1975ರಲ್ಲಿ ದೇಶದ ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕಲು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಹೇರಿದಾಗ, ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ವೀರಸಿಂಹ ನಾಯಕರೊಂದಿಗೆ ಸಾಥ್ ನೀಡಿದರು. ವೀರಸಿಂಹ ನಾಯಕರು ಮೀಸಾ ಅಡಿಯಲ್ಲಿ ಬಂಧಿತರಾದರು. ನೇಮಿರಾಜ ಶೆಟ್ಟರು ಹತ್ತು ತಿಂಗಳು ಸೆರೆಮನೆ ವಾಸ ಅನುಭವಿಸಿದರು.
ನೇಮಿರಾಜ ಶೆಟ್ಟರು ಯಾವುದೇ ಸ್ಥಾನಮಾನದ ಆಸೆ ಹೊಂದಿರಲಿಲ್ಲ. ಚುನಾವಣೆಗಳಲ್ಲಿ ಪಕ್ಷದ ಅಸ್ತಿತ್ವಕ್ಕಾಗಿ 1972ರಲ್ಲಿ ಸ್ಪರ್ಧಿಸಿದರೇ ವಿನಃ ಮತ್ತೆಂದೂ ಅವರು ಚುನಾವಣೆಗೆ ಸ್ಪರ್ಧಿಸಲಿಲ್ಲ. 1980ರಲ್ಲಿ ಭಾರತೀಯ ಜನತಾ ಪಾರ್ಟಿ ಅಸ್ತಿತ್ವಕ್ಕೆ ಬಂದಾಗ ಬೆಳ್ತಂಗಡಿ ತಾಲ್ಲೂಕಿನ ಪ್ರಥಮ ಅಧ್ಯಕ್ಷರು ನೇಮಿರಾಜ ಶೆಟ್ಟರೇ ಆಗಿದ್ದರು. 1983ರಲ್ಲಿ ಬೆಳ್ತಂಗಡಿಯಲ್ಲಿ ಅವರ ನಾಯಕತ್ವದ ಚುನಾವಣೆಯಲ್ಲಿ ಬೆಳ್ತಂಗಡಿ ಪ್ರಥಮವಾಗಿ ಬಿಜೆಪಿ ಶಾಸಕರನ್ನು ಕಾಣುತ್ತದೆ.
1985ರ ಮಧ್ಯಾವದಿ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಕೇವಲ 2 ಸ್ಥಾನಕ್ಕೆ ಸೀಮಿತವಾದಾಗ, ಇದೇ ನೇಮಿರಾಜ ಶೆಟ್ಟರ ಸಾರಥ್ಯದಲ್ಲಿ ಬಿಜೆಪಿ ಬೆಳ್ತಂಗಡಿಯಲ್ಲಿ ಗೆಲುವಿನ ನಗಾರಿ ಬೀರಿತ್ತು.ಯುವಕರು ರಾಜಕೀಯಕ್ಕೆ ಬರಬೇಕು, ನಾಯಕತ್ವ ವಹಿಸಿಕೊಳ್ಳಬೇಕೆಂಬ ಸದಾಶಯದಿಂದ 1990ರ ದಶಕದಲ್ಲಿ ತನ್ನ ವಕೀಲ ಸಹದ್ಯೋಗಿ ಪ್ರತಾಪ ಸಿಂಹ ನಾಯಕ್ ಮತ್ತು ತಮ್ಮ ಕಚೇರಿಯ ಪ್ರಸಾದ್ ಕುಮಾರ್ರಿಗೆ ತಾಲೂಕಿನ ನಾಯಕತ್ವ ನೀಡಿ ಪ್ರೋತ್ಸಾಹಿಸಿದರು.
ಅವರು ಬೆಂಬಲಿಸಿದ ಈ ಜೋಡಿ ಮುಂದೆ ಬೆಳ್ತಂಗಡಿಯ ಅಡ್ವಾಣಿ – ವಾಜಪೇಯಿ ಜೋಡಿ ಎಂದೇ ಜನಪ್ರಿಯವಾಯಿತು. ಇವರು ಹಾಕಿದ ಅಡಿಪಾಯ, ಶ್ರಮ, ಬೆವರಿನ ಫಸಲು ಇಂದು ಬೆಳ್ತಂಗಡಿಯ ಎಲ್ಲಾ ಮತಗಟ್ಟೆಗಳಲ್ಲೂ ಬಿಜೆಪಿ ಶಕ್ತಿಶಾಲಿಯಾಗಿ ರೂಪುಗೊಳ್ಳಲು ಸಹಕಾರಿಯಾಗಿದೆ.
ಜನಾನುರಾಗಿಯಾಗಿದ್ದ ನೇಮಿರಾಜುಶೆಟ್ಟರು ತಮ್ಮ 92ನೇ ವಯಸ್ಸಿನಲ್ಲಿ ವಯೋ ಸಹಜ ಕಾಯಿಲೆಯಿಂದ ಕಳೆದ ಜನವರಿ 20ರಂದು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನಹೊಂದಿದರು.
ಯು.ಟಿ.ನಂದಕುಮಾರ್