ಬೆಳಗಾವಿ: ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನ ಮತ್ತು ದೇವಸ್ಥಾನಕ್ಕೆ ದೇಣಿಗೆ ನೀಡಿರುವ ವಿಚಾರವಾಗಿ ಬೆಳಗಾವಿಯ ಘಟಾನು ಘಟಿ ನಾಯಕರ ನಡುವೆ ವಾಗ್ಯುದ್ದ ಶರುವಾಗಿದೆ.
ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿರುವ ವಿಚಾರವಾಗಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ನಡುವೆ ಮಾತಿನ ಜಟಾಪಟಿ ನಡೆದಿದೆ. “ಪ್ರತಿಯೊಬ್ಬರು ಅಲ್ಪಮತಿಗೆ ಹೊಳೆದಷ್ಟು ಮಾತನಾಡುತ್ತಾರೆ. ಅಲ್ಪಮತಿಗಳ ಬಗ್ಗೆ ನಾನು ಹೆಚ್ಚು ಒತ್ತುಕೊಡುವುದಿಲ್ಲ” ಎಂದು ಶಾಸಕ ಲಕ್ಷ್ಮಣ ಸವದಿ ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ಅಲ್ಪಮತಿ ಎಂದು ಜರಿದರು.
ಅಥಣಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ಆಹ್ವಾನ ಬಂದಿದೆಯಾ? ನೀವು ದೇಣಿ ಕೊಟ್ಟಿದ್ದೀರಾ? ಅಂತ ಮಾಧ್ಯಮದವರು ಪ್ರಶ್ನಿಸಿದರು. ಅದಕ್ಕೆ ನಾನು ಬಿಜೆಪಿಯಲ್ಲಿದ್ದಾಗ 10 ಲಕ್ಷ ರೂ. ದೇಣಿಗೆ ಕೊಟ್ಟಿರುವೆ ಎಂದು ಹೇಳಿದೆ. ಇಲ್ಲಿ ಯಾರೋ ಒಬ್ಬರು ಕೋಟಿ ಕೊಟ್ಟವರಿಗೆ ಕರೆದಿಲ್ಲಾ ಹತ್ತು ಲಕ್ಷ ಕೊಟ್ಟವರು ಏನು ದೊಡ್ಡ ವಿಷಯ ಅಂದಿದ್ದಾರೆ. ಅದರ ಬಗ್ಗೆ ನನಗೆ ಬೇಸರವೆ ಇಲ್ಲ ಎಂದರು.
ನನಗೆ ಯಾಕೆ ಕರೆದಿಲ್ಲ ಅಂತ ಕೇಳಿಲ್ಲ. ನನ್ನ ತಂದೆ ತಾಯಿ ನನಗೆ ಲಕ್ಷ್ಮಣ ಅಂತ ಹೆಸರು ಇಟ್ಟಿದ್ದಾರೆ. ಶ್ರೀರಾಮನ ಸಹೋದರ ಲಕ್ಷ್ಮಣನ ಹೆಸರು ನನಗೆ ನಾಮಕರಣ ಮಾಡಿದ್ದಾರೆ. ಇವರು ಹಣ ಸಂಗ್ರಹ ಮಾಡುವಂತವರು. ಹಣ ಸಂಗ್ರಹ ಮಾಡಿ ರಾಮ ಮಂದಿರಕ್ಕೆ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಸ್ವಂತ ಹಣ ನೀಡದೇ ಸಂಗ್ರಹ ಮಾಡಿ ಕೊಟ್ಟಿದ್ದಾರೆ. ಈ ಶುಭ ಸಂದರ್ಭದಲ್ಲಿ ಚರ್ಚೆ ಬೇಡ. ಸಮಯ ಬಂದಾಗ ಚರ್ಚೆ ಮಾಡೋಣ ಅಂತಾ ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ತೀರುಗೇಟು ನೀಡಿದರು.