ದೊಡ್ಡಬಳ್ಳಾಪುರ: ನಗರದ ನೆಲದಾಂಜನೆಯ ಸ್ವಾಮಿ ದೇವಾಲಯ ವೃತ್ತದಲ್ಲಿ ಇಂದು ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹಾಗೂ ಜಿಲ್ಲಾ ಆಸ್ಪತ್ರೆಯ ಸ್ಥಳಾಂತರಕ್ಕೆ ಹುನ್ನಾರ ನಡೆಸುತ್ತಿರುವುದನ್ನ ಖಂಡಿಸಿ ಬೃಹತ್ ಮಟ್ಟದ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು.
ಈ ಪ್ರತಿಭಟನೆ ಕುರಿತು ಮಾತನಾಡಿದ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಕಾಂಗ್ರೆಸ್ ಸರ್ಕಾರ ಜನವಿರೋಧಿ, ರೈತವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರಸ್ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳು ಕಳೆದರೂ ಅವರು ನೀಡಿದ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸಾಧ್ಯವಾಗಲಿಲ್ಲ, ಇನ್ನೂ ರೈತರಿಗೆ ನೀಡಬೇಕಾದ ಬರಪರಿಹಾರ ಕೇವಲ 2 ಸಾವಿರ ಮಾತ್ರವೇ ನೀಡಿ ಸೂಕ್ತ ಪರಿಹಾರ ನೀಡುವಲ್ಲಿಯು ವಿಫಲವಾಗಿದೆ, ಈ ಸರ್ಕಾರದ ಆಯಸ್ಸು 24 ರ ಲೋಕಸಭಾ ಚುನಾವಣೆ ಮುಗಿಯುವವರೆಗೆ ಮಾತ್ರವೇ ಗ್ಯಾರಂಟಿ ಎಂದು ಲೇವಡಿ ಮಾಡಿದರು.
ನಂತರ ಮಾತನಾಡಿದ ವಿಪಕ್ಷ ನಾಯಕ ಆರ್. ಆಶೋಕ್ ಅವರು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಉಚಿತ ಯೋಜನೆಗಳನ್ನು ಕಾರ್ಯರೂಪಕ್ಕೆ ಪರದಾಡುತ್ತಿದ್ದಾರೆ, ಬಡಕುಟುಂಬಗಳಿಗೆ ಬಲಗೈಯಲ್ಲಿ ಎರಡು ಸಾವಿರ ರೂಪಾಯಿಗಳನ್ನ ಕೊಟ್ಟು, ಎಡಗೈಯಲ್ಲಿ ನಾಲ್ಕು ಸಾವಿರ ರೂಪಾಯಿಗಳನ್ನ ಸುಲಿಗೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮದ್ಯದ ಬೆಲೆ ಶೇಕಡಾ 30? ರಷ್ಟು ಏರಿಕೆ ಮಾಡಿ ಬಡವರ್ಗದ ಜನರನ್ನ ಸುಲಿಗೆ ಮಾಡಲು ಪ್ರಾರಂಭಿಸಿದರು.
ಇದೆ ರೀತಿಯಲ್ಲಿ ಗ್ರಾಹಕರಿಗೆ ಹಾಲಿನ ಬೆಲೆ ಏರಿಕೆ,ಆಸ್ತಿ ನೋಂದಣಿ ಶುಲ್ಕದ ಹೆಚ್ಚಳ, ರೈತರ ಉತ್ಪಾದಿಸುವ ಹಾಲಿನ ಖರೀದಿ ಬೆಲೆ ಕಡಿತ, ಗೃಹ ಲಕ್ಷ್ಮಿ ಯೋಜನೆಯಿಂದ ಅತ್ತೆ ಸೊಸೆಯ ಮಧ್ಯೆ ಜಗಳ, ಆಟೋ ಚಾಲಕರ ಬದುಕು ಮೂರಾಬಟ್ಟೆ, ಉಚಿತ ಬಸ್ ಪ್ರಯಾಣದ ಕಾರಣ ವಿದ್ಯಾರ್ಥಿಗಳು ಹಾಗೂ ದಿನನಿತ್ಯ ಕೆಲಸ ಕಾರ್ಯಗಳಿಗೆ ಸಂಚರಿಸುವ ಜನರು ಪರದಾಡುವಂತಾಯಿತು, ತಾಲೂಕು ಕಚೇರಿ, ಜಿಲ್ಲಾ ಕಚೇರಿ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಮಿಷನ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ.
ಬಿಜೆಪಿ ಸರ್ಕಾರ ಇದ್ದಾಗ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಅನುದಾನ ಗಳನ್ನ ಯಥಾವತ್ತಾಗಿ ಮುಂದುವರಿಸಿಕೊಂಡು ಹೋದರೆ ಸಾಕು. ಅದನ್ನ ಬಿಟ್ಟು ಎಲ್ಲಾ ಯೋಜನೆಗಳ ಅನುದಾನವನ್ನ ಕಡಿತ ಮಾಡಿದೆ. ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಜನರಿಗೆ ವಂಚಿಸುತ್ತಿದೆ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನ ಈಡೇರಿಸದೇ ಸಿದ್ದರಾಮಯ್ಯ ನಿದ್ದೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ? ಎಂದು ಕಿಡಿಕಾರಿದರು.
ತರ ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಗ್ಯಾರೆಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜನರಿಗೆ ತಲುಪಿಸುವಲ್ಲಿ ಸಂಪೂರ್ಣವಾಗಿ ಸೋತಿದೆ. ಗ್ಯಾರೆಂಟಿ ಎಂಬ ಅಸ್ತ್ರ ಬಳಸಿ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನ ಈಡೇರಿಸದೆ ಜನರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಿದರು.
ಶ್ರೀ ನೆಲದಾಂಜನೇಯಸ್ವಾಮಿ ದೇವಾಲಯದ ವೃತ್ತದಿಂದ ತಾಲೂಕು ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ತಾಲೂಕು ಕಚೇರಿ ಆವರಣದಲ್ಲಿ ಅಂತಿಮವಾಗಿ ಅಪರ ಜಿಲ್ಲಾಧಿಕಾರಿ ಅಮರೇಶ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.ಈ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲಾಘಟಕದ ಮುಖಂಡರು, ತಾಲೂಕು ಘಟಕದಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.