ಇಂಗ್ಲೆಂಡ್ ತಂಡದ ಯುವ ಆಲ್ ರೌಂಡರ್ ಜೇಕಬ್ ಬೆಥೆಲ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯುತ್ತಿದ್ದಾರೆ. ಅತ್ತ ದಿ ಹಂಡ್ರೆಡ್ ಲೀಗ್ ನಲ್ಲಿ ಬರ್ಮಿಂಗ್ ಹ್ಯಾಮ್ ಫೀನಿಕ್ಸ್ ತಂಡದ ಪರ ಮುಂದುವರೆದಿದ್ದಾರೆ. ಇದೀಗ ಇದೇ ತಂಡ ಯುವ ಆಟಗಾರನಿಗೆ ಕ್ಯಾಪ್ಟನ್ ಪಟ್ಟ ನೀಡಿದೆ.
ಇಂಗ್ಲೆAಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ ನ ಬರ್ಮಿಂಗ್ ಹ್ಯಾಮ್ ಫೀನಿಕ್ಸ್ ತಂಡದ ನಾಯಕನಾಗಿ ಜೇಕಬ್ ಬೆಥೆಲ್ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ತಂಡದ ನಾಯಕನಾಗಿ ಲಿಯಮ್ ಲಿವಿಂಗ್ ಸ್ಟೋನ್ ಈ ಬಾರಿ ಲಂಡನ್ ಸ್ಪಿರಿಟ್ ಪರ ಕಣಕ್ಕಿಳಿಯಲಿದ್ದು, ಹೀಗಾಗಿ ಹೊಸ ನಾಯಕನಾಗಿ ಬೆಥೆಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಳೆದ ಬಾರಿ ಕೂಡ ಜೇಕಬ್ ಬೆಥೆಲ್ ಬರ್ಮಿಂಗ್ ಹ್ಯಾಮ್ ಫೀನಿಕ್ಸ್ ತಂಡದ ಪರ ಕಣಕ್ಕಿಳಿದಿದ್ದರು. ಈ ಬಾರಿಯ ಹರಾಜಿಗೂ ಮುನ್ನ ಅವರನ್ನು ಫೀನಿಕ್ಸ್ ಫ್ರಾಂಚೈಸಿ ಸುಮಾರು 11 ಕೋಟಿಗೂ ಅಧಿಕ ಮೊತ್ತಕ್ಕೆ ರಿಟೈನ್ ಮಾಡಿಕೊಂಡಿದೆ.
ಇದೀಗ ರಿಟೈನ್ ಆಗಿರುವ 22 ವರ್ಷದ ಜೇಕಬ್ ಬೆಥೆಲ್ ಗೆ ಕ್ಯಾಪ್ಟನ್ ಪಟ್ಟ ನೀಡುವ ಮೂಲಕ ಹೊಸ ಪ್ರಯೋಗಕ್ಕೆ ಬರ್ಮಿಂಗ್ ಹ್ಯಾಮ್ ಫೀನಿಕ್ಸ್ ಫ್ರಾಂಚೈಸಿ ಮುಂದಾಗಿದೆ. ಇನ್ನು ಬರ್ಮಿಂಗ್ ಹ್ಯಾಮ್ ಫೀನಿಕ್ಸ್ ಮಹಿಳಾ ತಂಡದ ನಾಯಕಿಯಾಗಿ ಆಸ್ಟ್ರೇಲೆಯಿನ್ ಆಟಗಾರ್ತಿ ಎಲಿಸ್ ಪರ್ರಿ ಮುಂದುವರಿಯಲಿದ್ದಾರೆ.
ದಿ ಹಂಡ್ರೆಡ್ ಲೀಗ್ ಎಂಬುದು ಟಿ20 ಮಾದರಿಯಲ್ಲೇ ಆಯೋಜಿಸಲಾಗುವ ಚುಟುಕು ಟೂರ್ನಿ. ಆದರೆ ಇಲ್ಲಿ 20 ಓವರ್ ಗಳಿರುವುದಿಲ್ಲ ಎಂಬುದಷ್ಟೇ ವ್ಯತ್ಯಾಸ. ಬದಲಾಗಿ 100 ಎಸೆತಗಳ ಪಂದ್ಯವಾಗಿರಲಿದೆ. ಹೀಗಾಗಿಯೇ ಈ ಟೂರ್ನಿಗೆ ದಿ ಹಂಡ್ರೆಡ್ ಎಂದು ಹೆಸರಿಡಲಾಗಿದೆ.
ಜೇಕಬ್ ಬೆಥೆಲ್ ಗೆ ಒಲಿದ ನಾಯಕತ್ವ..!



