This is the title of the web page
This is the title of the web page

ಭ್ರಷ್ಟಾಚಾರ ಮಾಡಿದವರ ಮೇಲೆ ಕಾನೂನು ಕ್ರಮ: ಹೆಚ್.ಟಿ.ಸುನಿಲ್

ಕೆ.ಆರ್.ಪೇಟೆ: ಅಧಿಕಾರ ದುರ್ಬಳಕೆ, ಹಣ ದುರುಪಯೋಗ, ಲಂಚಕ್ಕಾಗಿ ಬೇಡಿಕೆ ಮುಂತಾದ ಕಾನೂನು ಬಾಹಿರ ಕಾರ್ಯ ಚಟುವಟಿಕೆಗಳಿಂದ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ದೂರವಿರಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ದೂರುಗಳು ಬಂದರೆ ಲೋಕಾಯುಕ್ತ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುತ್ತದೆಂದು ಮಂಡ್ಯ ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸುನಿಲ್ ಕುಮಾರ್ ಎಚ್ಚರಿಸಿದರು .

ಅವರು ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಲೋಕಾಯುಕ್ತ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸಾರ್ವಜನಿಕರ ಕುಂದು ಕೊರತೆ, ದೂರುಗಳ ಸ್ವೀಕಾರ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

ಸರ್ಕಾರದ ಸವಲತ್ತುಗಳನ್ನು ಸಾರ್ವಜನಿಕರಿಗೆ ಸಕಾಲದಲ್ಲಿ ತಲುಪಿಸಬೇಕಾದ ಜವಾಬ್ದಾರಿ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲಿದೆ. ಆದರೆ ಕಂದಾಯ ಇಲಾಖೆ, ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ, ಸರ್ವೆ ಇಲಾಖೆಗಳ ಮೇಲೆ ಸಾರ್ವಜನಿಕರ ಅರ್ಜಿಗಳನ್ನು ಸಕಾಲದಲ್ಲಿ ಸ್ವೀಕರಿಸಿ ವಿಲೇ ಮಾಡದ ಬಗ್ಗೆ ವ್ಯಾಪಕ ದೂರುಗಳಿವೆ. ಅಧಿಕಾರಿಗಳು ಸಾರ್ವಜನಿಕರ ಅರ್ಜಿಗಳನ್ನು ಕಡ್ಡಾಯವಾಗಿ ಸ್ವೀಕರಿಸಿ ಸಕಾಲದಲ್ಲಿ ಅವುಗಳನ್ನು ವಿಲೇ ಮಾಡಬೇಕು.

ಅರ್ಜಿ ಸ್ವೀಕರಿಸಿದ ಬಗ್ಗೆ ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಬೇಕು. ವಿಲೇ ಮಾಡಲಾಗದ ಅರ್ಜಿಗಳ ಬಗ್ಗೆ ಸೂಕ್ತ ಕಾರಣ ನೀಡಿ ಹಿಂಬರಹ ನೀಡಬೇಕು. ತಾಲ್ಲೂಕಿನಲ್ಲಿ ಕೆಲವು ಕಡೆ ಅರ್ಜಿ ಸ್ವೀಕರಿಸಿ ವರ್ಷ ಕಳೆದರೂ ಪಿಡಿಓಗಳು ಅರ್ಜಿದಾರರ ಅರ್ಜಿ ವಿಲೇ ಮಾಡುವುದಿರಲಿ ಅರ್ಜಿ ಸ್ವೀಕಾರದ ಸ್ವೀಕೃತಿ ಪತ್ರಗಳನ್ನು ನೀಡದಿರುವ ಬಗ್ಗೆ ಲೋಕಾಯುಕ್ತಕ್ಕೆ ಸಾಕಷ್ಟು ದೂರುಗಳು ಬಂದಿವೆ. ಕಚೇರಿಗಳಿಗೆ ಸಾರ್ವಜನಿಕರ ಅನವಶ್ಯಕ ಅಲೆದಾಟವನ್ನು ನಿಲ್ಲಿಸಬೇಕು. ನಿಮಗೆ ಅರ್ಜಿಗಳಿಗೆ ಸಕಾಲದಲ್ಲಿ ಮುಕ್ತಿ ನೀಡಬೇಕು. ರೈತರು ಮತ್ತು ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಮೊದಲ ಆದ್ಯತೆ ನೀಡುವಂತೆ ಸುನಿಲ್ ಕುಮಾರ್ ತಾಕೀತು ಮಾಡಿದರು.

ಮಾಹಿತಿ ಕೊರತೆ: ಬಹುತೇಕ ಸಾರ್ವಜನಿಕರಿಗೆ ಲೋಕಾಯುಕ್ತ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಮಾಹಿತಿಯ ಕೊರತೆಯಿದೆ. ಎಷ್ಟೋ ಜನರಿಗೆ ಲೋಕಾಯುಕ್ತ ಕಚೇರಿ ಎಲ್ಲಿದೆ ಎನ್ನುವುದೇ ಗೊತ್ತಿಲ್ಲ. ಅದಕ್ಕಾಗಿಯೇ ಜಿಲ್ಲಾ ಲೋಕಾಯುಕ್ತ ಪ್ರತಿ ತಿಂಗಳು ತಾಲ್ಲೂಕು ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳ ಮತ್ತು ಸಾರ್ವಜನಿಕರ ಕುಂದುಕೊರತೆಗಳ ಸಭೆ ನಡೆಸಿ ಲೋಕಾಯುಕ್ತದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.

ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ, ಅನಗತ್ಯ ಕಿರುಕುಳದ ವಿರುದ್ದ ಸಾರ್ವಜನಿಕರು ದಾಖಲೆಗಳ ಸಮೇತ ದೂರು ನೀಡಿದರೆ ಅಂತಹ ಅಧಿಕಾರಿಗಳ ವಿರುದ್ದ ಲೋಕಾಯುಕ್ತ ಎಫ್.ಐ.ಆರ್ ದಾಖಲಿಸಿ ತನಿಖೆ ನಡೆಸಲಿದೆ. ಸಾರ್ವಜನಿಕರು ನಿರ್ಭಯದಿಂದ ಲೋಕಾಯುಕ್ತ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಧಿಕಾರಿಗಳು ಸಾರ್ವಜನಿಕರಿಗೆ ಅಗತ್ಯ ದಾಖಲೆಗಳನ್ನು ನೀಡಲು ಸತಾಯಿಸಿದರೆ ಆರ್.ಟಿ.ಐ ಮೂಲಕ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಪಡೆದುಕೊಳ್ಳಬಹುದು.

ಆರ್.ಟಿ.ಐ ಮೂಲಕ ಕೇವಲ ದೂರು ಕೊಟ್ಟರೆ ಸಾಲದು. ದಾಖಲೆಗಳ ಸಮೇತ ದೂರು ನೀಡಿದರೆ ಲೋಕಾಯುಕ್ತ ಕಡ್ಡಾಯವಾಗಿ ಭ್ರಷ್ಟ ಅಧಿಕಾರಿಗಳ ವಿರುದ್ದ ದೂರು ದಾಖಲಿಸುತ್ತದೆ. ನಮಗೆ ಸಲ್ಲಿಕೆಯಾದ ದೂರುಗಳ ಬಗ್ಗೆ ನಮ್ಮ ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ನಾವು ದೂರುದಾರರಿಗೆ ಮಾಹಿತಿ ತಿಳಿಸುತ್ತೇವೆಂದರು.

ಒತ್ತಡ ಹಾಕುವವರ ವಿರುದ್ದವೂ ದೂರು ನೀಡಿ : ಕಾನೂನು ಬಾಹಿರ ಕೆಲಸ ಮಾಡಲು ಕೆಲವರು ಸರ್ಕಾರಿ ನೌಕರರ ಮೇಲೆ ಅನಗತ್ಯ ಒತ್ತಡ, ಹಣದ ಆಮಿಷಗಳನ್ನು ಒಡ್ಡುತ್ತಾರೆ. ಈ ರೀತಿ ಆಮಿಷ ಮತ್ತು ಒತ್ತಡ ಹಾಕುವವರ ವಿರುದ್ದ ನೌಕರರು 7 ದಿನಗಳ ಒಳಗಾಗಿ ಲೋಕಾಯುಕ್ತಕ್ಕೆ ದೂರು ನೀಡಬಹುದು. ಆದರೆ ನೀವೇ ತಪ್ಪು ಮಾಡಿ ದೂರು ನೀಡುವ ಮೂಲಕ ಸಂಕಷ್ಟಕ್ಕೆ ಸಿಲುಕಬೇಡಿ ಎಂದು ಸಲಹೆ ನೀಡಿದರು. ಜಿಲ್ಲಾ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಎಂ.ಆರ್.ಮೋಹನ್‍ರೆಡ್ಡಿ, ಬಿ.ಪಿ.ಬ್ಯಾಟರಾಯಗೌಡ, ತಹಸೀಲ್ದಾರ್ ನಿಸರ್ಗಪ್ರಿಯ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.