ಚಿಕ್ಕಬಳ್ಳಾಪುರ: ಮಹಿಳಾ ಸಾಧಕಿಯರ ಸಾಧನೆಗಳನ್ನು ನೆನೆದು ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವುದೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಜವಾದ ಆಶಯ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಅವರು ಅಭಿಪ್ರಾಯ ಪಟ್ಟರು.
ಮಂಗಳವಾರ ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತದ ದಿನಮಾನಗಳಲ್ಲಿ ಪ್ರತಿ ಮನೆಯನ್ನು ಬೆಳಗುತ್ತಿರುವವರು ಮಹಿಳೆಯರು.ಝಾನ್ಸಿರಾಣಿ ಲಕ್ಷ್ಮೀಬಾಯಿ, ಸರೋಜಿನಿ ನಾಯ್ಡು, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ ಸೇರಿದಂತೆ ಅಸಂಖ್ಯಾತ ಮಹಿಳಾ ಸಾಧಕಿಯರು ನಮ್ಮ ಸಮಾಜಕ್ಕೆ ನೀಡಿರುವ ಕೊಡುಗೆಗಳು ಅಪಾರವಾದದ್ದು,ಅವರ ಸಾಧನೆಗಳನ್ನು ಸ್ಮರಿಸುವುದೇ ನಮ್ಮೆಲ್ಲರ ಭಾಗ್ಯವಾಗಿದೆ. ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಮಹಿಳಾ ಸ್ವ-ಸಹಾಯ ಗುಂಪುಗಳು ಕಾರ್ಯನಿರ್ವಹಿಸುತ್ತಿದ್ದು, ತನ್ನದೇ ಆದ ಅಮೂಲ್ಯ ಸೇವೆಯನ್ನು ಸಮಾಜಕ್ಕೆ ನೀಡುತ್ತಿವೆ. ಈ ಸಂಘಗಳಲ್ಲಿ 1.20 ಲಕ್ಷ ಮಹಿಳೆಯರು ಭಾಗವಹಿಸುತ್ತಿರುವುದು ಹೆಮ್ಮಯ ವಿಚಾರ. ಜಿಲ್ಲೆಯು ಹಾಲು ಉತ್ಪಾದನೆಯಲ್ಲಿ ಮಂಜೂಣಿಯಲ್ಲಿದೆ,ಅದರ ಶ್ರೇಯ ಮಹಿಳೆಯರಿಗೆ ಸಲ್ಲಬೇಕು. ಏಕೆಂದರೆ ಈ ಕ್ಷೇತ್ರದಲ್ಲಿ ಶೇ. 90 ರಷ್ಟು ಶ್ರಮ ಇರುವುದು ಮಹಿಳೆಯರದ್ದು ಎಂದರೆ ತಪ್ಪಾಗಲಾರದು. ಇಂದಿನ ದಿನಮಾನ ಕೃತಕ ಬುದ್ದಿಮತ್ತೆಯ ಕಾಲ, ಬುದಿವಂತಿಕೆ ಮತ್ತು ಜ್ಞಾನ ಇರುವವರು ಮಾತ್ರ ಪ್ರಗತಿಯಾಗಲು ಸಾಧ್ಯವಾಗಲಿದೆ. ದೈಹಿಕ ಸಾಮರ್ಥ್ಯವು ಪ್ರಧಾನ್ಯತೆಯನ್ನು ಈ ತಂತ್ರಜ್ಞಾನ ನಗಣ್ಯ ಮಾಡಿದೆ. ಮಹಿಳಾ ಸಮೂಹ ಪುರುಷರಗಿಂತ ಹೆಚ್ಚಿನ ಮಟ್ಟದ ಬುದ್ದಿಮತ್ತೆಯನ್ನು ಹೊಂದಿರುವುದರಿAದ ಮುಂದಿನ ದಿನಗಳು ಮಹಿಳೆಯರಿಗೆ ವಿಪುಲ ಅವಕಾಶಗಳನ್ನು ನೀಡಲಿದೆ. ಮಹಿಳಾ ಸಮಾನತೆಗೆಗಾಗಿ ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಪ್ರಮುಖ ಕಾರಣ 12ನೇ ಶತಮಾನದ ಶರಣರ ಹೊರಟವೇ ಕಾರಣ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎನ್. ರಮೇಶ್ ಅವರು ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ನೇರವಾಗಿ ಸಹಾಯವಾಗಿವೆ. ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ 1480 ಕೋಟಿ, ಗೃಹಜ್ಯೋತಿ 372.14 ಕೋಟಿ, ಶಕ್ತಿ ಯೋಜನೆಯಡಿ 388 ಕೋಟಿ, ಅನ್ನಭಾಗ್ಯ ಯೋಜನೆಯಡಿ 265.29 ಕೋಟಿ ಹಾಗೂ ಯುವನಿಧಿ ಯೋಜನೆಯಡಿ 13.11 ಕೋಟಿಯನ್ನು ಸರ್ಕಾರ ವೆಚ್ಚ ಮಾಡಿದೆ. ಮಹಿಳೆಯರ ಉನ್ನತಿಗೆ ನಮ್ಮ ಸರ್ಕಾರ ಸದಾ ಬದ್ದವಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಬೀಜ ನಿಗಮದ ಅಧ್ಯಕ್ಷ ಆಂಜಿನಪ್ಪ ರವರು ಮಾತನಾಡಿ, ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಿಗಿಲಾದ ಸಾಧನೆ ಮಾಡುತ್ತಿದ್ದಾರೆ. ಇದಕ್ಕೆ ಉತ್ತಮ ನಿರ್ದೇಶನವಾಗಿ ನಮ್ಮ ರಾಜ್ಯದ ಸರ್ಕಾರಿ ಆಡಳಿತದ ಚುಕ್ಕಾಣಿಯನ್ನು ವಹಿಸಿ
ಕೊಂಡಿರುವ ಸರ್ಕಾರದ ಮುಖ್ಯ ಕಾರ್ಯ
ದರ್ಶಿಗಳಾದ ಶಾಲಿನಿ ರಜನೀಶ್ ಅವರ ಕಾರ್ಯವೈಖರಿ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎನ್. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಉಪ ಕಾರ್ಯದರ್ಶಿ ಅತಿಕ್ ಪಾಷಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೌತಾಜ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ವ-ಸಹಾಯ ಗುಂಪುಗಳ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.
ಸಾಧಕಿಯರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಿ: ಜಿ.ಪ್ರಭು



