ಸಂವಹನ ಕ್ರಿಯೆಯು ಮಾನವನಿಗೆ ಕೊಂಡಿ ಇದ್ದ ಹಾಗೆ. ಅದು ಅವನ ವೈಯಕ್ತಿಕ ಹಾಗು ವೃತ್ತಿ ಜೀವನದ ಮೌಲ್ಯವನ್ನು ತೋರಿಸುತ್ತದೆ.
ಮಾತನಾಡುವ ರೀತಿ ಅವನ ಯೋಗ್ಯತೆಯನ್ನು ತೋರುತ್ತದೆ.ಮಾತೇ ಮುತ್ತು ಮಾತೇ ಮೃತ್ಯು.
ಯಾವ ಮಾತೇ ಆಗಲಿ ಒಮ್ಮೆ ಮಾತನಾಡಿದರೆ ಆಯಿತು ಹಿಂದೆ ತೆಗೆದುಕೊಳ್ಳಲು ಆಗುವುದಿಲ್ಲ. ಮಾತನಾಡುವ ಮುನ್ನ ಯೋಚಿಸಿ ಮಾತನಾಡಬೇಕು.
ತೋಚಿದ್ದು ಮಾತನಾಡುವ ಬದಲು ಸಮಯಕ್ಕೆ ಸರಿಯಾಗಿ ಅಥವಾ ಸಮಯೋಚಿತವಾಗಿ ಮಾತನಾಡಿದಾಗ ಅದರ ತೂಕ ಹೆಚ್ಚಾಗುತ್ತದೆ. ಮಾತಿನಿಂದ ಅನೇಕ ಸಂಬಂಧಗಳು ಕಡಿದು ಹೋಗಿದೆ. ಒಳ್ಳೆಯ ಮಾತಿಗಿಂತ ಕೆಟ್ಟ ಮಾತುಗಳೇ ಮನಸಲ್ಲಿ ಉಳಿಯುವುದು.
ಮಾತನಾಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಅನ್ನುವಂತೆ ಮಾತನಾಡಿದ ಮೇಲೆ ನಾವೆಷ್ಟೇ ಕ್ಷಮೆ ಯಾಚಿಸಿದರೂ ಮರೆತು ಹೋಗದು. ಮುತ್ತು ಒಡೆದರೆ ಹೇಗೆ ಕೂಡಿಸಲು ಆಗದೋ ಹಾಗೆ ಮಾತನಾಡುವಾಗ ಯಾರ ಮನಸಿಗೂ ಘಾಸಿಯಾಗದಂತೆ ನೋಡಿಕೊಳ್ಳಬೇಕು.
ಮಾತು ಬೆಳ್ಳಿ ಮೌನ ಬಂಗಾರ ಅನ್ನುವ ಹಾಗೆ ಎಷ್ಟು ಬೇಕೋ ಅಷ್ಟು ಮಾತನಾಡಬೇಕು. ಮೌನವೇ ಲೇಸು ಒಮ್ಮೊಮ್ಮೆ. ಮೌನ ಬಹಳ ಅರ್ಥಗಳನ್ನು ಕೊಡುತ್ತದೆ. ಯಾವ ಸ್ಥಿತಿಯಲ್ಲೂ ಸಮನಾಗಿ ಇರುವ ಈ ಮೌನದ ಮೌಲ್ಯ ಹೆಚ್ಚು.ಮಾತನಾಡುವ ಮುನ್ನ ಹತ್ತು ಬಾರಿ ಯೋಚಿಸಿ ಮಾತನಾಡಬೇಕು. ಗುರು ಹಿರಿಯರ ಬಗ್ಗೆ ಕೇವಲವಾಗಿ ಮಾತನಾಡಿದಾಗ ಅವರ ಬೆಲೆಯನ್ನು ಅವರೇ ಕಳೆದುಕೊಳ್ಳುತ್ತಾರೆ.
ಮಕ್ಕಳನ್ನು ಸಹ ಬೆಳೆಸುವಾಗ ಮಾತನಾಡುವ ರೀತಿ, ನಡಾವಳಿಕೆ ಕಲಿಸಬೇಕು. ಬಾಯಿಗೆ ಬಂದ ಹಾಗೆ ಮಾತನಾಡಿದಾಗ ಮೊದಮೊದಲು ಮುದ್ದಾಗಿ ಇರುತ್ತದೆ ಮಕ್ಕಳು ಬೆಳೀತಾ ಇದ್ದಹಾಗೆ ಅದ್ವಂತಿಕೆಯ ಮಾತು ಅನಿಸುತ್ತದೆ. ಇದು ತಂದೆ ತಾಯಿಗೂ ಅನ್ವಯಿಸುತ್ತದೆ ಅವರು ಮಕ್ಕಳನ್ನು ಬೆಳೆಸುವ ರೀತಿ ತೋರಿಸಿ ಕೊಡುತ್ತದೆ.
ಯಾರೊಂದಿಗೆ ಮಾತನಾಡಬೇಕಾದರೂ ಅವರಿಗೆ ನೋವಾಗದಂತೆ, ಧ್ವನಿ ಏರಿಸಿ ಮಾತನಾಡಬಾರದು. ಮಾತಿನಲ್ಲಿ ಧೋರಣೆ ಇರಬಾರದು. ನಯವಾಗಿ ಅಲ್ಲದಿದ್ದರೂ ಸಹಜ ರೀತಿಯಲ್ಲಿ ಯಾವ ಉತ್ಪ್ರೇಕ್ಷೆ ಇಲ್ಲದೆ ಮಾತನಾಡಿದಾಗ ಎಲ್ಲರಿಗೂ ಹಿತವೆನಿಸುತ್ತದೆ.
ವಿಷಯ ಮೀರಿ ಎಲ್ಲೂ, ಯಾರೊಂದಿಗೂ ಮಾತನಾಡಬಾರದು. ತಮಗೆ ಮಾತನಾಡಿದಾಗ ಎಲ್ಲಿ ಗೌರವ ಮನ್ನಣೆ ಇರುವುದಿಲ್ಲವೋ ಅಲ್ಲಿ ಮೌನವಾಗಿರುವುದೇ ಕ್ಷೇಮ.
ಮಾತು ಮಾತುಗಳ ನಡುವೆ ಮಿತವಿರಲಿ. ಮಾತಿನ ಭಾಷೆ ಯಾರಿಗೂ ನೋವಾಗದಿರಲಿ. ದಡ್ಡನಿಗೆ ದೊಣ್ಣೆ ಪೆಟ್ಟು ಜಾಣನಿಗೆ ಮಾತಿನ ಪೆಟ್ಟು ಅನ್ನುವ ಹಾಗೆ ಜಾಣ್ಮೆಯಿಂದ ಕೂಡಿರಲಿ ಪ್ರತಿ ಮಾತು.
ಚಂಪಾ ಚಿನಿವಾರ್