ಬೆಂಗಳೂರು: ಕಾಂಗ್ರೆಸ್ ಮೇಲೆ ಆರೋಪ ಮಾಡುವುದಕ್ಕೂ ಮುನ್ನ ಮಾಡುವ ಆರೋಪಕ್ಕೆ ಇತಿಮಿತಿ ಇರಲಿ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಬಿಜೆಪಿಯವರ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ನವರನ್ನು ಹಿಂದೂ ವಿರೋಧಿಗಳು, ಹಿಂದೂಗಳ ವಿರುದ್ಧ ಕ್ರಮ ಜರುಗಿಸುತ್ತಿವೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿ ನಮ್ಮ ಸರ್ಕಾರವನ್ನು ಜನತೆ ಆಯ್ಕೆ ಮಾಡಿದ್ದಾರೆ. ಆಯ್ಕೆ ಮಾಡಿರುವ ಜನರಲ್ಲಿ ಬಹುತೇಕರು ಹಿಂದೂಗಳೇ ಇದ್ದಾರೆ. ಹಿಂದೂಗಳೇ ನಮ್ಮನ್ನು ಬೆಂಬಲಿಸಿ ಆಯ್ಕೆ ಮಾಡಿರುವಾಗ ನಾವು ಹೇಗೆ ಹಿಂದೂ ವಿರೋಧಿಗಳಾಗುತ್ತೇವೆ ಎಂದು ಪ್ರಶ್ನಿಸಿರುವ ಪರಮೇಶ್ವರ್ ಯಾವುದಕ್ಕೂ ಇತಿಮಿತಿ ಇರಲಿ ಎಂದಿದ್ದಾರೆ.
ನಿನ್ನೆ ಸಂಜೆ ಸಚಿವ ಸತೀಶ್ ಜಾರಕಿಹೊಳಿ ಊಟ ಮಾಡುವುದಕ್ಕಾಗಿ ಸೇರಿದ್ದೆವು. ನಾವು ರಾಜಕಾರಣಿಗಳು, ರಾಜಕಾರಣಿಗಳು ಎಂದ ಮೇಲೆ ರಾಜಕೀಯ ಮಾತನಾಡುತ್ತೇವೆ. ಮಾತನಾಡಿರುವ ವಿಷಯವನ್ನು ಬಹಿರಂಗ ಪಡಿಸಲಾಗುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಚುನಾವಣೆಗೂ ಮುನ್ನ ಚಿತ್ರದುರ್ಗದಲ್ಲಿ ಸಮಾವೇಶ ಮಾಡಿದ್ದೆವು. ಆ ಸಂದರ್ಭದಲ್ಲಿ 10 ಘೋಷಣೆಗಳನ್ನು ಮಾಡಲಾಗಿತ್ತು. ಆ ಘೋಷಣೆಗಳನ್ನು ಈಡೇರಿಸುವ ಸಂಬಂಧ ಮಾತುಕತೆ ನಡೆಸಿದ್ದೇವೆ ಎಂದಿದ್ದಾರೆ.