ಆನೇಕಲ್: ಕೊಡತಿ ಗ್ರಾಮ ಪಂಚಾಯಿತಿಯನ್ನು ಕಸ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಪ್ರತಿಯೊಬ್ಬರು ಸಹಕರಿಸಿ ಎಂದು ಕೊಡತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೃಷ್ಣವೇಣಿರವರು ತಿಳಿಸಿದರು.ಅವರು ಕಾಚಮಾರನಹಳ್ಳಿ ರಸ್ತೆಯಲ್ಲಿರುವ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಕೊಡತಿ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು,
ಮುಖ್ಯವಾಗಿ ಮನೆಗಳಲ್ಲಿ ಪ್ಲಾಸಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಹಾಗೂ ಶೇಖರಣೆ ಆದ ಕಸವನ್ನು ರಸ್ತೆ ಬದಿಗಳಲ್ಲಿ ಹಾಕದೆ ನೇರವಾಗಿ ಕಸದ ವಾಹನಗಳಿಗೆ ನೀಡಿ ಎಂದು ಹೇಳಿದರು.ಕೊಡತಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾರಾಯಣಸ್ವಾಮಿ (ಬಾಬು) ಮಾತನಾಡಿ ಕೊಡತಿ ಗ್ರಾಮ ಪಂಚಾಯಿತಿಯನ್ನು ಕಸ ಮುಕ್ತ ಗ್ರಾಮ ಪಂಚಾಯಿತಿ ಯನ್ನಾಗಿ ಮಾಡುವ ಉದ್ದೇಶದಿಂದ ಒಣ ಕಸ ಮತ್ತು ಹಸಿ ಕಸವನ್ನು ಬೇರ್ಪಡಿಸಲು ಮನೆಗಳಿಗೆ ಪಂಚಾಯಿತಿ ವತಿಯಿಂದ ಕಸದ ಬುಟ್ಟಿಗಳನ್ನು ನೀಡಿದ್ದೇವೆ,
ಜೊತೆಗೆ ಪ್ರತಿ ದಿನ ಕಸವನ್ನು ತೆಗೆದುಕೊಂಡು ಹೋಗಲು ಜನರ ಮನೆ ಬಾಗಿಲಿಗೆ ಕಸದ ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದ್ದು ಸಾರ್ವಜನಿಕರು ಹಾಗೂ ಬಡಾವಣೆಯ ನಿವಾಸಿಗಳು ತಮ್ಮ ಮನೆಗಳಲ್ಲಿ ಶೇಖರಣೆ ವಾಗುವ ಕಸವನ್ನು ರಸ್ತೆ ಬದಿಗಳಲ್ಲಿ ಹಾಕುವುದರಿಂದ ಸಾಂಕ್ರಾಮಿಕ ರೋಗಗಳು ಹರಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ತಪ್ಪದೆ ಕಸವನ್ನು ಕಸದ ವಾಹನಗಳಿಗೆ ನೀಡಿ ಕಸಮುಕ್ತ ಗ್ರಾಮ ಪಂಚಾಯಿತಿ ಯನ್ನಾಗಿ ಮಾಡಲು ಸಹಕರಿಸಿ ಎಂದರು. ಈಗಾಗಲೇ ಬ್ಲಾಕ್ ಸ್ಪಾಟ್ ಗಳನ್ನು ಗುರ್ತಿಸಿ ಕಸ ಹಾಕುವವರ ಮೇಲೆ 500 ರೂಪಾಯಿಂದ 5 ಸಾವಿರ ವರೆಗೆ ದಂಡ ಕೂಡ ಹಾಕಲಾಗಿದೆ ಎಂದರು.
ಸೂಲಿ ಕುಂಟೆ ಗ್ರಾಮ ಬಳಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸಲು ಜಾಗವನ್ನು ಗುರುತಿಸಿದ್ದೇವೆ, ಮುಂದಿನ ದಿನಗಳಲ್ಲಿ ಕಸದಿಂದ ರಸ ತೆಗೆದು ಸ್ವಾವಲಂಬಿ ಪಂಚಾಯಿತಿಯಾಗಿ ನಮ್ಮ ಕೊಡತಿ ಗ್ರಾಮ ಪಂಚಾಯಿತಿ ಹೊರ ಹೊಮ್ಮುತ್ತದೆ ಎಂದು ಹೇಳಿದರು.ಕೊಡತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಮಂಜುನಾಥ್, ಪಂಚಾಯಿತಿ ಸದಸ್ಯರಾದ ಸತೀಶ್, ರಾಮಸ್ವಾಮಿ, ನಂಜುಂಡರೆಡ್ಡಿ, ರಮೇಶ್, ಮುನಿರಾಜು, ವೀಣಾ ರವಿ, ಆಶಾ ಚಿಟ್ಟಿಬಾಬು ನಳಿನಾಕ್ಷಿ, ಶುಭ, ಆಂತೋನಿ ಮೇರಿ, ಮಮತಾ ಮತ್ತು ಬಡಾವಣೆಯ ನಿವಾಸಿಗಳು ಬಾಗವಹಿಸಿದ್ದರು.