ಇಂದು ನಮ್ಮ ನಾಡು ಕರ್ನಾಟಕ ರಾಜ್ಯದೆಲ್ಲೆಡೆ ಸಂಭ್ರಮದ ಕನ್ನಡ ರಾಜ್ಯೋತ್ಸವದ ಆಚರಣೆ ವಿಜೃಂಭಣೆಯಿಂದ ನಡೆಯುತ್ತಿದೆ. ಮನಸ್ಸಿಗೆ ತುಂಬಾ ಹರುಷ ಕೊಡುವ ವಿಚಾರವಿದು. ನಮಗೆ ಅನ್ನ ನೀಡಿದ ಭೂಮಿತಾಯಿಯ ಹೇಗೆ ಮರೆಯುವುದು. ಜೀವನ ಕಟ್ಟಿಕೊಟ್ಟ ಈ ತಾಯಿಯ ಉದಾರತೆ ಹೇಗೆ ಮರೆಯುವುದು.
ನಮ್ಮ ರಾಜ್ಯ ಕರ್ನಾಟಕದಲ್ಲಿ ವಾಸಿಸುವುದು ನಿಜಕ್ಕೂ ಹೆಮ್ಮೆಯ ವಿಷಯ. ಏಕೆಂದರೆ ಯಾರೇ ಬರಲಿ ಎಲ್ಲರನ್ನೂ ನಗುತ್ತಾ ಸ್ವೀಕರಿಸಿ ತನ್ನ ಮಡಿಲಲ್ಲಿ ಇಟ್ಟು ಸಲಹುವಳು ನಮ್ಮ ಈ ಮಮತೆಯ ತಾಯಿ. ಯಾವ ದೇಶ ರಾಜ್ಯ ಭಾಷೆ ವರ್ಣ ಬಡವ ಶ್ರೀಮಂತ ಎಲ್ಲಾ ರೀತಿಯ ವರ್ಗದ ಜನರು ಬಂದರೂ ಕಿಂಚಿತ್ತೂ ಬೇಸರಿಸದೆ ತನ್ನಲ್ಲಿ ವಾಸಿಸಲು ನೆಲೆ ಕೊಡುವಳು.
ನಮ್ಮ ಭಾರತ ದೇಶದಲ್ಲಿ ಕರ್ನಾಟಕ ರಾಜ್ಯವೊಂದೇ ಈ ರೀತಿ ವಿವಿಧ ಭಾಷೆ ಮಾತನಾಡುವ ಜನರು ಹೆಚ್ಚಾಗಿ ವಾಸಿಸುತ್ತಾ ಇರುವ ಪ್ರದೇಶ. ಹಾಗಾಗಿ ಎಲ್ಲರ ಹೆಗಲ ಮೇಲೂ ಒಂದು ಜವಾಬ್ದಾರಿ ಇದೆ. ಇಲ್ಲಿನ ಮಣ್ಣು ಜನ ಭಾಷೆ ಎಲ್ಲವನ್ನೂ ಗೌರವಿಸುವುದು. ಮುಖ್ಯವಾಗಿ ಇಲ್ಲಿನ ಭಾಷೆಯನ್ನು ಕಲಿಯುವುದು ಇಲ್ಲಿನ ಸಂಸ್ಕೃತಿಯನ್ನು ಪ್ರಕೃತಿಯನ್ನು ಕಾಪಾಡುವುದು.
ಸಾಧ್ಯವಾದಷ್ಟು ಕನ್ನಡವನ್ನು ಕಲಿತು ಮಾತನಾಡಲು ಪ್ರಯತ್ನಿಸಿದರೆ ಅದಕ್ಕಿಂತ ಸಂತೋಷ ಕೊಡುವ ವಿಷಯ ಬೇರೆ ಇಲ್ಲ. ಅನ್ಯ ಭಾಷಿಗರಿಗೆ ಕನ್ನಡ ಕಲಿಯುವುದು ಕಷ್ಟವೇ ಇರಬಹುದು. ಆದರೆ ನಿಮ್ಮ ಭಾಷೆಯನ್ನು ಕೂಡಾ ಅರ್ಥ ಮಾಡಿಕೊಂಡು ನಿಮ್ಮೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವವರು ಕನ್ನಡಿಗರಲ್ಲವೇ? ಒಮ್ಮೆ ಯೋಚಿಸಿ ನೋಡಿ.
ಕೆಲವೊಂದು ವಿಷಯದಲ್ಲಿ ನಾವು ಕನ್ನಡಿಗರು ಹೆಮ್ಮೆ ಪಡಬೇಕು. ಅನ್ಯ ಭಾಷಿಗರು ಕೂಡಾ ಇಲ್ಲಿ ಬಂದು ಕನ್ನಡವನ್ನು ಕಲಿತು ವ್ಯವಹರಿಸುವರು. ಕನ್ನಡ ಭಾಷೆಯ ಬೆಳವಣಿಗೆಗೆ ಕೈ ಜೋಡಿಸುವರು. ಕನ್ನಡಮ್ಮನ ಸೇವೆ ಮಾಡುವರು. ಸನ್ನೆಯ ಭಾಷೆಯಲ್ಲಿ ಮಾತನಾಡುವುದು ಅರ್ಥ ಮಾಡಿಕೊಳ್ಳುವುದು ಎಲ್ಲರಿಂದಲೂ ಸಾಧ್ಯವೇ? ಹಾಗೆಯೇ ವ್ಯವಹರಿಸುವುದು ಸಾಧ್ಯವೇ? ಇದಕ್ಕಾಗಿ ಒಂದು ಭಾಷಾ ಮಾಧ್ಯಮವು ಬೇಕಲ್ಲವೇ? ಅರ್ಥ ಮಾಡಿಕೊಳ್ಳುವುದು ಹಾಗೂ ಅರ್ಥೈಸಿಕೊಡುವುದು ಎರಡೂ ತ್ರಾಸದ ಕೆಲಸವೇ ಸರಿ.
ನಿಧಾನವಾಗಿ ಕನ್ನಡ ಕಲಿತು ವ್ಯವಹರಿಸಿದರೆ ನಿಮಗೂ ನಮಗೂ ಕಷ್ಟ ಇರದು. ನಾವು ಎಲ್ಲೇ ಹೋಗಲಿ ಎಲ್ಲೇ ನೆಲೆಸಲಿ ಅಲ್ಲಿನ ಜನರೊಂದಿಗೆ ಬೆರೆತು ಅಲ್ಲಿನ ಭಾಷೆ ಕಲಿತು ಮಾತನಾಡಿದರೆ ಪ್ರೀತಿ ಆದರ ಇನ್ನೂ ಹೆಚ್ಚುವುದು. ಹಾಗೇಯೇ ಕನ್ನಡ ನಾಡಿನಲ್ಲಿ ಕನ್ನಡ ಮಾತನಾಡಲು ಕಲಿಯಿರಿ. ನಿಮ್ಮ ಭಾಷೆಯೊಂದಿಗೆ ಕನ್ನಡವನ್ನೂ ಬಳಸಿ ಬೆಳೆಸಿ. ಒಂದು ರಾಜ್ಯದ ಪ್ರಾದೇಶಿಕ ಭಾಷೆಯ ಅಳಿವು ಉಳಿವು ಅಲ್ಲಿ ವಾಸಿಸುವ ಪ್ರಜೆಗಳ ಕೈಯಲ್ಲಿ ಇದೆ. ಅದು ಕನ್ನಡದವರೇ ಆಗಲಿ ಅನ್ಯ ಭಾಷಿಗರೇ ಆಗಲಿ.
ಇಲ್ಲಿ ಹುಟ್ಟಿ ಬೆಳೆದ ನಾವು ಕನ್ನಡಿಗರು ನಮ್ಮ ಭಾಷೆಯ ಉಳಿವಿನ ಬಗ್ಗೆ ಜಾಗೃತರಾಗಬೇಕಿದೆ. ಅನ್ಯ ಭಾಷಿಗರು ಕೂಡಾ ಸರಳವಾಗಿ ಕನ್ನಡ ಕಲಿಯುವಂತೆ ಪ್ರೇರಣೆ ನೀಡುವ ಅಗತ್ಯವಿದೆ. ನಮ್ಮ ಮನೆಯ ಮಕ್ಕಳು ಯಾವ ಶಾಲೆಯಲ್ಲಿಯೇ ಕಲಿಯಲಿ ಮನೆಯಲ್ಲಿ ಆದಷ್ಟೂ ಕನ್ನಡ ಮಾತನಾಡಲು ಪ್ರೇರೇಪಿಸಿ ಜೊತೆಗೆ ನಾವೂ ಅವರ ಜೊತೆ ಮಾತನಾಡಬೇಕಿದೆ.
ಹೊರಗಿನ ವ್ಯವಹಾರಕ್ಕೆ ಅನ್ಯ ಭಾಷೆ ಕಲಿಯದೇ ವಿಧಿಯಿಲ್ಲ. ಮನೆಯೇ ಮಕ್ಕಳಿಗೆ ಮೊದಲ ಪಾಠಶಾಲೆ. ಮನೆಯಿಂದಲೇ ಮೊದಲು ತೊಡಗಲಿ ಕನ್ನಡ ಭಾಷೆಯನ್ನು ಉಳಿಸುವ ಪ್ರಯತ್ನ. ನಮ್ಮನ್ನು ನೋಡಿ ಮಕ್ಕಳು ಕಲಿಯುತ್ತಾರೆ. ಬುಡದಿಂದಲೇ ನೀರು ಎರೆದರೆ ಬೇರು ಗಟ್ಟಿಯಾಗುತ್ತದೆ. ಅದರಿಂದ ಟಿಸಿಲು ಒಡೆದ ಶಾಖೆಗಳು ಕನ್ನಡದ ಕಂಪನ್ನು ಬೀರಿ ಹರಡದೇ ಇರದು.
ಜೈ ಕರ್ನಾಟಕ ಮಾತೆ…. ಜೈ ಭುವನೇಶ್ವರಿ ದೇವಿ
“”ಸಿರಿಗನ್ನಡಂ ಗೆಲ್ಗೆ””
ಲೇಖನ: ಸಿ.ವಿ.ಲಕ್ಷ್ಮಣರಾಜು