ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಮತ ಚಲಾಯಿಸಿ ಪ್ರಜುಪ್ರಭುತ್ವವನ್ನು ಗೆಲ್ಲಿಸೋಣವೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನಲೆ ಲಾಲ್ಬಾಗ್ 1ನೇ ಮುಖ್ಯದ್ವಾರದಿಂದ ಹಮ್ಮಿಕೊಂಡಿದ್ದ “ಮತದಾನ ಜಾಗೃತಿ ಕಾಲ್ನಡಿಗೆ ಜಾಥಾ” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವೆಲ್ಲರೂ ಯುವ ಮತದಾರರಾಗಿದ್ದು, ಮೊದಲ ಬಾರಿ ಮತ ಚಲಾಯಿಸುತ್ತಿದ್ದೀರಿ. ಪ್ರಜಾಪ್ರಭುತ್ವಕ್ಕೆ ಉತ್ತಮ ಕೊಡುಗೆ ನೀಡುವ ನಿಟ್ಟಿನಲ್ಲಿ ಎಲ್ಲಾ ಯುವ ಮತದಾರರು ತಪ್ಪದೆ ಮತ ಚಲಾಯಿಸಬೇಕೆಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ಕಳೆದ ಚುನಾವಣೆಯಲ್ಲಿ ಶೇ. 54 ರಷ್ಟು ಮತದಾನವಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಮತದಾನದ ಶೇಖಡವಾರು ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾನಾ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಮಹಾರಾಣಿ ಕಾಲೇಜು, ವಿವೇಕಾನಂದ ಪದವಿ ಕಾಲೇಜು, ವಿಜಯ ಕಾಲೇಜು, ಸರ್ಕಾರಿ ಕಲಾ ಕಾಲೇಜು, ಎಸ್.ಎಲ್.ಎನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಸೇರಿದಂತೆ 17 ವಿವಿಧ ಕಾಲೇಜುಗಳಿಂದ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.ಲಾಲ್ಬಾಗ್ ನಲ್ಲಿರುವ ವಾಯುವಿಹಾರ ಮಾರ್ಗದಲ್ಲಿ ಸುಮಾರು 4 ಕಿ.ಮೀ ಕಾಲ್ನಡಿಯ ಜಾಥಾ ಮೂಲಕ ಸಾಗಿ ವಾಯುವಹಾರಿಗಳಲ್ಲಿ ಏಪ್ರಿಲ್ 26 ರಂದು ತಪ್ಪದೆ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು.
ವಿದ್ಯಾರ್ಥಿಗಳು `ಪ್ರಜಾಪ್ರಭುತ್ವಕ್ಕೆ ಮತದಾನ ನೀಡಿ’, `ನನ್ನ ಮತ ದೇಶಕ್ಕೆ ಹಿತ’, `ಚುನಾವಣಾ ಪರ್ವ ದೇಶದ ಗರ್ವ’, `26ರಂದು ಮತ ಚಲಾಯಿಸಿ’ ಸೇರಿದಂತೆ ಇನ್ನಿತರೆ ಘೋಷಣೆಗಳನ್ನು ಕೂಗುತ್ತಾ ಜಾಥಾ ಸಾಗಿತು.ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಕಾಂತರಾಜು, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಯಾದ ಪ್ರತಿಭಾ ಸೇರಿದಂತೆ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.