ಮಾಲೂರು: ಆಕರ್ಷಕ ಮನರಂಜನಾ ಕಲೆಯಾದ ರಂಗಭೂಮಿ ಕಲೆ ವಿಶ್ವದಾದ್ಯಂತ ಸಮಾಜದ ಉನ್ನತಿಯ ಪ್ರೇರಣಾ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ವರ್ಷ ಒಂದು ಧ್ಯೇಯ ಘೋಷದೊಂದಿಗೆ ಆಚರಿಸುವ ವಿಶ್ವ ರಂಗಭೂಮಿ ದಿನಾಚರಣೆ ವಿಶ್ವಶಾಂತಿಗಾಗಿ ರಂಗಕಲೆ ಎಂಬ ಘೋಷ ವಾಕ್ಯದೊಂದಿಗೆ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ” ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರಪ್ಪ ತಿಳಿಸಿದರು.
ಮಾಲೂರಿನ ಚೈತನ್ಯ ಕಲಾನಿಕೇತನ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ತಿನ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ‘ತಿಂಗಳ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ – 117 ಹಾಗೂ ವಿಶ್ವ ರಂಗಭೂಮಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
“ರಂಗಭೂಮಿ ನನ್ನ ಉಸಿರು. ರಂಗಭೂಮಿ ಕಲೆಗಾಗಿ ಹಾಗೂ ರಂಗಕಲಾವಿದರ ಪ್ರಗತಿಗಾಗಿ ಶ್ರಮಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ನನಗೆ ತವರು ನೆಲದಿಂದ ಗೌರವ ಅಭಿನಂದನೆ ನೀಡಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸುವಂತೆ ಮಾಡಿದೆ. ನಮ್ಮ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕಲಾವಿದರಿದ್ದು ಅವರನ್ನು ಪರಿಚಯಿಸುವಂತಹ ಒಂದು ಕೃತಿಯನ್ನು ಹೊರ ತರಲಾಗುವುದು” ಎಂದು ಗೌರವ ಅಭಿನಂದನೆಗಳನ್ನು ಸ್ವೀಕರಿಸಿದ ಕರ್ನಾಟಕ ನಾಟಕ ಅಕಾಡೆಮಿಯ ನೂತನ ಸದಸ್ಯ ಮಾಲೂರು ವಿಜಿ ತಿಳಿಸಿದರು.
ಚೈತನ್ಯ ಕಲಾನಿಕೇತನ ಸಂಸ್ಥೆಯ ಅಧ್ಯಕ್ಷ ಜಯಮಂಗಲ ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನು ನುಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎಂ.ವಿ.ಹನುಮಂತಯ್ಯ ವಹಿಸಿದ್ದರು. ಸಾಹಿತಿ ಡಾ.ನಾ.ಮುನಿರಾಜು ಅಭಿನಂದನಾ ನುಡಿಗಳನ್ನು ನುಡಿದರು. ರಂಗ ಕಲಾವಿದರಾದ ಎನ್.ಎಂ.ಚಂದ್ರಪ್ಪ, ಮುನಿವೆಂಕಟಪ್ಪ, ನಂಜುಂಡಪ್ಪ (ಪಾಸ್ವಾನ್), ಹರೀಶ್ ಜಯಮಂಗಲ, ಸತೀಶ್ ಕೋಡಿಹಳ್ಳಿ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಮಾಲೂರು ತಾಲ್ಲೂಕು ಅಧ್ಯಕ್ಷ ನಾರಿಗಾನಹಳ್ಳಿ ಶ್ರೀನಿವಾಸ್, ಕರ್ನಾಟಕ ರಾಜ್ಯ ಅನಿಕೇತನ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಕೆ.ಮುನಿಕೃಷ್ಣಪ್ಪ, ಕವಿಗಳಾದ ವಿಕ್ರಂ ಶ್ರೀನಿವಾಸ್, ಮಾ.ಚಿ.ನಾಗರಾಜ್, ರೋಣೂರು ವೆಂಕಟೇಶ್, ಬಹದ್ದೂರ್ ಸಾಬ್, ಸಿ.ವೈ.ರಾಧಮ್ಮ, ಸರ್ವೇಶ್, ಚಿನ್ನಯ್ಯ, ಪ್ರಶಾಂತ್,ಮುಂತಾದವರು ಭಾಗ ವಹಿಸಿದ್ದರು.