ಸಕಲ ಜೀವರಾಶಿಗಳಿಗಿಂತ ಮಾನವನ ಜನ್ಮ ಬಹಳ ದೊಡ್ಡದು. ಅವನಿಗೆ ವಿವೇಚಿಸುವ ಶಕ್ತಿ ಇದೆ, ವಿವೇಕ ಇದೆ, ವಿಭಿನ್ನವಾಗಿದಾನೆ. ಅವನು ಯೋಚನೆ, ಭಾವನೆ ಎಲ್ಲವನ್ನೂ ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿದಾನೆ. ಬದುಕು ಬವಣೆ ಅರಿತಿದ್ದಾನೆ ಹಾಗೆಯೇ ಬದುಕುವ ಕಲೆ ಅವನಿಗೆ ತಿಳಿದಿದೆ. ಅವನು ಭಾವನಾ ಜೀವಿ.
ಪ್ರತಿಯೊಬ್ಬರಿಗೂ ಅವರದೇ ಆದ ಭಾವಲೋಕವಿರುತ್ತದೆ. ಅಲ್ಲಿ ಅವರ ಕಲ್ಪನೆಗಳು, ಕನಸುಗಳು, ಆಸೆಗಳು, ವಿಚಾರಗಳು ಜೀವ ತಳೆಯುತ್ತವೆ. ಒಂದು ವೇಳೆ ಬುದ್ಧಿಮಾತ್ರದಿಂದಲೇ ಆಕಾಂಕ್ಷೆ, ಚಿಂತನೆಗಳು ಹುಟ್ಟಿಕೊಂಡರೂ ಅವುಗಳಿಗೆ ನೀರೆರೆದು ಪೋಷಿಸುವುದು ವ್ಯಕ್ತಿಯ ಭಾವಧಾರೆ. ಭಾವನೆ ಹಾಗೂ ಬುದ್ಧಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವು ಪರಸ್ಪರ ಹೊಂದಿಕೊಂಡು ಕೆಲಸ ಮಾಡಿದರೆ ಕಾರ್ಯ ಸುಗಮ ಹಾಗು ಮನಸ್ಸಿಗೆ ಹಿತ.
ಅದೇ ಅವೆರಡು ವಿರುದ್ಧ ದಿಕ್ಕಾದರೆ ಎಲ್ಲಾ ಕೆಲಸಗಳಿಗೂ ಅಡ್ಡಿ, ಮನಸ್ಸಿಗೆ ಗೊಂದಲ, ಭಾವಗಳ ಸಂಘರ್ಷಣೆ ಶುರುವಾಗುತ್ತೆ. ಆಗ ಸುಖ ಸಂತೋಷಗಳು ನಮ್ಮಿಂದ ದೂರ ಸರಿಯುತ್ತವೆ. ಈ ನಿಟ್ಟಿನಲ್ಲಿ ನೋಡಿದಾಗ ಮಾನಸಿಕವಾಗಿ ಸಮತೋಲನ ಹೊಂದಬೇಕು. ಬೇಕು ಬೇಡದ ವಿಚಾರದ ಮೇಲೆ ಗಮನಹರಿಸಬೇಕು.
ನಮ್ಮ ಬದುಕು ಸುಖವಾಗಿ ಇರಬೇಕು ಎನ್ನುವುದಾದರೆ ಭಾವನೆಗಳ ನಿಯಂತ್ರಣ ಹಾಗೂ ಬುದ್ಧಿಯ ಹತೋಟಿ ಎರಡೂ ಅತೀ ಅವಶ್ಯಕ. ಭಾವನೆಯೇ ಬದುಕಾದರೂ ಕಷ್ಟ. ಅದೇ ರೀತಿ ಎಲ್ಲವನ್ನೂ ಬುದ್ಧಿಗೇ ಮೀಸಲಿಟ್ಟರೂ ಸಲ್ಲದು. ಆದ್ದರಿಂದ ಅವೆರಡರ ಸಮತೋಲನ ಅತ್ಯಂತ ಅಗತ್ಯವಾದುದು. ಪ್ರೀತಿ, ಸ್ನೇಹ, ಮೋಹ, ಕೋಪ, ಸಂತೋಷ ದುಃಖ ಹೀಗೆ ಯಾವ ರೀತಿಯ ಭಾವನೆಗಳು ಅತಿಯಾದರೂ ಮನಸ್ಸು ದಾರಿ ತಪ್ಪುತ್ತದೆ. ಇದರಿಂದ ಮನಸಿಗೆ ಬಹಳ ಖೇದವಾಗುತ್ತದೆ.
ಸ್ನೇಹದಲ್ಲಿ, ದಾಂಪತ್ಯದಲ್ಲಿ, ಕೌಟುಂಬಿಕ ಜೀವನದಲ್ಲಿ ಬುದ್ಧಿಗಿಂತ ಭಾವನೆಯ ಪಾತ್ರ ಹಿರಿದಾದುದು. ಸ್ವಲ್ಪ ಬುದ್ಧಿವಂತಿಕೆಯಿಂದ, ಹೆಚ್ಚು ಆತ್ಮೀಯತೆಯಿಂದ ಇಲ್ಲಿ ನಡೆದುಕೊಳ್ಳಬೇಕಾಗುತ್ತದೆ. ಪರಸ್ಪರ ಭಾವನೆಗಳನ್ನು ಕೊಟ್ಟು ತೆಗೆದುಕೊಂಡಾಗ ಸಂಬಂಧಗಳು ಭದ್ರವಾಗುತ್ತವೆ. ಆದರೆ ಈ ಸಂಬಂಧಗಳ ಮಧ್ಯದಲ್ಲಿ ಭಾವನೆಗಳ ತಿಕ್ಕಾಟವೂ ಹೆಚ್ಚಿನದೇ ಇರುತ್ತದೆ.
ಆತ್ಮೀಯತೆಯನ್ನು ನೀಡುವ ಪ್ರೀತಿ, ಕಾಳಜಿ ಒಮ್ಮೊಮ್ಮೆ ಸಮಸ್ಯೆಯನ್ನೂ ಸೃಷ್ಟಿಸಿಬಿಡಬಹುದು ಬೇರೆಯವರ ಬಲವಂತಕ್ಕೆ ಸ್ನೇಹ, ಮಾತುಕತೆ ಮಾಡಿಕೊಂಡಿದ್ದರೆ, ಇದು ಕ್ಷಣಿಕವಾದ ಬೆಸುಗೆಯಾಗಿರುತ್ತದೆ. ಸಣ್ಣ ವಿಚಾರಗಳೂ, ಭಿನ್ನಾಭಿಪ್ರಾಯಗಳು ಸಹ ದೊಡ್ಡದಾಗಿ ಕಂಡು ಸಂಬಂಧಗಳು ಮುರಿದುಹೋಗುತ್ತದೆ. ಮನಸಿನ ಮೇಲೆ ಅಗಾಧವಾಗಿ ಪರಿಣಾಮಬೀರುತ್ತದೆ. ಅಲ್ಲಿ ಕೆಲವು ರಾಸಾಯನಿಕ ಕ್ರಿಯೆಯಾಗಿ ದೇಹದ ಭಾಗವು ವಿಷಪೂರಿತವಾಗುತ್ತದೆ. ಮಾನಸಿಕವಾದ ಹಿಂಸೆ ದೇಹದ ಮೇಲೆ ಪರಿಣಾಮ ಬೀರುತ್ತದೆ.
ಇಂದಿನದು ಯಾಂತ್ರಿಕ ಬದುಕು, ಭಾವನೆಗಳ ವ್ಯಕ್ತಪಡಿಸುವಿಕೆಗೆ ಯಂತ್ರಗಳು, ತಂತ್ರಜ್ಞಾನಗಳು ಮಾಧ್ಯಮವಾಗುತ್ತಿವೆ. ಪ್ರೇಮ ಪ್ರೀತಿ ಎಲ್ಲವೂ ಮೊಬೈಲ್ ಸಂದೇಶವಾಗಿದೆ. ಭಾವನೆಗಳು ಬರೀ ಪದಗಳಲ್ಲಿ ವ್ಯಕ್ತವಾಗುತ್ತಿದೆ. ದೂರದಲ್ಲಿ ಇರುವ ಇಬ್ಬರು ಯುವ ಪ್ರೇಮಿಗಳ ಮನಸ್ಸುಗಳು ಫೇಸ್ಬುಕ್, ಇನ್ಸ್ಟಾಗ್ರಾಂ ಅಥವಾ ಇನ್ನಾವುದೋ ಸಾಮಾಜಿಕ ಜಾಲತಾಣಗಳ ಮೂಲಕ ಬೆಸೆಯುತ್ತವೆ. ಇವು ಸ್ನೇಹದಲ್ಲಿ ಆರಂಭವಾಗಿ, ಪ್ರೀತಿಯಲ್ಲಿ ಬೆಳೆದು, ಮದುವೆಯ ಹಂತಕ್ಕೂ ಹೋಗಬಹುದು.
ಫೇಸ್ಬುಕ್ ಚಾಟಿಂಗ್ನಲ್ಲಿ, ಮೊಬೈಲ್ ಸಂಭಾಷಣೆಯಲ್ಲಿ ಭಾವನೆಗಳನ್ನು ಹಂಚಿಕೊಳ್ಳುವಾಗ ಅಲ್ಲಿ ಬರೀ ಪದಗಳ ಮೂಲಕ ಭಾವನೆಗಳು ವ್ಯಕ್ತವಾಗುತ್ತದೆಯೇ ಹೊರತು, ಪ್ರತ್ಯಕ್ಷವಾಗಿ ನೋಡುವ ನೋಟ, ಹಿತವಾದ ಭಾವ ವ್ಯಕ್ತಪಡಿಸಲು ಸಾಧ್ಯವಿಲ್ಲ. ಆದರೂ ಪ್ರೀತಿ ಮುಂದುವರಿಯುತ್ತದೆ.
ಆದರೆ ಮದುವೆಯಾಗಿ, ಒಟ್ಟಿಗೆ ಬದುಕಲಾರಂಭಿಸಿದಾಗ ಮೊದಲಿನ ಧಾಟಿಯಲ್ಲಿಯೇ ಭಾವನೆಗಳ ತೋರ್ಪಡಿಕೆ ಸಾಧ್ಯವಿಲ್ಲ. ಅಲ್ಲಿ ಅವರ ಭಾವಗಳು, ದೇಹಾಂಗ ಭಾವಗಳು ಕಣ್ಣಿಗೆ ಕಾಣಿಸುತ್ತದೆ. ಅಂದಿನ ಫೋನ್ ಸಂಭಾಷಣೆಯ ಸಮಯಕ್ಕೂ ಈಗಿನ ರೀತಿ ನೀತಿ, ನಡಾವಳಿಕೆಗೂ ಬಹಳ ವ್ಯತ್ಯಾಸವಿರುತ್ತದೆ. ಈಗ ಜವಾಬ್ದಾರಿಯ ಜೀವನವಿರುತ್ತದೆ. ಈ ಬದಲಾವಣೆಗಳು ಕಣ್ಣಿಗೆ ಕಾಣುವಾಗ ಭಾವನೆಗಳ ತಿಕ್ಕಾಟ, ದ್ವಂದ್ವ, ಜಗಳ ಆರಂಭವಾಗುತ್ತದೆ. ಅನುಮಾನ, ಅವಮಾನ, ಭಾವನೆಗೆ ತಕ್ಕ ಪ್ರತಿಕ್ರಿಯೆ ಇಲ್ಲದಿರುವುದು ಇತ್ಯಾದಿ ಋಣಾತ್ಮಕ ಅಂಶಗಳು ಹೆಚ್ಚಾಗಿ ಸಂಬಂಧ ಹಾಳಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಈ ರೀತಿಯಾಗಿ ಭಾವನೆಗಳ ಅರ್ಥೈಸುವಿಕೆಯ ದೋಷದಿಂದ ಅದೆಷ್ಟೋ ಮದುವೆಗಳು ಮುರಿದು ಬೀಳುತ್ತಿವೆ. ಡೈವೋರ್ಸ್ಗಳ ಸಂಖ್ಯೆ ಹೆಚ್ಚುತ್ತಿದೆ.
ವಾಸ್ತವ ಬದುಕೇ ಬೇರೆ, ಬರಹವೇ ಬೇರೆ,ಫೋನ್, ಮಾಧ್ಯಮಗಳ ಸಂಭಾಷಣೆಯೇ ಬೇರೆ. ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ದಾರಿ ತಪ್ಪುತಿದ್ದಾರೆ. ಯಾವುದು ಸತ್ಯ ಅಸತ್ಯ, ಸರಿ ತಪ್ಪು ಬೇಕು ಬೇಡ ಎಂಬುದನ್ನು ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರಾಗಿದ್ದಾರೆ. ಅನುಭವದಿಂದ ಹೇಳುವ ಮಾತುಗಳು, ಉಪದೇಶಗಳು ಅವರ ತಲೆಗೆ ಹೋಗುವುದೇ ಇಲ್ಲ. ಈ ವಯಸಿನಲ್ಲಿ ಬೇರೆಯವರು ಏನೇ ಹೇಳಿದರೂ ಅದು ತಪ್ಪಾಗಿ ಕಾಣುತ್ತದೆ.ಅವರಿಗೇ ತಿಳಿದಿರಬೇಕು ಅಥವಾ ತಿಳಿದವರ ಮಾತು ಕೇಳಬೇಕು. ಇಲ್ಲದಿದ್ದರೆ ಜೀವನಪರ್ಯಂತ ದುಃಖಿಸುತ್ತಾ ಕೂರಬೇಕಾದ ಪರಿಸ್ಥಿತಿ ಬರಬಹುದು.
-ಚಂಪಾ ಚಿನಿವಾರ್ ಆಪ್ತ ಸಮಾಲೋಚಕಿ