ದೊಡ್ಡಬಳ್ಳಾಪುರ: ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿನ ಅವ್ಯವಸ್ಥೆ ಕಂಡು ಲೋಕಾಯುಕ್ತ ನ್ಯಾಯಾಧೀಶೆ ಅನಿತಾ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಭೂ ದಾಖಲೆಗಳ ಅಸಮರ್ಪಕ ವಿಲೇವಾರಿಯನ್ನು ಖುದ್ದು ನ್ಯಾಯಾಧೀಶರೇ ಗಮನಿಸಿದರು. ಎಡಿಎಲ್ಆರ್ ಕಚೇರಿ ಶೌಚಾಲಯದ ಖಾಲಿ ಜಾಗದಲ್ಲಿ ಬೇಕಾಬಿಟ್ಟಿ ಜೋಡಿಸಿರುವ ದಾಖಲೆಗಳನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಕಡತಗಳ ಮೂಟೆಗಳನ್ನು ತೆರವು ಮಾಡುವಂತೆ ಸೂಚಿಸಿದರು. ನಂತರ ಮಹಿಳಾ ಸಿಬ್ಬಂದಿಯಿಂದ ಶೌಚಾಲಯ ಸ್ವಚ್ಛತೆ ಕುರಿತು ಮಾಹಿತಿ ಪಡೆದ ನ್ಯಾಯಾಧೀಶರು, ಹೆಚ್ಚುವರಿ ಶೌಚಾಲಯ ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳಿದರು.
ಕಚೇರಿಯ ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ ನೀಡುವ ವೇತನ ಕುರಿತು ಮಾಹಿತಿ ಪಡೆದರು. ಸಾಕಷ್ಟು ಕಡಿತಗಳು ವಿಲೇವಾರಿಗೆ ಬಾಕಿ ಉಳಿದಿದ್ದು, ಅಧಿಕಾರಿಗಳ ವಿವರಣೆ ಕೇಳಿದರು. ಸಾರ್ವಜನಿಕರ ದೂರು ಆಧರಿಸಿ ದೊಡ್ಡಬಳ್ಳಾಪುರ ಸೇರಿದ ರಾಜ್ಯದ 11 ಕಡೆ ಎಡಿಎಲ್ ಆರ್ ಹಾಗೂ ಡಿಡಿಎಲ್ ಆರ್ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಯಲಹಂಕ, ಕೆ.ಆರ್.ಪುರಂ, ದೊಡ್ಡಬಳ್ಳಾಪುರ ಸೇರಿದಂತೆ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.ದೊಡ್ಡಬಳ್ಳಾಪುರ ಎಡಿಎಲ್ ಆರ್ ಕಚೇರಿಗೆ ಖುದ್ದು ಲೋಕಾಯುಕ್ತ ನ್ಯಾಯಾಧೀಶೆ ಹಾಗೂ ಡೆಪ್ಯುಟಿ ರಿಜಿಸ್ಟ್ರಾರ್ ಅನಿತಾ ಅವರ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಎಸ್ಪಿ ಡಾ.ರಾಮ್ ಅರಸಿದ್ದಿ, ಡಿವೈಎಸ್ಪಿ ವೀರೇಂದ್ರ ನೇತೃತ್ವದಲ್ಲಿ 15 ಮಂದಿ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ದಾಳಿ ವೇಳೆ ರೈತರೊಬ್ಬರು ಜೋರು ದನಿಯಲ್ಲಿ ಅಧಿಕಾರಿಗಳ ವಿಳಂಬ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪೋಡಿ ದರಕಾಸ್ತು ಮಾಡಿಸಲು ಅರ್ಜಿ ನೀಡಿ ಎರಡು ವರ್ಷ ಕಳೆದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಆಗ ಡಿವೈಎಸ್ಪಿ ವೀರೇಂದ್ರ ಅವರು ಆ ವ್ಯಕ್ತಿಯನ್ನು ಮನವೊಲಿಸಿ ದೂರು ವಿವರಿಸುವಂತೆ ಕೇಳಿ ಕರೆದೋಯ್ದರು.