ಬೆಂಗಳೂರು: ನಿಗಧಿತ ಆದಾಯಕ್ಕೂ ಮೀರಿ ಹೆಚ್ಚು ಆಸ್ತಿಗಳಿಸಿದ್ದಾರೆ ಎಂಬ ಆರೋಪದ ಮೇಲೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ 13 ಮಂದಿ ಭ್ರಷ್ಟ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿ ಸಿಬ್ಬಂದಿಗಳು ಮಿಂಚಿನ ದಾಳಿ ನಡೆಸಿ ಶೋಧ ಕೈಗೊಂಡಿವೆ.
ಬಲೆಗೆ ಬಿದ್ದಿರುವ 13 ಅಧಿಕಾರಿಗಳಿಗೆ ಸೇರಿದ ರಾಜ್ಯದ 63ಕ್ಕೂ ಹೆಚ್ಚು ಕಡೆಗಳಲ್ಲಿ ಇಂದು ಮುಂಜಾನೆಯಿಂದಲೇ ದಾಳಿ ನಡೆಸಿರುವ ಲೋಕಾ ಅಧಿಕಾರಿಗಳು ಕೊರೆಯುವ ಚಳಿಯಲ್ಲೂ ಶಾಕ್ ನೀಡಿದ್ದಾರೆ.ಬೆಂಗಳೂರಿನಲ್ಲಿ ಮೂರು ಕಡೆ ದಾಳಿ ಹಾಗೂ ಪರಿಶೀಲನೆ ನಡೆದಿದೆ. ದಾಳಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ. ಆದಾಯಕ್ಕೂ ಮೀರಿದ ಅಧಿಕ ಆಸ್ತಿ ಸಂಗ್ರಹಿಸಿದ ಸಂಬಂಧ ದಾಳಿ ನಡೆಸಿ ದಾಖಲೆ ಹಾಗೂ ಆಸ್ತಿಗಳ ಪರಿಶೀಲನೆ ಮಾಡಲಾಗುತ್ತಿದೆ.
ಬೆಂಗಳೂರಿನ ಮೂರು ಕಡೆ, ಕಲಬುರಗಿ, ಬೀದರ್-2 ಕಡೆ, ಬಳ್ಳಾರಿ, ಕೊಪ್ಪಳ, ಚಿಕ್ಕಬಳ್ಳಾಪುರ, ಮೈಸೂರು, ಕೋಲಾರ, ಧಾರವಾಡದಲ್ಲಿ ಒಂದೊಂದು ಕಡೆ ದಾಳಿ ಮಾಡಲಾಗಿದೆ.ಬೆಂಗಳೂರಿನ ಜಯನಗರದ ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಚನ್ನಕೇಶವ ಅವರ ಜಕ್ಕೂರು ಸಮೀಪದ ಮನೆ ಮೇಲೆ ದಾಳಿ ನಡೆಸಲಾಗಿದೆ.
ಚನ್ನಕೇಶವರ ಅಮೃತ್ ಹಳ್ಳಿ ನಿವಾಸದ ಮೇಲೆ ದಾಳಿ ನಡೆಸಿದಾಗ ಚೆನ್ನಕೇಶವ ಮತ್ತು ಅವರ ಪತ್ನಿ ಹೆಸರಲ್ಲಿ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ. 6 ಲಕ್ಷ ನಗದು. ಚಿನ್ನ 3 ಕೆಜಿ, 28 ಕೆ.ಜಿ ಬೆಳ್ಳಿ, 25 ಲಕ್ಷ ಮೌಲ್ಯದ ವಜ್ರಾಭರಣ ಹಾಗೂ 5 ಲಕ್ಷ ಮೌಲ್ಯದ 7 ಪುರಾತನ ವಸ್ತುಗಳು ದೊರೆತಿವೆ. ಪತ್ತೆಯಾದ ವಸ್ತುಗಳ ಮೌಲ್ಯ ಸುಮಾರು 1.5 ಕೋಟಿ ಎನ್ನಲಾಗಿದೆ.
ಜಯನಗರ ಡಿವಿಷನ್ಗೆ ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿರುವ ಚನ್ನಕೇಶವ ಅಪಾಟ್ರ್ಮೆಂಟ್ ಹಾಗೂ ಕಮರ್ಷಿಯಲ್ ಬಿಲ್ಡಿಂಗ್ಗಳಿಗೆ ವಿದ್ಯುತ್ ಸಂಪರ್ಕ ನೀಡಲು ಲಕ್ಷಲಕ್ಷ ಲಂಚ ಪಡೆಯುತ್ತಿದ್ದರು ಎಂಬ ಆರೋಪವಿದೆ. ಹೆಚ್ಚು ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಕಾರಣ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಚನ್ನಕೇಶವಗೆ ಸೇರಿದ ಏಳು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈತ ಐಷಾರಾಮಿ ಅಪಾಟ್ರ್ಮೆಂಟ್ನಲ್ಲಿ ವಾಸ ಮಾಡುತ್ತಿದ್ದಾನೆ.
ಯಾದಗಿರಿ ಡಿಎಚ್ಓ ಆಗಿರುವ ಡಾ. ಪ್ರಭುಲಿಂಗ್ ಮಾನಕರ್ ಅವರ ಕಲಬುರಗಿ ನಗರದ ಕರುಣೇಶ್ವರ ಕಾಲೋನಿಯಲ್ಲಿರುವ ನಿವಾಸದ ಮೇಲೆ, ಯಾದಗಿರಿ ನಗರದ ಬಾಡಿಗೆ ಮನೆ ಮೇಲೆ ಲೋಕಾಯುಕ್ತ ಡಿವೈಎಸ್ ಪಿ ಹಣಮಂತರಾಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಅವರ ಮೇಲಿದೆ.
ಕುಂಬಳಗೋಡಿನ ಕಣಿಮಿಣಿಕೆ ಹಾಲು ಉತ್ಪಾದಕ ಕೋ ಆಪರೇಟಿವ್ ಸೊಸೈಟಿ ಚೀಫ್ ಎಕ್ಸಿಕ್ಯುಟಿವ್ ಹೆಚ್.ಎಸ್ ಕೃಷ್ಣಮೂರ್ತಿ,ಬೆಸ್ಕಾಂ ವಿಜಿಲೇನ್ಸ್ ಇಇ ಟಿ.ಎನ್ ಸುಧಾಕರ್ ರೆಡ್ಡಿ,ಕೊಪ್ಪಳ ಗಂಗಾವತಿ ಆನೆಗುಂದಿ ಡಿವಿ ಆರ್ಎಫ್ಒ ಬಿ.ಮಾರುತಿ, ಬಳ್ಳಾರಿಯ ಹಿರಿಯ ಭೂವಿಜ್ಞಾನಿ ಚಂದ್ರಶೇಖರ ಹಿರೇಮನಿ,ಬೀದರ್ ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯದ ನಿವೃತ್ತ ವೈಸ್ ಚಾನ್ಸಲರ್ ಎಚ್.ಡಿ ನಾರಾಯಣ ಸ್ವಾಮಿ,ಕರ್ನಾಟಕ ಪಶುವೈದ್ಯಕೀಯ ಮೀನುಗಾರಿಕೆ ವಿಶ್ವವಿದ್ಯಾಲಯದ ಹಣಕಾಸು ಕಚೇರಿಯ ನಿಯಂತ್ರಕ ಸುನೀಲ್ ಕುಮಾರ್ ,ನಂಜನಗೂಡು ಸರ್ಕಾರಿ 1ನೇ ಡಿವಿ ಕಾಲೇಜಿನ ಉಪನ್ಯಾಸಕ ಮಹದೇವ ಸ್ವಾಮಿ, ತಿಮ್ಮರಾಜಪ್ಪ ಸ/ಓ ಲೇಟ್ ಗುರಪ್ಪ, ಎಕ್ಸಿಕ್ಯೂಟಿವ್ ಇಂಜಿನಿಯರ್, ಕೆಆರ್ಐಡಿಎಲ್, ವಿಜಯಪುರ ಜಿಲ್ಲೆ.
ಪ್ರಸ್ತುತ ಬೆಳಗಾವಿಯಲ್ಲಿ ಇಇ,ಮುನೇಗೌಡ ಎನ್.ಎಸ್, ಓ ನಾರಾಯಣಸ್ವಾಮಿ ಸಿ ಪಿ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ರಾಮನಗರ,ಬಸವರಾಜ ಸ/ಓ ಚನ್ನಬಸಯ್ಯ ಮಳಿಮಠ, ಸ್ಟೋರ್ ಕೀಪರ್, ಗ್ರೇಡ್-2, ಓ & ಎಂ ಸಿಟಿ ವಿಭಾಗ ಅಂಗಡಿ, ಹೆಸ್ಕಾಂ, ಹುಬ್ಬಳ್ಳಿ, (ನಿವೃತ್ತ) ಅವರ ಕಚೇರಿ ಮನೆ ಇನ್ನಿತರ ಆಸ್ತಿ-ಪಾಸ್ತಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಇತ್ತೀಚೆಗೆ ತಾನೇ ಲೋಕಾಯುಕ್ತ ತಂಡಗಳು 11 ಅಧಿಕಾರಿಗಳ ಮನೆಗಳಿಗೆ ದಾಳಿ ನಡೆಸಿದ್ದವು. ಹಬ್ಬದ ವೇಳೆಯಲ್ಲಿ ಅಭರಣ ವ್ಯಾಪಾರಿಗಳು ಹಾಗೂ ಅಧಿಕಾರಿಗಳ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಕೂಡ ದಾಳಿ ನಡೆಸಿತ್ತು.