ಬೆಳಗಾವಿ: ನಗರಾಭಿವೃದ್ಧಿ ಕೋಶದ ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದೆ.ಲೋಕಾಯುಕ್ತ ದಾಳಿಯಲ್ಲಿ ಒಟ್ಟು 14 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದ್ದು, ಸ್ವತಹ ಅಧಿಕಾರಿಗಳೇ ಅಕ್ರಮ ಆಸ್ತಿ ಕಂಡು ತಬ್ಬಿಬ್ಬಾಗಿದ್ದಾರೆ. ಬೆಳಗಾವಿ ನಗರದ ಆಂಜನೇಯ ನಗರ ಸೇರಿದಂತೆ ಏಳು ಕಡೆ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. DUDC ಎಇಇ ಅಜಯಸಿಂಗ್ ರಜಪೂತ ಮನೆಯ ಮೇಲೆ ದಾಳಿ ಮಾಡಲಾಗಿತ್ತು. ಬೆಳಗಾವಿಯಲ್ಲಿ ಮೂರು ಮನೆ, ಕಚೇರಿ, ಬ್ಯಾಂಕ್ ಲಾಕರ್ ಪರಿಶೀಲನೆ ನಡೆಸಿದ ವೇಳೆ ಸವದತ್ತಿ, ಹುಕ್ಕೇರಿ, ಹುಬ್ಬಳ್ಳಿಯಲ್ಲಿ 18 ನಿವೇಶನ ಪತ್ತೆಯಾಗಿದ್ದರೆ ಮನೆಯಲ್ಲಿ 5.96 ಕೆಜಿ ಮೌಲ್ಯದ ಚಿನ್ನ, 5 ಕೆಜಿ ಬೆಳ್ಳಿ, 3.12 ಕೋಟಿ ಡೆಪಾಸಿಟ್, ಐಷಾರಾಮಿ ಕಾರು, ಬೈಕ್ಗಳು ಪತ್ತೆಯಾಗಿವೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಹಿನ್ನೆಲೆ ತನಿಖೆ ಮುಂದುವರಿದಿದ್ದು, ಬ್ಯಾಂಕ್ ಲಾಕರ್ ಪರಿಶೀಲನೆ ಬಾಕಿ ಇದೆ. ಲಾಕರ್ ಪರಿಶೀಲನೆ ವೇಳೆ ಮತ್ತಷ್ಟು ಅಕ್ರಮ ಆಸ್ತಿ ಪತ್ತೆ ಸಾಧ್ಯತೆ ಇದ್ದು, ಕಳೆದ ಬುಧವಾರ(ಏ.07) ಅಧಿಕಾರಿಯ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು.



