ಚಿಕ್ಕಬಳ್ಳಾಪುರ: ಭಗವಾನ್ ಮಹಾವೀರರ ಬೋಧನೆಗಳು ನಮಗೆ ಕರುಣೆ, ಅಹಿಂಸೆ ಮತ್ತು ಸದಾಚಾರದ ಜೀವನವನ್ನು ನಡೆಸಲು ಪ್ರೇರಣೆ ನೀಡುತ್ತವೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕ ಅಧಿಕಾರಿ ಅರುಂಧತಿ ಅವರು ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವಾನ್ ಮಹಾವೀರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾವೀರ ಜಯಂತಿ ಜೈನ ಧರ್ಮದ ಪ್ರಮುಖ ಹಬ್ಬವಾಗಿದೆ, ಇದು 24ನೇ ಮತ್ತು ಕೊನೆಯ ತೀರ್ಥಂಕರರಾದ ಭಗವಾನ್ ಮಹಾವೀರರ ಜನ್ಮದಿನವನ್ನು ಸಂಭ್ರಮಿಸಿ ಆಚರಣೆ ಮಾಡುವ ದಿನವಾಗಿದೆ. ಭಗವಾನ್ ಮಹಾವೀರರು ಅಹಿಂಸೆ, ಸತ್ಯ, ಅಸ್ತೇಯ (ಕಳ್ಳತನ ಮಾಡದಿರುವುದು), ಬ್ರಹ್ಮಚರ್ಯ ಮತ್ತು ಅಪರಿಗ್ರಹ (ಒಡವೆಗಳಿಗೆ ಆಸೆಪಡದಿರುವುದು) ಎಂಬ ಐದು ಸಂದೇಶಗಳನ್ನು ಉಪದೇಶಿಸಿದರು. ಅವರ ಅನುಯಾಯಿಗಳು ಪ್ರಾರ್ಥನೆ, ಉಪವಾಸ, ದಾನ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಇಂದು ಜಯಂತಿ ಆಚರಣೆ ಮಾಡಲಾಗಿದೆ ಎಂದರು
ಸಮುದಾಯದ ಮುಖಂಡರಾದ ಎಸ್.ಎನ್. ಅಮೃತ್ ಕುಮಾರ್ ಅವರು ಭಗವಾನ್ ಮಹಾವೀರರ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಾ, ವರ್ಧಮಾನನಾಗಿ ಜನಿಸಿದ ಭಗವಾನ್ ಮಹಾವೀರರು ಬಿಹಾರದ ರಾಜಮನೆತನದಿಂದ ಬಂದವರು ಮತ್ತು ತಮ್ಮ ಯೌವನದಿಂದಲೇ ಆಧ್ಯಾತ್ಮಿಕ ಒಲವುಗಳನ್ನು ಬೆಳೆಸಿಕೊಂಡರು. ಐಷಾರಾಮಿ ಜೀವನದ ಮಡಿಲಲ್ಲಿ ಬೆಳೆದ ಅವರು ಆಳವಾದ ಆತ್ಮಾವಲೋಕನ ಮತ್ತು ತಮ್ಮ ಸುತ್ತಲಿನ ನಿದರ್ಶನಗಳು ಹಾಗೂ ಜನಸಾಮಾನ್ಯರ ದುಃಖಗಳ ಸೂಕ್ಷ್ಮತೆಯನ್ನು ಅರಿತು ಕೊಂಡಿದ್ದರು, ಇದು ಅವರ ಜ್ಞಾನೋದಯದ ಅನ್ವೇಷಣೆಯನ್ನು ಹುಟ್ಟುಹಾಕಿತು. ವಿಶೇಷ ಪಾಲನೆಯ ಹೊರತಾಗಿಯೂ, ಮಹಾವೀರರು ತಪಸ್ವಿ ಅಭ್ಯಾಸಗಳು ಮತ್ತು ತಾತ್ವಿಕ ವಿಚಾರಣೆಗಳಲ್ಲಿ ತೀವ್ರ ಆಸಕ್ತಿಯನ್ನು ತೋರಿಸಿದರು, ಇದು ಆಧ್ಯಾತ್ಮಿಕ ನಾಯಕನಾಗಿ ಬೆಳೆಸಿತು. ತಮ್ಮ 30 ನೇ ವಯಸ್ಸಿನಲ್ಲಿ ಲೌಕಿಕ ಆಸ್ತಿಗಳನ್ನು ತ್ಯಜಿಸಿ, ಜನನ ಮತ್ತು ಮರಣದ ಚಕ್ರದಿಂದ ಬಿಡಿಸಿಕೊಳ್ಳಲು ಜ್ಞಾನೋದಯ ಮತ್ತು ವಿಮೋಚನೆಯನ್ನು ಅರಸುತ್ತಾ ಆಳವಾದ ಆಧ್ಯಾತ್ಮಿಕ ಅನ್ವೇಷಣೆಯನ್ನು ಕೈಗೊಂಡರು. ತಮ್ಮ ರಾಜ ಸ್ಥಾನಮಾನವನ್ನು ತ್ಯಜಿಸಿ ಕಠಿಣ ಪರಿಶ್ರಮ, ಸರಳತೆ ಮತ್ತು ಕಠಿಣ ಸ್ವಯಂ-ಶಿಸ್ತಿನ ಜೀವನವನ್ನು ಸ್ವೀಕರಿಸಿದರು. ಮಹಾವೀರರ ಪ್ರಯಾಣವು ಅವರನ್ನು ಕಾಡುಗಳು ಮತ್ತು ಪರ್ವತಗಳ ಆಳಕ್ಕೆ ಕರೆದೊಯ್ಯಿತು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಲಾವಿಧ ಮಹೇಶ್ ಕುಮಾರ್ ಸಂಗಡಿಗರಿಂದ ನಡೆದ ಗೀತ ಗಾಯನ ಗನಮ ಸೆಳೆಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಸಮುದಾಯದ ಮುಖಂಡರಾದ ಕಾಂತಿಲಾಲ್ ಜಿ, ಉತ್ತಮ್ ಚಂದ್ ಕೊಠಾರಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಭಗವಾನ್ ಮಹಾವೀರರ ಬೋಧನೆಗಳು ಜೀವನಕ್ಕೆ ಪ್ರೇರಣೆ ನೀಡುತ್ತವೆ ಜಿಲ್ಲಾಡಳಿತ ವತಿಯಿಂದ ಭಗವನ್ ಮಹಾವೀರ ಜಯಂತಿ ಆಚರಣೆಯಲ್ಲಿ ಅರುಂಧತಿ ಅಭಿಪ್ರಾಯ



