ಮಾಗಡಿ: ತಾಲ್ಲೂಕಿನ ಕುದೂರು ಹೋಬಳಿಯ ಮಾದಿಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಕನ್ನಸಂದ್ರ ಕಾಲೋನಿ ರವಿಕುಮಾರ್ ಇಂದು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಜನಾನುರಾಗಿ ಜನ ಸೇವಕರಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಮೂಲಕ ಸಾಮಾನ್ಯ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.
ಈ ಕುರಿತು ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು ನಮ್ಮದು ರೈತಾಪಿ ಕುಟುಂಬವಾಗಿದ್ದು ನಮ್ಮ ತಂದೆ ಬೈಲಪ್ಪ ಅವರು ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣರವರ ಅಪ್ಪಟ ಅಭಿಮಾನಿಯಾಗಿದ್ದವರು.ಒಂದು ಭಾರಿ ಮಂಡಲ್ ಪಂಚಾಯತಿ ಸದಸ್ಯರಾಗಿ ರಾಜಕೀಯವಾಗಿ ಸಾಮಾಜಿಕ ಸೇವೆ ಮಾಡಿದವರಾಗಿದ್ದರು.ಆದರೆ ರಾಜಕೀಯ ನಮ್ಮ ತಂದೆ ಯಾವುದೇ ಆರ್ಥಿಕತೆಗೆ ಮನ್ನಣೆ ನೀಡದೆ ಜನ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದರು.
ನಮ್ಮ ಕುಟುಂಬ ಬಡತನದ ರೈತಾಪಿ ಕುಟುಂಬವಾಗಿದ್ದು ನಾನು ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಲು ಸಾಧ್ಯವಾಗಲಿಲ್ಲ.ನಾನು ಒಬ್ಬ ಲಾರಿ ಕ್ಲೀನರ್ ಕೆಲಸಕ್ಕೆ ಸೇರಿಕೊಂಡು ನಮ್ಮ ಕುಟುಂಬದ ತುತ್ತಿನ ಚೀಲವನ್ನು ತುಂಬಿಸಿಕೊಳ್ಳುತ್ತಿದ್ದೆ.ನಾನು ಕೂಡಾ ಆರ್ಥಿಕವಾಗಿ ಸಬಲರಾಗಬೇಕೆಂದು ಒಂದು ಲಾರಿಯನ್ನು ಖರೀದಿಸುವ ಮುಖೇನ ಒಂದು ಹಂತದ ಬದುಕನ್ನು ಕಟ್ಟಿಕೊಂಡೆ.
ನಮ್ಮ ತಂದೆಯ ರಾಜಕೀಯ ಸೇವೆಯನ್ನು ಮುಂದುವರೆಸಬೇಕು ಎಂದರಿತು ಸಾಮಾನ್ಯ ಜನರಿಗೆ ವಿಧವಾ, ವೃದ್ದಾಪ್ಯ ವೇತನ, ಅಂಗವಿಕಲರಿಗೆ ಸರಕಾರದಿಂದ ಬರುವಂತಹ ಅನುದಾನವನ್ನು ಕೊಡಿಸುವ ಕೆಲಸ ಮಾಡಿದೆ.ಇದನ್ನು ಗುರುತಿಸಿ ನಮ್ಮ ಕನ್ನಸಂದ್ರ ಗ್ರಾಮದ ಯುವಕರು ಸಾಮಾನ್ಯರು ರೈತರು ನನ್ನನ್ನು 2010 ರಲ್ಲಿ ಗ್ರಾಪಂ ಸದಸ್ಯನನ್ನಾಗಿ ಮಾಡಿದರು.
ಬಳಿಕ 2015 ಮಹಿಳಾ ಮೀಸಲಾತಿಯಡಿಯಲ್ಲಿ ನಮ್ಮ ಶ್ರೀಮತಿಯನ್ನು ಸುಮಾರು 180 ಅತಿಹೆಚ್ಚಿನ ಲೀಡ್ ಮತಗಳನ್ನು ನೀಡುವ ಮೂಲಕ ಮತ್ತೆ ನಮ್ಮ ಶ್ರೀಮತಿ ಗ್ರಾಮ ಪಂಚಾಯತಿ ಸದಸ್ಯೆಯಾಗಲು ಆಶೀರ್ವದಿಸಿದರು.2010 ರಿಂದ ನಮ್ಮ ವಾರ್ಡಿನಲ್ಲಿ ಅಭಿವೃದ್ಧಿಯೇ ಕಾಣದ ದುಸ್ಥಿತಿಯಲ್ಲಿ ಸುಮಾರು ನೂರು ಮನೆಗಳಿರುವ ಕನ್ನಸಂದ್ರ ವಾರ್ಡಿನಲ್ಲಿ ರಸ್ತೆ ಚರಂಡಿ ಬೀದಿದೀಪ ನೀರಿನ ವ್ಯವಸ್ತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ನಮ್ಮ ವಾರ್ಡಿನ ಜನಮೆಚ್ಚುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ರವಿಕುಮಾರ್ ವಿವರಿಸಿದರು.
ಪ್ರಸ್ತುತ ಹಾಲಿ ಸಂಸದರಾದ ಡಿ.ಕೆ.ಸುರೇಶ್ ಅವರ ಅನುದಾನದಡಿಯಲ್ಲಿ ಒಂದು ಕೋಟಿ ವಿಶೇಷ ಅನುದಾನ ನೀಡಿದ್ದಾರೆ.ಈ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ರಸ್ತೆ ಚರಂಡಿ ಕಾಮಗಾರಿ ಮಾಡಲಾಗುವುದು.ಶಾಸಕ ಬಾಲಕೃಷ್ಣ ಅವರ ಅಣತಿಯಂತೆ ಪ್ರಸ್ತುತ ನಾನು 2023 ರಲ್ಲಿ ಕುದೂರು ಮತ್ತು ತಿಪ್ಪಸಂದ್ರ ಎಸ್.ಸಿ.ಘಟಕದ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷನಾಗಿ ನೇಮಕವಾಗಿದ್ದು ಪಕ್ಷ ಸಂಘಟನೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮದೇ ವಿಶೇಷ ತಂಡವನ್ನು ರಚಿಸಿಕೊಂಡು ಪ್ರತಿ ಮನೆಮನೆಗೂ ತೆರಳಿ ಹೆಚ್.ಸಿ.ಬಾಲಕೃಷ್ಣ ಅವರ ಗೆಲುವಿಗೆ ಶ್ರಮಿಸಿದ್ದೇನೆ.
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಡಿ.ಕೆ.ಸುರೇಶ್ ಅವರ ಅಡಳಿತ ಕಾರ್ಯ ವೈಖರಿಯನ್ನು ಮೆಚ್ಚಿಕೊಂಡಿದ್ದು ಡಿ.ಕೆ.ಸುರೇಶ್ ಅವರು ನಾನು ಸಂಸದನಲ್ಲ ಒಬ್ಬ ಗ್ರಾಪಂ ಸದಸ್ಯ ಎಂಬ ಭಾವನೆಯಡಿಯಲ್ಲಿ ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಭೇಟಿ ನೀಡುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ತಾವೊಬ್ಬ ಕ್ರಿಯಾಶೀಲ ಸಂಸದರು ಎಂಬ ಸ್ಪಷ್ಟವಾದ ಸಂದೇಶ ರವಾನಿಸಿದ್ದಾರೆ.ಇಂತಹ ಸಾಮಾಜಿಕ ಕಳಕಳಿಯ ಸಂಸದರಾದ ಡಿ.ಕೆ.ಸುರೇಶ್ ಅವರ ಗೆಲುವಿಗೆ ನಾನು ಗ್ರಾಪಂ ಚುನಾವಣೆಗೆ ಸ್ಪರ್ದೆ ಮಾಡಿದ್ದೇನೆ ಎಂದು ಭಾವಿಸಿ ಒಂದೊಂದು ಮತಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಶಾಸಕ ಹೆಚ್.ಸಿ.ಬಾಲಕೃಷ್ಣ ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ ಅವರ ಮಾರ್ಗದರ್ಶನದಲ್ಲಿ ಡಿ.ಕೆ.ಸುರೇಶ್ ಗೆಲುವಿಗೆ ಹಗಲಿರುಳು ಶ್ರಮಿಸುತ್ತೇನೆ ಎಂದು ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ನಾನೂ ಕೂಡಾ ಕುದೂರು ಜಿಪಂ ಸದಸ್ಯ ಸ್ಥಾನದ ಆಕಾಂಕ್ಷಿಯಾಗಿದ್ದು ಕುದೂರು ಭಾಗದ ಯುವಕರು ಸಾಮಾನ್ಯ ಜನರ ಆಶಯದಂತೆ ಸ್ಪರ್ಧಿಸುವ ಇಚ್ಚಾಶಕ್ತಿಯನ್ನು ಹೊಂದಿದ್ದೇನೆ.ಜಿಪಂ ಸ್ಥಾನಕ್ಕೆ ಎಸ್.ಸಿ.ಮೀಸಲಾತಿ ಬಂದರೆ ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡುತ್ತಾರೆ ಎಂಬ ಆತ್ಮವಿಶ್ವಾಸವಿದೆ.ಒಂದು ವೇಳೆ ಮೀಸಲಾತಿ ಬಾರದಿದ್ದರೆ ನಮ್ಮ ಪಕ್ಷದ ನಾಯಕರು ಯಾರಿಗೆ ಜಿಪಂ ಸದಸ್ಯ ಸ್ಥಾನಕ್ಕೆ ಟಿಕೆಟ್ ನೀಡುತ್ತಾರೋ ಅವರ ಗೆಲುವಿಗೆ ಪ್ರಾಮಾಣಿಕತೆ ನಿಷ್ಠೆಯಿಂದ ಚುನಾವಣೆ ಮಾಡಲಾಗುವುದು ಎಂದು ರವಿಕುಮಾರ್ ಸ್ಪಷ್ಟಪಡಿಸಿದರು.