ಕೋಲಾರ: ಕೋಲಾರ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್. ನಾಗರಾಜ ಮತ್ತು ಕೋಲಾರ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಜಣ್ಣ ದೊಡ್ಡಹಸಾಳ ರವರೊಂದಿಗೆ ಕೋಲಾರ ತಾಲ್ಲೂಕು ಹೋಳೂರು ಹೋಬಳಿಯ ಗರುಡಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ ಇತ್ತೀಚಿನ ಮಳೆಯಿಂದ ಹಾಗೂ ಕೆರೆಗಳಿಗೆ ನೀರು ಬಿಟ್ಟ ಪರಿಣಾಮ ಕೆರೆ ಕೋಡಿ ಹೋಗಿ ಕೆರೆ ಕಟ್ಟೆ ಹೊಡೆದು ನೆನಮನಹಳ್ಳಿ, ಗರುಡಪಾಳ್ಯ, ಗೂಳಿಗಾನಹಳ್ಳಿ ಗ್ರಾಮಸ್ಥರು ಸುಮಾರು ೧೫೦-೨೦೦ಕ್ಕೂ ಹೆಚ್ಚು ಎಕರೆಗಳಲ್ಲಿ ಬೆಳೆದಿದ್ದ ಹಿಪ್ಪುನೇರಳೆ, ರಾಗಿ, ಟೊಮೊಟೊ, ಹೂಕೋಸು, ಗಡ್ಡೆಕೋಸು, ದನಕರುಗಳ ಆಹಾರವಾದ ಸೀಮೆ ಹುಲ್ಲು, ಮೆಣಸಿನ ಗಿಡ, ಕರಿಬೇವು ಗಿಡ ಇನ್ನೂ ಆನೇಕ ಬೆಳೆಗಳು ಅತಿಯಾದ ನೀರಿನ ಹೊಡೆತದಿಂದ ನಾಶವಾಗಿ ೩ ಗ್ರಾಮಗಳ ರೈತರಿಗೆ ಅಪಾರ ನಷ್ಟವಾಗಿರುತ್ತದೆ.
ಇದಕ್ಕೆ ಕೂಡಲೇ ಸ್ಪಂದಿಸಿದ ಕೋಲಾರ ಜಿಲ್ಲಾ ಮತ್ತು ತಾಲ್ಲೂಕು ಕೃಷಿಕ ಸಮಾಜಗಳ ಅಧ್ಯಕ್ಷರುಗಳು ದಿನಾಂಕ ೦೭.೧೦.೨೦೨೫ ರಂದು ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿ ಈ ಕೂಡಲೇ ಕೋಲಾರ ಜಿಲ್ಲಾಧಿಕಾರಿಗಳು, ಜಂಟಿ ಕೃಷಿ ನಿರ್ದೇಶಕರು, ತೋಟಗಾರಿಕೆ ಉಪ ನಿರ್ದೇಶಕರು, ಕೋಲಾರ ತಹಶೀಲ್ದಾರ್ ರವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರ ಕೊಡಿಸಿಕೊಡಲು ಸರ್ಕಾರಕ್ಕೆ ವರದಿ ಸಲ್ಲಿಸಲು ಒತ್ತಾಯಿಸಿದರು.
ಹಾಗೂ ಸರ್ವೇ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಇನ್ನೂ ಮುಂದಾದರೂ ಈ ರೀತಿ ಆಗದಂತೆ ತಡೆಗಟ್ಟಲು ಈಗ ಇರುವ ಕಾಲುವೆಯನ್ನು ದುರಸ್ಥಿ ಮಾಡಿಸಿಕೊಡಲು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಕೋಲಾರ ಜಿಲ್ಲಾ ಮತ್ತು ತಾಲ್ಲೂಕು ಕೃಷಿಕ ಸಮಾಜಗಳು ತೀರ್ಮಾನಿಸಿತು.ಸ್ಥಳದಲ್ಲಿ ಗೂಳಿಗಾನಹಳ್ಳಿ ಗ್ರಾಮಸ್ಥರಾದ ರಾಮಣ್ಣ, ಎಂ.ಪಿ.ಸಿ.ಎಸ್ ಅಧ್ಯಕ್ಷರಾದ ಶಂಕರೇಗೌಡ, ಮಾಜಿ ಅಧ್ಯಕ್ಷ ಚೌಡಪ್ಪ, ಮಣಿಘಟ್ಟ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಾರೆಡ್ಡಿ, ಮಾಜಿ ಅಧ್ಯಕ್ಷ ಮಂಜುನಾಥ್, ಬಸಪ್ಪ, ಗರುಡಪಾಳ್ಯ ಗ್ರಾಮದ ರವೀಂದ್ರ, ರಾಮಪ್ಪ, ವಾಲೆಪ್ಪ, ಮಂಜುನಾಥ್, ಮುರಳಿ ಮುಂತಾದದವರು ಉಪಸ್ಥಿತರಿದ್ದರು.