ಕುಮಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಟಿ. ಗೌರಿಕುಮಾರ್ ಅವರು ನಿರ್ಮಿಸುತ್ತಿರುವ ಚಿತ್ರ ಪ್ರೀತಿಯ ಹುಚ್ಚ. ಮ್ಯೂಸಿಕಲ್ ಟ್ರ್ಯಾಜಿಡಿ ಲವ್ ಸ್ಟೋರಿ ಇದಾಗಿದ್ದು, ಕನ್ನಡ ಹಾಗೂ ತಮಿಳು ಸೇರಿ 2 ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದೆ. ತಮಿಳಲ್ಲಿ ಕಾದಲ್ ಪೈತ್ಯಂ ಶೀರ್ಷಿಕೆಯಡಿ ಬಿಡುಗಡೆಯಾಗುತ್ತಿದೆ.
ಈ ಚಿತ್ರಕ್ಕೆ ವಿ.ಕುಮಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.ಈ ಹಿಂದೆ ಗಾಯತ್ರಿ ಎಂಬ ಹಾರರ್ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದ ಕುಮಾರ್ ಅವರ ನಿರ್ದೇಶನದ ಎರಡನೇ ಚಿತ್ರವಿದು. 1998-99ರ ಸಮಯದಲ್ಲಿ ಹಾಸನದಲ್ಲಿ ನಡೆದ ನೈಜ ಘಟನೆಯೊಂದು ಈ ಚಿತ್ರಕ್ಕೆ ಪ್ರೇರಣೆ.
ಅಮಾಯಕ ಯುವತಿಯೊಬ್ಬಳ ದಾರುಣ ಕಥೆಯಿದಾಗಿದ್ದು, ಮದುವೆಯಾದ ಮೊದಲ ರಾತ್ರಿಯೇ ದುಷ್ಟರ ಜಾಲಕ್ಕೆ ಸಿಕ್ಕು ಮುಂಬೈನ ರೆಡ್ಲೈಟ್ ಏರಿಯಾಕ್ಕೆ ಮಾರಾಟವಾಗುವ ನಾಯಕಿಯ ಜೀವನ ಮುಂದೆ ಯಾವೆಲ್ಲ ತಿರುವು ಪಡೆದುಕೊಂಡಿತು, ಪ್ರೀತಿಸಿ ಮದುವೆಯಾದ ಪತ್ನಿಯನ್ನು ಕಳೆದುಕೊಂಡ ನಾಯಕ ಯಾವ ಸ್ಥಿತಿ ತಲುಪಿದ ಎಂಬುದನ್ನು ನಿರ್ದೇಶಕ ಕುಮಾರ್ ಅವರು ಪ್ರೀತಿಯ ಹುಚ್ಚ ಚಿತ್ರದ ಮೂಲಕ ಹೇಳಹೊರಟಿದ್ದಾರೆ.
ಈ ಚಿತ್ರಕ್ಕೆ ಬೆಂಗಳೂರು. ಮಂಡ್ಯ, ಚಿಕ್ಕಮಗಳೂರು, ಹಾಸನ, ಶ್ರವಣಬೆಳಗೊಳ ಹಾಗೂ ಮುಂಬೈನ ಕಾಮಾಟಿಪುರದಲ್ಲಿ 65 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಬರುವ ಶಿವರಾತ್ರಿ ವೇಳೆಗೆ ಚಿತ್ರದ ಟೀಸರ್ ಹಾಗೂ ಲಿರಿಕಲ್ ಸಾಂಗ್ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ. ಈ ಚಿತ್ರದಲ್ಲಿ ಸುಂಟಿಸ್ಟಾರ್ ವಿಜಯ್ ನಾಯಕನಾಗಿ ನಟಿಸಿದ್ದು, ಮುಂಬೈ ಮೂಲದ ಕುಂಕುಮ್ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ಶಿವಯೋಗಿ ಗುತ್ತೆಮ್ಮನವರ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ 4 ಹಾಡುಗಳಿದ್ದು, ಜೆ.ಎನ್. ರಂಗರಾಜನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುನಿಲ್ ಕೆ.ಆರ್.ಎಸ್. ಅವರ ಛಾಯಾಗ್ರಹಣ, ಪ್ರವೀಣ್ ವಿಷ್ಣು ಅವರ ಸಂಕಲನ ಈ ಚಿತ್ರಕ್ಕಿದೆ. ಉಳಿದ ತಾರಾಗಣದಲ್ಲಿ ಲೆಕ್ಕಾಚಾರ ಚಂದ್ರು, ದುಬೈ ರಫೀಕ್, ಉಮೇಶ್ ಪುಂಗ, ಜೋಗಿ ನಾಗರಾಜ್, ಪೂರ್ಣಿಮಾ, ವಿ.ಭಾಸ್ಕರರಾಜ್, ನಟ, ಕಿಲ್ಲರ್ ವೆಂಕಟೇಶ್, ಭಜರಂಗಿ ರಾಜು, ಮಹದೇವಸ್ವಾಮಿ. ಗೀತಾ, ಸುನಿತಾ, ಪ್ರಮೋದ್, ಮಹದೇವ, ಆನಂದ್ ಮುಂತಾದವರಿದ್ದಾರೆ. ಪ್ರೀತಿಯ ಹುಚ್ಚ ಚಿತ್ರವನ್ನು ಯುಗಾದಿ ನಂತರ ಏಪ್ರಿಲ್ ವೇಳೆಗೆ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ.