ಐಪಿಎಲ್ ನ ಡಾರ್ಕ್ ಹಾರ್ಸ್ ಗಳೆಂದೇ ಪರಿಗಣಿತವಾಗಿರುವ ಎರಡು ತಂಡಗಳಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಇದೀಗ ಸತ್ವಪರೀಕ್ಷೆಗೆ ಸಜ್ಜಾಗಿವೆ. ಲಖನೌ ತಂಡದಿಂದ ಹೊರಬಂದು ಕಳೆದ ಬಾರಿ ಮಿಂಚಿದ್ದ ಕನ್ನಡಿಗ ಕೆಎಲ್ ರಾಹುಲ್ ಅವರೆ ಮೇಲೆ ಡೆಲ್ಲಿಗೆ ಹೆಚ್ಚಿನ ನಿರೀಕ್ಷೆಗಳಿವೆ. ಮತ್ತೊಂದೆಡೆ ಕಳೆದ ವರ್ಷ ಇನ್ನಿಲ್ಲದ ವೈಫಲ್ಯ ಕಂಡಿದ್ದ ನಾಯಕ ರಿಷಬ್ ಪಂತ್ ಅವರಿಂದ ಈ ಸೀಸನ್ ನಲ್ಲಿ ಭರ್ಜರಿ ಶುಭಾರಂಭವನ್ನು ಲಖನೌ ಸೂಪರ್ ಜೈಂಟ್ಸ್ ಎದುರು ನೋಡುತ್ತಿದೆ.ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಹಳಷ್ಟು ಬದಲಾವಣೆ ಆಗುವ ಸಾಧ್ಯತೆಗಳಿವೆ. ಈಗಾಗಲೇ ತಿಳಿಸಿರುವಂತೆ ಕೆಎಲ್ ರಾಹುಲ್ ಅವರು ವಿಕೆಟ್ ಕೀಪಿಂಗ್ ನೊಂದಿಗೆ ಆರಂಭಿಕನ ಹೊಣೆಯನ್ನೂ ನಿರ್ವಹಿಸಲಿದ್ದಾರೆ. ಆದರೆ ಅವರ ಜೊತೆ ಆರಂಭಿಕನಾಗಿ ಕಣಕ್ಕಿಳಿಯುವ ಮತ್ತೊಬ್ಬ ಬ್ಯಾಟರ್ ಯಾರು ಎಂಬ ಬಗ್ಗೆ ಖಾತ್ರಿಯಿಲ್ಲ. ಪೃಥ್ವಿ ಶಾ ಅವರು ಇಳಿದರೂ ಅಚ್ಚರಿಯೇನಿಲ್ಲ. ಕೆಎಲ್ ಉತ್ತಮ ಆರಂಭ ಒದಗಿಸಿದರೆ ಸ್ಟಬ್ಸ್, ಮಿಲ್ಲರ್, ಕರುಣ್ ನಾಯರ್ ಅವರು ಇನ್ನಿಂಗ್ಸ್ ಬೆಳೆಸಿಯಾರು ಎಂಬ ನಂಬಿಕೆ ಡೆಲ್ಲಿ ತಂಡದ ಮ್ಯಾನೇಜ್ ಮೆಂಟ್ ನದ್ದು. ಬೌಲಿಂಗ್ ವಿಭಾಗಕ್ಕೆ ಬಂದಲ್ಲಿ ಮುಖೇಶ್ ಕುಮಾರ್, ಟಿ ನಟರಾಜನ್, ಕುಲ್ದೀಪ್ ಯಾದವ್, ನಾಯಕ ಅಕ್ಷರ್ ಪಟೇಲ್ ಅವರನ್ನು ಹೊಂದಿರುವ ವಿಭಾಗ ಬಲಿಷ್ಠವಾಗಿದೆ.ಇನ್ನು ಲಖನೌ ಸೂಪರ್ ಜಯಂಟ್ಸ್ ತಂಡ ಕೆಲವು ಬದಲಾವಣೆಯೊಂದಿಗೆ ಈ ಸೀಸನ್ ನಲ್ಲಿ ಕಣಕ್ಕಿಳಿಯುತ್ತಿದೆ. ಐಪಿಎಲ್ನಲ್ಲೇ ಅತ್ಯಂತ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿರುವ ತಂಡವಿದು. ಮಿಚೆಲ್ ಮಾರ್ಷ್, ಏಡೆನ್ ಮಾಕ್ರಮ್, ನಿಕೋಲಸ್ ಪೂರನ್ ಮತ್ತು ನಾಯಕ ರಿಷಭ್ ಪಂತ್ ಹೀಗೆ ಒಬ್ಬರಿಗಿಂತ ಒಬ್ಬರು ಘಟಾನುಘಟಿಗಳಿದ್ದರೂ ತಂಡ ಸಾಂಘಿಕವಾಗಿ ಆಡುವುದನ್ನು ರೂಢಿಸಿಕೊಳ್ಳಬೇಕಿದೆ.
ಹೇಗಿದೆ ಏಕನಾ ಕ್ರೀಡಾಂಗಣದ ಪಿಚ್?
ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿರುವ ಪಿಚ್ ಅನ್ನು ಅತ್ಯಂತ ಸಮತೋಲಿತ ಮೇಲ್ಮೈ ಎಂದು ಪರಿಗಣಿಸಲಾಗಿದೆ. ಪಿಚ್ ನಲ್ಲಿ ಉತ್ತಮ ಬೌನ್ಸ್ ಮತ್ತು ವೇಗವಿದೆ. ಸ್ಪಿನ್ನರ್ ಗಳೂ ಇಲ್ಲಿ ವಿಕೆಟ್ ಎತ್ತಬಹುದು.
ಏಕನಾ ಮೈದಾನದಲ್ಲಿ ಲಖನೌ- ಡೆಲ್ಲಿ ಬಿಗ್ ಫೈಟ್!



