ಚೆನ್ನೈ: ಆಕಾಶ್ ಮಧ್ವಾಲ್ ಸಹಿತ ಬೌಲರ್‍ಗಳ ನಿಖರ ದಾಳಿಯ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೇವಲ 101 ರನ್ನಿಗೆ ನಿಯಂತ್ರಿಸಿದ ಮುಂಬೈ ಇಂಡಿಯನ್ಸ್ ತಂಡವು ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ 81 ರನ್ನುಗಳ ಜಯ ಸಾಧಿಸಿದೆ.
ಈ ಗೆಲುವಿನಿಂದ ಮುಂಬೈ ಇಂಡಿಯನ್ಸ್ ಮೇ 26ರಂದು ನಡೆಯುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಮೇ 28ರಂದು ನಡೆಯುವ ಫೈನಲ್ ಹೋರಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಬ್ಯಾಟಿಂಗ್ ಕುಸಿತಕ್ಕೆ ಒಳಗಾಗಿ 16.3 ಓವರ್‍ಗಳಲ್ಲಿ 101 ರನ್ನಿಗೆ ಆಲೌಟ್ ಆದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೂಟದಿಂದ ಹೊರಬಿತ್ತು. ಈ ಮೊದಲು ಮುಂಬೈ ಇಂಡಿಯನ್ಸ್ ತಂಡವು 8 ವಿಕೆಟಿಗೆ 182 ರನ್ ಗಳಿಸಿತ್ತು.ಮುಂಬೈಯ ಆಕಾಶ್ ಮಧ್ವಾಲ್ ಅವರ ಅದ್ಭುತ ದಾಳಿಗೆ ಲಕ್ನೋ ನೆಲಕಚ್ಚಿತು. ಮಧ್ವಾಲ್ ತನ್ನ 3.3. ಓವರ್‍ಗಳ ದಾಳಿಯಲ್ಲಿ ಕೇವಲ 5 ರನ್ ನೀಡಿ ಐದು ಅಮೂಲ್ಯ ವಿಕೆಟ್ ಹಾರಿಸಿ ಭರ್ಜರಿ ಗೆಲುವಿಗೆ ಕಾರಣರಾದರು.
ಉತ್ತಮ ಆರಂಭಬೃಹತ್ ಮೊತ್ತ ಪೇರಿಸುವ ಉದ್ದೇಶದಿಂದಲೇ ಟಾಸ್ ಗೆದ್ದ ಮುಂಬೈ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕರಾದ ಇಶಾನ್ ಕಿಶನ್ ಮತ್ತು ನಾಯಕ ರೋಹಿತ್ ಶರ್ಮ ಭರ್ಜರಿಯಾಗಿ ಆಡಿ ಉತ್ತಮ ಆರಂಭ ನೀಡಿದರು.
ಮೊದಲ ಮೂರು ಓವರ್ ಮುಗಿದಾಗ ತಂಡ 28 ರನ್ ಗಳಿಸಿತ್ತು. ಮುಂದಿನೆರಡು ಓವರ್‍ಗಳಲ್ಲಿ ಆರಂಭಿಕರು ಪೆವಿಲಿಯನ್ ಸೇರಿಕೊಂಡಾಗ ಮುಂಬೈ ಆಘಾತ ಅನುಭವಿಸಿತು. ನಾಯಕ ರೋಹಿತ್ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್‍ಗೆ ಆಟ ಮುಗಿಸಿದರೆ ಇಶಾನ್ ಕಿಶನ್ ಮೂರು ಬೌಂಡರಿ ಬಾರಿಸಿದ್ದರು.
ಈ ಆಘಾತದಿಂದ ತಂಡವನ್ನು ಪಾರು ಮಾಡಲು ಸೂರ್ಯಕುಮಾರ್ ಯಾದವ್ ಮತ್ತು ಕ್ಯಾಮರಾನ್ ಗ್ರೀನ್ ಪ್ರಯತ್ನಪಟ್ಟರು. ಮೂರನೇ ವಿಕೆಟಿಗೆ ಅವರಿಬ್ಬರು 66 ರನ್ ಪೇರಿಸಿದರು. ಈ ಜೋಡಿ ಮುರಿದ ಬಳಿಕ ಲಕ್ನೋ ಮೇಲುಗೈ ಸಾಧಿಸಿತು. ನವೀನ್ ಉಲ್ ಹಕ್ ಮತ್ತು ಯಶ್ ಥಾಕೂರ್ ಅವರ ಅಮೋಘ ದಾಳಿಯಿಂದ ಮುಂಬೈಯ ರನ್‍ವೇಗಕ್ಕೆ ಕಡಿವಾಣ ಬಿತ್ತು ಮಾತ್ರವಲ್ಲದೇ ಕೆಲವು ವಿಕೆಟ್ ಉರುಳಿದವು. ನವೀನ್ ಉಲ್ ಹಕ್ 38 ರನ್ ನೀಡಿ 4 ವಿಕೆಟ್ ಉರುಳಿಸಿದರೆ ಯಶ್ ಥಾಕೂರ್ 34 ರನ್ನಿಗೆ 3 ವಿಕೆಟ್ ಪಡೆದರು.
Leave a Review