ಬೆಂಗಳೂರು: ಭಾರತ್ ಸ್ಕೌಟ್ ಅಂಡ್ ಗೈಡ್ಸ್ ನಲ್ಲಿ ಉತ್ತಮ ಹೆಸರು ಮಾಡಿದ್ದ ದಿವಂಗತ ಮಾದೇನಹಳ್ಳಿ ಮಲ್ಲಿಕಾರ್ಜುನಯ್ಯ ಅವರ ಕುರಿತ ಸಜ್ಜನಿಕೆಯ ಸಾಕಾರ ಮೂರ್ತಿ ಮಾದೇನಹಳ್ಳಿ ಮಲ್ಲಿಕಾರ್ಜುನಯ್ಯ ಎಂಬ ಪುಸ್ತಕ ಬಿಡುಗಡೆ ಸಮಾರಂಭವನ್ನು ಮಾದೇನ ಹಳ್ಳಿ ಮಲ್ಲಿಕಾರ್ಜುನಯ್ಯ ಪ್ರತಿಷ್ಠಾನವತಿಯಿಂದ ಬೆಂಗಳೂರಿನ ಸ್ಕೌಟ್ ಅಂಡ್ ಗೈಡ್ಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಮಾತನಾಡಿ, ಗ್ರಾಮೀಣ ಹಿನ್ನಲೆಯಿಂದ ಬಂದ ಎಂ.ಮಲ್ಲಿಕಾರ್ಜುನಯ್ಯ ಬಡತನದ ನಿಷ್ಠುರಗಳನ್ನು ಅನುಭವಿಸಿದ ಅವರು ಅನೇಕ ಪ್ರಭಾವಿ ಸಾಹಿತಿಗಳ ಸಂಪರ್ಕ ಹೊಂದಿದ್ದರು, ಅವರಲ್ಲಿದ್ದ ಶಿಸ್ತು,ದಕ್ಷತೆ, ಸಂಘಟನಾ ಕೌಶಲ್ಯ, ಕ್ರಿಯಾಶೀಲತೆ ಎಲ್ಲರೂ ಗಮನಿಸುವಂತಿದೆ ಎಂದು ಹೇಳಿದರು.
ತುಮಕೂರು ಸಿದ್ದಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮಿ ಮಾತನಾಡಿ, ಮಲ್ಲಿಕಾರ್ಜುನಯ್ಯ, ಸಿದ್ಧಗಂಗಾ ಶ್ರೀಗಳ ಪರಮ ಭಕ್ತರು, ಶಿಷ್ಯರಾಗಿದ್ದರು,ಅವರ ಮಾರ್ಗದರ್ಶನ ಹಾಗೂ ಅವರ ಆಶೀರ್ವಾದದಿಂದ ಬದುಕು ಕಟ್ಟಿಕೊಂಡವರು,ಸುತ್ತೂರು ಜಗದ್ಗುರುಗಳ ಆಸರೆಯ ಮುಂ ಬೆಳಗಿನಲ್ಲಿ ತಮ್ಮ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಹಿರಿಯ ಜಾನಪದ ವಿದ್ವಾಂಸ ನಾಡೋಜ .ಗೊ.ರು.ಚೆನ್ನಬಸಪ್ಪ ಮಾತನಾಡಿ, ಮಲ್ಲಿಕಾರ್ಜುನಯ್ಯ ಸ್ವತಃ ಸಾಹಿತಿಗಳಾಗಿರಲಿಲ್ಲ, ಆದರೆ ಅವರ ಸಂಪರ್ಕ ಇರುವುದೆಲ್ಲ ಸಾಹಿತ್ಯಶ್ರೇಷ್ಠರೊಂದಿಗೆ, ಯಾವುದೇ ವೇದಿಕೆ ಹತ್ತದಿದ್ದರೂ ಅಂತಹ ವೇದಿಕೆಗಳಿಗೆ ಆಧಾರವಾಗಿದ್ದರು ಎಂದರು.ಮಾಜಿ ಸಚಿವ ಪಿ.ಜಿ.ಆರ್ .ಸಿಂದ್ಯಾ ಮಾತನಾಡಿ, ಮಲ್ಲಿಕಾರ್ಜುನಯ್ಯ ವರ್ಗ ಬೇದವಿಲ್ಲದೇ ಎಲ್ಲರೊಂದಿಗೆ ಪ್ರೀತಿ,ವಿಶ್ವಾಸದಿಂದ ನಡೆದುಕೊಂಡಿದ್ದರು ಎಂದುಅವರ ನೆನಪು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಪರಿಸರ ತಜ್ಞ, ಉಲ್ಲಾಸ್ ಕಾರಂತ್ ದಂಪತಿಗಳು, ಮಾಜಿ ಸಚಿವ ಪಿ.ಜಿ.ಆರ್.ಸಿಂದ್ಯಾ, ನಿವೃತ್ತ ಅಧಿಕಾರಿಗಳಾದ ಯು.ಶ್ರೀಧರ್ ಭಟ್, ಡಿ.ಎಸ್.ಮೃತ್ಯುಂಜಯ, ಸ್ಕೌಟ್ ಅಂಡ್ ಗೈಡ್ಸ್ ನ ಕಾರ್ಯದರ್ಶಿ ಕೊಂಡಜ್ಜಿ ಬ.ಷಣ್ಮುಖಪ್ಪ, ಉಪಾಧ್ಯಕ್ಷ ಎಂ.ರೇಣುಕಾರಾಧ್ಯ, ಜಂಟಿ ಕಾರ್ಯದರ್ಶಿ ಭೈರಸಂದ್ರ ಸಿದ್ದಲಿಂಗಪ್ಪ ಮತ್ತಿತರರು ಭಾಗವಹಿಸಿದ್ದರು.