ಚಿಂತಾಮಣಿ: ತಾಲ್ಲೂಕಿನ ಆಲಂಬಗಿರಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸ ವವು ಕ್ರೋಧಿನಾಮ ಸಂವತ್ಸರದ ಚೈತ್ರ ಮಾಸದ ಹುಣ್ಣಿಮೆಯಂದು ವೈಭವವಾಗಿ ನಡೆಯಿತು. ಗೋವಿಂದ, ಗೋವಿಂದ ಎಂದು ಸ್ಮರಿಸುತ್ತಾ ಸಹಸ್ರಾರು ಭಕ್ತರು ಬೃಹತ್ರಥವನ್ನು ಎಳೆದು ಕೃತಾರ್ಥರಾದರು.
ರಥೋತ್ಸವದ ಅಂಗವಾಗಿ ದೇವಾಲ ಯವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಗಿನಿಂದಲೇ ದೂರದ ಊರಿನ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಕೈವಾರದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿಯನ್ನು ತಂದು, ಬ್ರಹ್ಮ ರಥೋತ್ಸವದ ಅಂಗವಾಗಿ ದೇವಾಲಯದ ಪ್ರಾಂಗಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ಗುರುಗಳ ವತಿಯಿಂದ ಶ್ರೀ ಕೃಷ್ಣ ಗಂಧೋತ್ಸವ ವಿಶೇಷ ಸೇವೆಯನ್ನು ಧರ್ಮಾಧಿಕಾರಿಗಳಾದ ಡಾ|| ಎಂ.ಆರ್. ಜಯರಾಮ್ ರವರು ಶ್ರದ್ದಾ ಭಕ್ತಿಗಳಿಂದ ನೇರವೇರಿಸಿದರು. ರಥೋತ್ಸವದ ಅಂಗವಾಗಿ ರಥಶಾಂತಿ, ರಥಪೂಜೆ, ಹೋಮ, ಪುರ್ಣಾಹುತಿಯನ್ನು ಸಮರ್ಪಿಸಲಾಯಿತು.
ಶ್ರೀಕೃಷ್ಣ ಗಂಧೋತ್ಸವ ಸೇವೆಯ ನಂತರ ಆಸ್ಥಾನ ಸೇವೆಯನ್ನು ನೇರವೇರಿಸಿ, ಅಲಂಕೃತಗೊಂಡಿದ್ದ ರಥಕ್ಕೆ ಶ್ರೀದೇವಿ, ಭೂದೇವಿ ಸಮೇತ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿಯ ಉತ್ಸವ ಮೂರ್ತಿಗಳನ್ನು ಉತ್ಸವ ಪಲ್ಲಕ್ಕಿಯಲ್ಲಿ ವೇದ ಘೋಷದಲ್ಲಿ ಕರೆತರಲಾಯಿತು. ರಥದಲ್ಲಿ ದೇವರನ್ನು ಇಡುತ್ತಿದ್ದಂತೆಯೇ ಗೋವಿಂದ ನಾಮಸ್ಮರಣೆ ಮುಗಿಲು ಮುಟ್ಟಿತು. ಭಕ್ತರು ತೇರು ಬಾಳೆಹಣ್ಣು, ಧವನ ತೇರಿಗೆ ಅರ್ಪಿಸಿ ಹರಿಕೆ ಸಲ್ಲಿಸಿದರು.
ಬಿಸಿಲಿನ ಬೇಗೆಯನ್ನು ತಣಿಸಲು ಗ್ರಾಮಸ್ಥರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಮಜ್ಜಿಗೆ, ಪಾನಕ ಕೊಸಂಬರಿ ಹಂಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಉಚಿತವಾಗಿ ನೀರಿನ ಪ್ಯಾಕೆಟ್ ಗಳನ್ನು ಸಹ ಹಂಚುತ್ತಿದ್ದರು. ನಾದಸ್ವರ, ತಮಟೆ ವಾದ್ಯದೊಂದಿಗೆ ರಥೋತ್ಸವವು ಸಾಗಿತು.ಸುಮಾರು 11 ದಿನಗಳು ನಡೆಯುವ ಈ ಬ್ರಹ್ಮ ರಥೋತ್ಸವ ಕೈಂಕರ್ಯಗಳು ಶ್ರೀರಾಮನವಮಿಯಿಂದ ಆರಂಭವಾಗಿ ಅಂಕುರಾರ್ಪಣೆ, ಧ್ವಜಾರೋಹಣ ಕಾರ್ಯಕ್ರಮಗಳು ನಡೆಯುತ್ತದೆ. ನಂತರದ ದಿನಗಳಲ್ಲಿ, ಸಿಂಹವಾಹನೋತ್ಸವ, ಹನುಮಂತ ವಾಹನೋತ್ಸವ, ಶೇಷವಾಹನೋತ್ಸವ, ಸೂರ್ಯಪ್ರಭವಾಹನೋತ್ಸವ, ಗರುಡೋತ್ಸವ, ಗಜವಾಹನೋತ್ಸವ ಹೀಗೆ ಹಲವಾರು ವಿಶೇಷವಾಹನಗಳ ಸೇವೆಯನ್ನು ಸ್ವಾಮಿಗೆ ಸಲ್ಲಿಸಲಾಯಿತು.
ಗಿರಿಪ್ರದಕ್ಷಿಣೆ: ಆಲಂಬಗಿರಿ ದೇವಾಲ ಯದಿಂದ ಸುಮಾರು 1 ಕಿ.ಮೀ ದೂರದ ಲ್ಲಿರುವ ಆಲಂಬಗಿರಿ ಬೆಟ್ಟದ ಪ್ರಕೃತಿಯ ತೊಪ್ಪಲಿನಲ್ಲಿ ಹುಣ್ಣಿಮೆ ಪ್ರಯುಕ್ತ ಸಂಕೀ ರ್ತನಾ ಗಿರಿಪ್ರದಕ್ಷಿಣೆ ಕಾರ್ಯಕ್ರಮ ನಡೆ ಯಿತು. ಹುಣ್ಣಿಮೆ ಗಿರಿಪ್ರದಕ್ಷಿಣೆಯಲಿ ಕೈ ವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ|| ಎಂ.ಆರ್.ಜಯರಾಮ್ ಭಾಗವಹಿಸಿದ್ದರು. ಅವರೊಂದಿಗೆ ಹಲವಾರು ಭಕ್ತರು ಗಿರಿಪ್ರದಕ್ಷಿಣೆ ಮಾಡಿದರು.