ಬೆಂಗಳೂರು: ಕರ್ನಾಟಕದ ಖ್ಯಾತ ಮಹಾರಾಜ ಕಪ್ ಟಿ20 ಕ್ರಿಕೆಟ್ ಕೂಟದ 3ನೇ ಆವೃತ್ತಿ ನಡೆಯುವ ದಿನಾಂಕಗಳನ್ನು, ಶುಕ್ರವಾರ ಕೆಎಸ್ಸಿಎ ಅಧಿಕೃತವಾಗಿ ಪ್ರಕಟಿಸಲಿದೆ. ಸದ್ಯದ ಅಂದಾಜಿನ ಪ್ರಕಾರ ಆ.15ರಂದು ಕೂಟ ಆರಂಭವಾಗಲಿದೆ.
ಅದಕ್ಕೂ ಮೊದಲು ಅಂದರೆ ಮುಂದಿನ ತಿಂಗಳು ಜು. 25ರಂದು ಆಟಗಾರರ ಹರಾಜು ನಡೆಯುವ ನಿರೀಕ್ಷೆಯಿದೆ.2022ರಲ್ಲಿ ಮೊದಲ ಬಾರಿ ಕೂಟ ನಡೆದಿತ್ತು. ಅದರಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ಚಾಂಪಿಯನ್ ಆಗಿದ್ದರೆ, ಬೆಂಗಳೂರು ಬ್ಲಾಸ್ಟರ್ಸ್ ರನ್ನರ್ ಅಪ್ ಆಗಿತ್ತು. 2023ರಲ್ಲಿ ಹುಬ್ಬಳ್ಳಿ ಟೈಗರ್ಸ್ ಚಾಂಪಿಯನ್ ಆಗಿದ್ದರೆ, ಮೈಸೂರು ವಾರಿಯರ್ಸ್ ರನ್ನರ್ ಅಪ್ ಆಗಿತ್ತು. ಕಳೆದು ಎರಡು ಆವೃತ್ತಿಯ ಕಡೆಕಡೆಯ ಹಂತದಲ್ಲಿ ಉತ್ತಮ ಪೈಪೋಟಿ ಕಂಡುಬಂದಿತ್ತು.
ಮಹಾರಾಜ ಕಪ್ಗಿಂತ ಮುನ್ನ ರಾಜ್ಯದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ನಡೆಯುತ್ತಿತ್ತು. ಅದನ್ನು ಕೆಪಿಎಲ್ ಎಂದು ಕರೆಯಲಾಗುತ್ತಿತ್ತು. ಕೆಪಿಎಲ್ನಲ್ಲಿ ಮೋಸದಾಟ ಕೇಳಿಬಂದ ಕಾರಣ ಆ ಕೂಟವೇ ನಿಂತುಹೋಯಿತು. ಪ್ರಸ್ತುತ ಮಹಾರಾಜ ಕಪ್ ರೂಪ ತಾಳಿರುವ ಅದು, 3ನೇ ಆವೃತ್ತಿಗೆ ಸಿದ್ಧವಾಗಿದೆ.